ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಕೋಡಿಹಳ್ಳಿ ಆದಾಯ ಮೂಲ ತನಿಖೆಯಾಗಲಿ

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜಪ್ಪ ಆಗ್ರಹ
Last Updated 26 ಜೂನ್ 2022, 5:20 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ರೈತ ಸಂಘದ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿ ಗಳಿಸುವ ಮೂಲಕ ಭ್ರಷ್ಟಾಚಾರದ ಕಳಂಕ ಹೊತ್ತಿರುವ ಕೋಡಿಹಳ್ಳಿ ಚಂದ್ರಶೇಖರ್‌ಗೆ ನೈತಿಕತೆಯಿದ್ದರೆ ಕೂಡಲೇ ಹೆಗಲ ಮೇಲಿನ ಹಸಿರು ಶಾಲು ತೆಗೆಯಲಿ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾದ ಕೋಡಿಹಳ್ಳಿ ಸಂಘಕ್ಕೆ ಸಂಬಂಧಪಟ್ಟ ಎಲ್ಲ ಲೆಕ್ಕಪತ್ರಗಳನ್ನು ಸಲ್ಲಿಸಿದ ಬಳಿಕ ಹಸಿರು ಶಾಲು ಧರಿಸುವುದು ಉತ್ತಮ. ₹ 40 ಲಕ್ಷ ಕಾರು ಖರೀದಿಸಿರುವ ಇವರು ಬೆಂಗಳೂರಿನಲ್ಲಿ ಕಚೇರಿಗಾಗಿ ₹ 45 ಲಕ್ಷ ವೆಚ್ಚ ಮಾಡಿದ್ದಾರೆ. ಈ ಎಲ್ಲದಕ್ಕೂ ಹಣದ ಮೂಲ ಯಾವುದು ಎಂದು ಸಂಘಟನೆ ಪ್ರಶ್ನಿಸಿದೆ’ ಎಂದರು.

‘ಸಾಲ ಮನ್ನಾ ಸಂಬಂಧ ನಡೆದ ಹೋರಾಟದಲ್ಲಿ ₹ 1 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಅದರೆ ಈವರೆಗೂ ಅದರ ಲೆಕ್ಕ ಕೊಟ್ಟಿಲ್ಲ. ಹಲವು ಬಾರಿ ಕೇಳಿದರೂ ಪ್ರಶ್ನಿಸಲು ನೀವ್ಯಾರು ಎನ್ನುತ್ತಾರೆ. ಆದ್ದರಿಂದ ಇವರ ಆದಾಯ ಮೂಲದ ಬಗ್ಗೆ ಸರ್ಕಾರ ಕೂಡಲೇ ತನಿಖೆ ನಡೆಸಿ ವರದಿ ಬಹಿರಂಗಗೊಳಿಸಬೇಕೆಂದು’ ಒತ್ತಾಯಿಸಿದರು.

‘ವಾಹಿನಿಗಳಲ್ಲಿ ಬಂದ ತಕ್ಷಣ ಆತ ರೈತ ನಾಯಕನಾಗುವುದಿಲ್ಲ. ಖಳನಾಯಕರೂ ಕೂಡ ಟಿವಿಯಲ್ಲಿ ಪ್ರತ್ಯಕ್ಷರಾಗುತ್ತಾರೆ. ರೈತರಿಗೆ ರೈತ ಮುಖಂಡರೇ ಶಾಪ ಎನ್ನುವುದಕ್ಕೆ ಕೋಡಿಹಳ್ಳಿ ಉತ್ತಮ ಉದಾಹರಣೆ. ರೈತರು ಹಸಿರು ಶಾಲು ಹಾಕಿಕೊಂಡು ಹೋಗಲಾದರಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ’ ಎಂದು ಬೇಸರಿಸಿದರು. ‌

‘ಸಾಮೂಹಿಕ ನಾಯಕತ್ವದ ರೈತ ಸಂಘಟನೆಗೆ ನಾನು ಅಧ್ಯಕ್ಷ ಎಂದು ಹೇಳಿಕೊಂಡು ರಾಜ್ಯದಲ್ಲಿ ಓಡಾಡುತ್ತಿದ್ದಾರೆ. ಆದರೆ, ಈಗಾಗಲೇ ಅದಕ್ಕೆ ಚುಕ್ಕಿ ನಂಜುಂಡಸ್ವಾಮಿ ಅಧ್ಯಕ್ಷರಾಗಿದ್ದಾರೆ. ಇವರು ಅಧ್ಯಕ್ಷರಾಗುವ ಪ್ರಮೇಯವೇ ಬರುವುದಿಲ್ಲ’ ಎಂದು
ಸ್ಪಷ್ಟಪಡಿಸಿದರು.

‘ರಾಜ್ಯದಲ್ಲಿ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಿದೆ. ಅಧಿಕಾರಿಗಳು ಗೋದಾಮುಗಳ ಮೇಲೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿರುವ ರಸಗ್ಬೊಬರವನ್ನು ವಶಕ್ಕೆ ಪಡೆಯಬೇಕು. ಇಲ್ಲವಾದರೆ ರೈತರೆ ದಾಳಿ ನಡೆಸಲಿದ್ದಾರೆ’ ಎಂದು ಎಚ್ಚರಿಸಿದರು.

‘ಕೇಂದ್ರದಂತೆ ರಾಜ್ಯ ಸರ್ಕಾರವೂ ಭೂ ಸುಧಾರಣಾ ಕಾಯ್ದೆ ವಾಪಸ್‌ ಪಡೆಯದಿದ್ದರೆ ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿ ಹೋರಾಟ ಆರಂಭವಾಗುತ್ತದೆ. ವಿದ್ಯುತ್‌ ಖಾಸಗೀಕರಣಗೊಳಿಸಿದರೆ ಸರ್ಕಾರದ ಪತನ ಖಚಿತ’ ಎಂದು ತಿಳಿಸಿದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ, ಮಲ್ಲಿಕಾರ್ಜುನ್‌, ಸತೀಶ್‌, ಬಸವರಾಜಪ್ಪ, ವಿಜಯ ಪ್ರಕಾಶ್‌, ಪ್ರವೀಣ್‌, ರಾಮರೆಡ್ಡಿಇದ್ದರು.

ದಾವಣಗೆರೆಯಲ್ಲಿ ಸಭೆ
‘ರೈತರ ಹಿತದೃಷ್ಟಿಯಿಂದ ಎಲ್ಲ ರೈತ ಸಂಘಟನೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವುದರ ಬಗ್ಗೆ ಈಗಾಗಲೇ ಚುಕ್ಕಿ ನಂಜುಂಡಸ್ವಾಮಿ, ಬಡಗಲಪುರ ನಾಗೇಂದ್ರ ಅವರ ಬಳಿ ಚರ್ಚಿಸಲಾಗಿದೆ. ಅಖಂಡ ಕರ್ನಾಟಕ ರೈತ ಸಂಘ ತಾತ್ವಿಕ ಒಪ್ಪಿಗೆ ನೀಡಿದೆ. ಉತ್ತರ ಕರ್ನಾಟಕದ ಪ್ರಬಲ ಸಂಘಟನೆಯಾದ ಚಿನ್ನಪ್ಪ ಪೂಜಾರಿ ನೇತೃತ್ವದ ರೈತ ಸಂಘ ಈಗಾಗಲೇ ಸಂಘದ ಜತೆ ವಿಲೀನವಾಗಿದೆ. ಮತ್ತೊಂದು ಸುತ್ತಿನ ಮಾತುಕತೆಗಾಗಿ ಜುಲೈ ಒಂದರಂದು ದಾವಣಗೆರೆಯಲ್ಲಿ ಸಭೆ ಸೇರಲುನಿರ್ಧರಿಸಲಾಗಿದೆ ಎಂದು ಬಸವರಾಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT