ಶುಕ್ರವಾರ, ಜೂನ್ 25, 2021
21 °C
ಮಸೀದಿಗಳಲ್ಲಿ ಹೆಚ್ಚು ಜನ ಸೇರಲಿಲ್ಲ * ಮನೆಗಳಲ್ಲೇ ಶ್ರದ್ಧಾ–ಭಕ್ತಿಯ ಪ್ರಾರ್ಥನೆ

ಈದ್‌ ಉಲ್‌ ಫಿತ್ರ್‌: ಜಿಲ್ಲೆಯಾದ್ಯಂತ ಸರಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಸ್ಲಾಂ ಧರ್ಮೀಯರ ಪವಿತ್ರ ಹಬ್ಬವಾದ ‘ಈದ್‌ ಉಲ್‌ ಫಿತ್ರ್‌’ ಜಿಲ್ಲೆಯಲ್ಲಿ ಶುಕ್ರವಾರ ಸರಳವಾಗಿ ನೆರವೇರಿತು. ಕೋವಿಡ್ ಕಾರಣಕ್ಕೆ ಸಮುದಾಯದವರು ಸಾಂಪ್ರದಾಯಿಕವಾಗಿ ಆಚರಿಸಿದರು.

‘ದೇಶವೇ ಸಂಕಷ್ಟದಲ್ಲಿರುವಾಗ ಸಂಭ್ರಮಪಡಬಾರದು’ ಎಂದು ಧಾರ್ಮಿಕ ಗುರುಗಳು ಸೂಚನೆ ನೀಡಿದ್ದರು. ಮಸೀದಿಗೆ ಹೆಚ್ಚಿನ ಸಂಖ್ಯೆ ಜನರಿಗೆ ಪ್ರವೇಶ ಇರಲಿಲ್ಲ. ಹಬ್ಬದ ಅಂಗವಾಗಿ ಧರ್ಮಗುರು, ಮೌಲ್ವಿ, ಪೇಶ್‌ಇಮಾಮ್‌, ಮೌಝಿನ್‌ ಹಾಗೂ ಸಿಬ್ಬಂದಿ ಒಳಗೊಂಡು ಬೆರಳೆಣಿಕೆಯಷ್ಟು ಜನರು ಮಾತ್ರ ಪ್ರಾರ್ಥನೆ ಸಲ್ಲಿಸಿದರು. ನಂತರ ಪ್ರತಿ ಮನೆಯಲ್ಲೂ ಶ್ರದ್ಧಾ–ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರಾರ್ಥನೆ ಸಲ್ಲಿಸಿದ ನಂತರ ಮುಸ್ಲಿಮರು ದೂರವಾಣಿ ಕರೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದಲ್ಲಿ ಮೆರುಗು ಪಡೆಯುತ್ತಿದ್ದ ಈದ್ಗಾ ಮೈದಾನಗಳು ಮೌನಕ್ಕೆ ಶರಣಾಗಿದ್ದವು.

ನಸುಕಿನ ವೇಳೆ ಮಸೀದಿಯಲ್ಲಿ ಫಜರ್‌ ನಡೆಯಿತು. ಒಂದು ಗಂಟೆಯ ಬಳಿಕ ಈದ್‌–ಉಲ್‌–ಫಿತ್ರ್‌ ವಿಶೇಷ ಪ್ರಾರ್ಥನೆ ನೆರವೇರಿತು. ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಇರುವುದರಿಂದ ಧರ್ಮಗುರುಗಳು ಸೇರಿ ಸಮುದಾಯದ ಕೆಲವರು ಮಾತ್ರ ಈ ಪ್ರಾರ್ಥನೆ ಮಾಡಿದರು. ಪ್ರಾರ್ಥನೆ ಮುಗಿದ ಮಾಹಿತಿಯನ್ನು ಮಸೀದಿ ಸಮಿತಿ ಎಲ್ಲೆಡೆ ಪಸರಿಸಿತು. ನಂತರ ಹಬ್ಬ ಕಳೆಗಟ್ಟಿತು. ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12ರ ವರೆಗೆ ಪ್ರತಿ ಮನೆಯಲ್ಲಿ ಪ್ರಾರ್ಥನೆ ನಡೆಯಿತು. ಮಧ್ಯಾಹ್ನ ಹಬ್ಬದ ಊಟ ಸವಿದರು. ನಗರದಲ್ಲಿ ಜನ ಹಾಗೂ ವಾಹನ ಸಂಚಾರವೂ ವಿರಳವಾಗಿತ್ತು.

ಹಸಿವಿನ ಮಹತ್ವ ಸಾರುವ ರಂಜಾನ್‌ ಮಾಸ, ಸನ್ನಡತೆಯ ಮಾರ್ಗವನ್ನು ತೋರುತ್ತದೆ. ಈ ಮಾಸದ ಕೊನೆಯಲ್ಲಿ ‘ಈದ್‌ ಉಲ್‌ ಫಿತ್ರ್‌’ ಹಬ್ಬವನ್ನು ಆಚರಿಸಲಾಗುತ್ತದೆ. ಗುರುವಾರ ಸಂಜೆ ಚಂದ್ರದರ್ಶನ ಪಡೆದ ಮುಸ್ಲಿಮರು ಹಬ್ಬಕ್ಕೆ ಸಜ್ಜಾಗಿದ್ದರು. ಹಬ್ಬದ ಆಚರಣೆಗೆ ಸರ್ಕಾರ ರೂಪಿಸಿದ್ದ ನಿಯಮಾವಳಿಗಳನ್ನು ಪಾಲಿಸಿದರು. ‘ಕೋವಿಡ್‌’ ನಿವಾರಣೆಗೆ ದೇವರಲ್ಲಿ ಮೊರೆ ಇಟ್ಟರು.

‘ರಂಜಾನ್‌ ಹಬ್ಬದ ಸಂಭ್ರಮ ಎಲ್ಲಿಯೂ ಇರಲಿಲ್ಲ. ಆದರೆ, ಸಂಪ್ರದಾಯಗಳು ಎಂದಿನಂತೆ ನೆರವೇರಿದವು. ದೊಡ್ಡ ಮಸೀದಿಯಲ್ಲಿ 30 ಜನ, ಸಣ್ಣ ಮಸೀದಿಗಳಲ್ಲಿ 15 ಜನರು ಪ್ರಾರ್ಥನೆ ಮಾಡಿದರು. ಮಸೀದಿಯಲ್ಲಿ ಪ್ರಾರ್ಥನೆ ಮುಗಿದ ಬಳಿಕ ಮನೆ–ಮನೆಯಲ್ಲೂ ಹಬ್ಬ ನಡೆಯಿತು’ ಎಂದು ಗೌಸ್‌ ಎ ಅಜಂ ಮಸೀದಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.