ಮೊಳಕಾಲ್ಮುರು: ತಾಲ್ಲೂಕಿನ ರಾಂಪುರದಲ್ಲಿ ಪೊಲೀಸ್ ಠಾಣೆ ವತಿಯಿಂದ ಪ್ರಯಾಣಿಕರ ಆಟೊಗಳಿಗೆ ಭಾನುವಾರ ಗುರುತಿನ ಸಂಖ್ಯೆಯನ್ನು ನೀಡಲಾಯಿತು.
ಅನಧಿಕೃತ ಆಟೊ ಸಂಚಾರದ ಬಗ್ಗೆ ಈಚೆಗೆ ಕೆಲ ಸಂಘಟನೆಗಳು ಪೊಲೀಸರಿಗೆ ದೂರು ಸಲ್ಲಿಸಿದ್ದವು. ‘ಕೆಲವು ಆಟೊಗಳು ಅಗತ್ಯ ದಾಖಲಾತಿ ಇಲ್ಲದೇ ಸಂಚರಿಸುತ್ತಿವೆ. ಚಾಲನಾ ಪರವಾನಗಿ ಪಡೆಯದೇ ಚಾಲಕರು ಆಟೊ ಓಡಿಸುತ್ತಿದ್ದಾರೆ. ಅನನುಭವಿ ಚಾಲಕರಿಂದ ಅಪಘಾತಗಳೂ ಸಂಭವಿಸುತ್ತಿದೆ. ಒಂದು ವೇಳೆ ಅಪಘಾತ ಸಂಭವಿಸಿದಾಗ ವಿಮೆ ಪಡೆಯಲು ಅಡ್ಡಿಯಾಗುತ್ತದೆ’ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿತ್ತು.
ಈ ಕಾರಣದಿಂದ, ಆಟೊ ಮಾಲೀಕರು ಮತ್ತು ಚಾಲಕರ ಸಭೆ ನಡೆಸಿದ್ದ ಪೊಲೀಸ್ ಇಲಾಖೆ, ಅಗತ್ಯ ದಾಖಲೆಗಳನ್ನು ಹೊಂದಲು ಸಮಯಾವಕಾಶ ನೀಡಿತ್ತು. ಆಟೊ ಮಾಲೀಕರು ಹಾಗೂ ಚಾಲಕರು ನಿಗದಿತ ಸಮಯದೊಳಗೆ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ಪಿಎಸ್‌ಐ ಮಹೇಶ್ ಹೊಸಪೇಟೆ ತಿಳಿಸಿದರು.
ಪೊಲೀಸರು ಸೂಚಿಸಿದ್ದ ದಾಖಲೆಗಳನ್ನು ಹೊಂದಿರುವ ಆಟೊಗಳನ್ನು ಪರಿಶೀಲಿಸಿ, ಅವುಗಳಿಗೆ ಠಾಣೆಯಿಂದ ಗುರುತಿನ ಸಂಖ್ಯೆ ನೀಡಲಾಗಿದೆ. ಅಧಿಕೃತ ಆಟೊಗಳನ್ನು ಗುರುತಿಸಲು ಪ್ರಯಾಣಿಕರಿಗೆ ಅನುಕೂಲವಾಗಿದೆ ಎಂದರು.