ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಪರಿಹಾರ ವಿಳಂಬ ಸಲ್ಲದು

ಶಾಸಕ ಟಿ.ರಘುಮೂರ್ತಿ ಅಸಮಾಧಾನ, ಶೀಘ್ರ ಪರಿಹಾರಕ್ಕೆ ತಾಕೀತು
Last Updated 6 ಜುಲೈ 2020, 16:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಜಮೀನು ಕಳೆದುಕೊಂಡಿರುವ ಕೃಷಿಕರಿಗೆ ಬೆಳೆ ಸಿಗುತ್ತಿಲ್ಲ. ಇತ್ತ ಪರಿಹಾರವೂ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಭೂಸ್ವಾಧೀನ ಮಾಡಿಕೊಂಡಿರುವ ಜಮೀನಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಬೇಡಿ ಎಂದು ಶಾಸಕ ಟಿ.ರಘುಮೂರ್ತಿ ತಾಕೀತು ಮಾಡಿದರು.

ಇಲ್ಲಿನ ಭದ್ರಾ ಮೇಲ್ದಂಡೆ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತಾಡಿದರು.

‘11(1) ಅಧಿಸೂಚನೆ ಹೊರಡಿಸಿದ ಒಂದು ವರ್ಷದ ಒಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅರಣ್ಯ ಇಲಾಖೆ ಹಾಗೂ ಸರ್ವೆ ಇಲಾಖೆ ಸಮನ್ವಯತೆ ಕಾಪಾಡಿಕೊಂಡು ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು’ ಎಂದು ಸೂಚನೆ ನೀಡಿದರು.

‘ಕೊರೊನಾ ಸೋಂಕಿನ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬವಾಗುತ್ತಿದೆ. ಭೂಸ್ವಾಧೀನ ಮಾಡಿಕೊಂಡ ಜಮೀನಿಗೆ ಪರಿಹಾರ ನೀಡುವ ಪ್ರಕ್ರಿಯೆ ಕೂಡ ತಡವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಪರಿಹಾರ ಪ್ಯಾಕೇಜ್‌ ನೀಡುವುದು ಸೂಕ್ತ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಆದೇಶಿಸಿದರು.

‘ಕೆರೆಗಳಿಗೆ ಅರ್ಧದಷ್ಟು ನೀರು ತುಂಬಿಸುವಂತೆ ನಿರ್ಧಾರವಾಗಿದೆ. ಒಂದು ವೇಳೆ ಆಯಾ ತಾಲ್ಲೂಕುಗಳ ಕೆರೆಗೆ ಅಷ್ಟು ಪ್ರಮಾಣದ ನೀರು ತುಂಬಿಸಲು ಸಾಧ್ಯವಾಗದೇ ಇದ್ದರೆ ಹಂಚಿಕೆ ಪ್ರಮಾಣ ಕಡಿಮೆ ಮಾಡಬೇಕಾಗುತ್ತದೆ. ಜತೆಗೆ ನೀರು ತುಂಬಿಸುವ ಮುನ್ನವೇ ಕೆರೆಗಳನ್ನು ಸುಸ್ಥಿಯಲ್ಲಿಡಲು ಅಗತ್ಯ ಕ್ರಮ ಜರುಗಿಸಬೇಕು. ಒತ್ತುವರಿಯಾಗಿರುವ ಕೆರೆಗಳನ್ನೂ ತೆರವುಗೊಳಿಸಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT