ಬುಧವಾರ, ಡಿಸೆಂಬರ್ 1, 2021
26 °C
ಕೃಷಿ ಹೊಂಡದಂತಾಗುವ ರೈಲ್ವೆ ಅಂಡರ್‌ಪಾಸ್‌ಗಳು, ಅವೈಜ್ಞಾನಿಕ ಕಾಮಗಾರಿ: ಆರೋಪ

ರೈಲ್ವೆ ಕೆಳ ಸೇತುವೆ: ಜೀವ ಭಯದಲ್ಲಿ ಸಾಗುವ ಸ್ಥಿತಿ

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆಗಳಲ್ಲಿ ಜನರು ಜೀವ ಹಿಡಿದುಕೊಂಡು ಸಾಗುವ ಸ್ಥಿತಿ ಇದೆ.

ಪಟ್ಟಣದ ಕೋನಸಾಗರ ರಸ್ತೆಯಲ್ಲಿ, ಬಿ.ಜಿ.ಕೆರೆ, ಎದ್ದಲ ಬೊಮ್ಮಯ್ಯನಹಟ್ಟಿ- ತುಮಕೂರ್ಲಹಳ್ಳಿ ರಸ್ತೆಯಲ್ಲಿ, ಗುಂಡ್ಲೂರು ಬಳಿ ಅಂಡರ್ ಪಾಸ್‌ಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಕೆಳ ಸೇತುವೆಗಳು ಅವೈಜ್ಞಾನಿಕವಾಗಿದ್ದು, ಜನರು ತೊಂದರೆ ಎದುರಿಸುವಂತಾಗಿದೆ.

ಸೇತುವೆಗಳನ್ನು ನೇರವಾಗಿ ಮಾಡದ ಕಾರಣ ಎದುರು ಬರುವ ವಾಹನಗಳು ಕಾಣಿಸದೆ ಅಪಘಾತ ಸಂಭವಿಸುವ ಆತಂಕ ಒಂದು ಕಡೆಯಾದರೆ, ಮಳೆ ಬಂದರೆ ಸಾಕು ಸೇತುವೆಗಳಲ್ಲಿ ಕೃಷಿ ಹೊಂಡಗಳ ಮಾದರಿಯಲ್ಲಿ ನೀರು ತುಂಬಿಕೊಳ್ಳುತ್ತವೆ. 4-5 ಅಡಿಯಷ್ಟು ನೀರು ನಿಂತುಕೊಂಡು ವಾಹನ, ಜನರು ಓಡಾಡಲು ಆಗುತ್ತಿಲ್ಲ. ರಾತ್ರಿ ವೇಳೆ ಈ ಸಮಸ್ಯೆ ಎದುರಾದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವುದು ಅನಿವಾರ್ಯವಾಗಿದೆ. ದ್ವಿಚಕ್ರ ವಾಹನಗಳ ಮೋಟರ್‌ಗೆ ನೀರು ಹೋಗಿ ಹಾನಿಗೀಡಾಗುವ ಭಯ ಎದುರಾಗಿದೆ.

‘ಪಟ್ಟಣದ ಕೆಳಸೇತುವೆ ಮತ್ತು ಬಿ.ಜಿ. ಕೆರೆ ಸೇತುವೆಗಳು ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿಯಲ್ಲಿವೆ. ಇಲ್ಲಿ ನೂರಾರು ವಾಹನಗಳು ನಿತ್ಯ ಓಡಾಡುತ್ತವೆ. ದ್ಪಿಪಥ ಸೇತುವೆ ನಿರ್ಮಿಸುವ ಅಗತ್ಯವಿದ್ದರೂ ಏಕಪಥ ಸೇತುವೆ ನಿರ್ಮಿಸಲಾಗಿದೆ. ಅದೂ  ಕಿರಿಯದಾಗಿದೆ. ಎದುರು ಬರುವ ವಾಹನಗಳು ಗೋಚರಿಸದ ಕಾರಣ ಅಪಘಾತ ವಲಯಗಳಾಗಿ ಮಾರ್ಪಟ್ಟಿವೆ. ಹಲವು ಅಪಘಾತಗಳು ಸಂಭವಿಸಿದ್ದು, ಜನರು ಇಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಕನಿಷ್ಠ ಪಕ್ಷ ರಸ್ತೆಗೆ ಉಬ್ಬು ಹಾಕಿ ಸಂಭವನೀಯ ಅಪಘಾತಗಳನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದು ದೂರುತ್ತಾರೆ ಜನಸಂಸ್ಥಾನ ಸಂಸ್ಥೆಯ ವಿರೂಪಾಕ್ಷಪ್ಪ.

‘ಪಟ್ಟಣದ ಸೇತುವೆಯಲ್ಲಿ ತುಸು ಮಳೆ ಬಂದರೆ ಸಾಕು ನೀರು ನಿಲ್ಲುತ್ತಿದೆ. ಸೇತುವೆ ನಿರ್ಮಾಣಕ್ಕೂ ಮುನ್ನ ಈ ರಸ್ತೆ ವಾಯುವಿಹಾರಕ್ಕೆ ಪ್ರಸಿದ್ಧಿಯಾಗಿತ್ತು. ಸೇತುವೆ ನಿರ್ಮಿಸಿದ ನಂತರ ಜನರ ಓಡಾಟ ವಿರಳವಾಗಿದೆ. ಬೀದಿದೀಪ ವ್ಯವಸ್ಥೆ ಇಲ್ಲದೇ ಕಗ್ಗತ್ತಲು ಇರುವ ಕಾರಣ ರಾತ್ರಿ ವೇಳೆ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಕಳ್ಳರ ಕಾಟ ಹೆಚ್ಚಿದೆ’ ಎಂದು ನಿವಾಸಿ ಮಂಜುನಾಥ್ ಹೇಳಿದರು.

ಈ ಕೆಳ ಸೇತುವೆಯ ನಿರ್ಮಾಣ ಹಂತದಿಂದಲೂ ಅವೈಜ್ಞಾನಿಕ ಕಾಮಗಾರಿ ಸೇರಿ ಸಾಕಷ್ಟು ದೂರುಗಳನ್ನು ರೈಲ್ವೆ ಕೇಂದ್ರ ಕಚೇರಿಗೆ ಸಲ್ಲಿಸಲಾಗಿತ್ತು. ಮಾಧ್ಯಮಗಳಲ್ಲಿ ವರದಿಗಳು ಬಂದವು. ಮೇಲ್ಸೇತುವೆ ನಿರ್ಮಿಸುವ ಸಾಧ್ಯತೆ ಪರಿಶೀಲನೆಗೂ ಮನವಿ ಮಾಡಲಾಯಿತು. ಆದರೆ ರೈಲ್ವೆ ಇಲಾಖೆ ಇದ್ಯಾವುದಕ್ಕೂ ಬೆಲೆ ನೀಡದೆ ಕೆಳಸೇತುವೆ ನಿರ್ಮಿಸಿತು. ಮಳೆ ನೀರು ನಿಂತು ಗುಂಡಿಗಳು ಬಿದ್ದಿವೆ. ನೀರು ಹೋಗಲು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ಮಾಡಿದ ನಂತರ ಪಕ್ಕ
ದಲ್ಲಿ ಚರಂಡಿ ನಿರ್ಮಿಸಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ವಿರೂಪಾಕ್ಷಪ್ಪ.

ವಿಶ್ವ ಎಂಜಿನಿಯರ್‌ ದಿನದಂದು ಅನೇಕರು ಮೊಳಕಾಲ್ಮುರು ಮತ್ತು ಬಿ.ಜಿ.ಕೆರೆ ಕೆಳೆಸೇತುವೆ ನಿರ್ಮಿಸಿರುವ ಎಂಜಿನಿಯರ್‌ಗಳನ್ನು ಹೊರತುಪಡಿಸಿ ಉಳಿದವರಿಗೆ ದಿನಾಚರಣೆ ಶುಭಾಶಯ ಎಂದು ಹಾಕಿ ಸ್ಟೇಟಸ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಇದು ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಈ ಮಾರ್ಗದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೆ ಸಮಸ್ಯೆ ಸರಿಪಡಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ ಎಂದು ದೂರುತ್ತಾರೆ ಮಂಜುನಾಥ್‌. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.