ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಅಕ್ರಮ: ಬೇಕಾಬಿಟ್ಟಿ ಆರೋಪ ಸರಿಯಲ್ಲ -ಸಚಿವ ಕಾರಜೋಳ

Last Updated 3 ಮೇ 2022, 4:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ (ಪಿಎಸ್‌ಐ) ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ಬೇಕಾಬಿಟ್ಟಿ ಆರೋಪ ಮಾಡುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೇಮಕಾತಿ ಅಕ್ರಮ ಬಯಲಿಗೆಳೆದು ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಬಳಿಕ ಅಕ್ರಮದಲ್ಲಿ ಯಾರ ಪಾತ್ರವಿದೆ ಎಂಬುದು ತಿಳಿಯಲಿದೆ. ಹಿಂದೆ ಆಗಿರುವ ನೇಮಕಾತಿಗಳಲ್ಲೂ ಹಗರಣಗಳು ಆಗಿವೆ. ಆದರೆ ಕಾಂಗ್ರೆಸ್‌ನವರು ಇದೀಗ ಬಿಜೆಪಿ ಕಡೆ ಬೆರಳು ತೋರುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಸಚಿವರಾದ ಅಶ್ವತ್ಥ ನಾರಾಯಣ ಮಾತನಾಡಿ, ಆರಗ ಜ್ಞಾನೇಂದ್ರ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಉತ್ತರಿಸಿ,‘ಈಗ ದಿನ ನಿತ್ಯ ಅಕ್ರಮದಲ್ಲಿ ಕಾಂಗ್ರೆಸ್‌ನವರ ಹೆಸರು ಬರುತ್ತಿವೆ. ಪ್ರಿಯಾಂಕ್ ಖರ್ಗೆ ಹೇಳಿದ ತಕ್ಷಣ ಗೃಹ ಸಚಿವ ಆರಗ ಜ್ಞಾನೇಂದ್ರ ಏಕೆ ರಾಜೀನಾಮೆ ಕೊಡಬೇಕು? ಸಚಿವರೇ ಇರಲಿ, ಯಾರೇ ಇರಲಿ ಕಾನೂನು ಚೌಕಟ್ಟಿನಲ್ಲೇ ಇರುತ್ತಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ಸಿದ್ದರಾಮಯ್ಯ ಆಡಳಿತದಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ದೇಶದ್ರೋಹಿ, ಸಮಾಜಘಾತಕರು ಎಲ್ಲಾ ಪಕ್ಷ, ಜನಾಂಗದಲ್ಲೂ ಇರುತ್ತಾರೆ. ಒಂದು ಪಕ್ಷದ ಕಡೆ ಕೈ ತೋರುವುದು ಸರಿಯಲ್ಲ’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಸಿಎಂ ಬದಲಾವಣೆ ಗಾಳಿ ಸುದ್ದಿಗೆ ಕಿವಿಗೊಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಬೆಳಗಾವಿ ಯಾವತ್ತಿದ್ದರೂ ಕರ್ನಾಟಕ ರಾಜ್ಯದ ಭಾಗ. ಅಲ್ಲಿ ಎಂಇಎಸ್‌ನವರು ಆಗಾಗ ವಿವಾದ ಹುಟ್ಟು ಹಾಕಿ ಪುಂಡಾಟಿಕೆ ಮಾಡುತ್ತಾರೆ. ನೆಲ–ಜಲದ ಪ್ರಶ್ನೆ ಬಂದಾಗ ಪಕ್ಷಭೇದ ಮರೆತು ಹೋರಾಟಕ್ಕೆ ಸರ್ಕಾರ ಬದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT