ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ದೆವ್ವ ಬಿಡಿಸುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಮೌಲ್ವಿ ಬಂಧನ

Published 4 ಜೂನ್ 2024, 0:27 IST
Last Updated 4 ಜೂನ್ 2024, 0:27 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದೈಹಿಕ ಸುಖ ನೀಡಿದರೆ ದೆವ್ವ ಬಿಟ್ಟು ಹೋಗುತ್ತದೆ’ ಎಂಬುದಾಗಿ ನಂಬಿಸಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮಸೀದಿಯೊಂದರ ಮೌಲ್ವಿ ಸೇರಿ ಇಬ್ಬರು ಆರೋಪಿಗಳನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನಗರದ ಮಸೀದಿಯೊಂದರ ಮೌಲ್ವಿ ಅಬ್ದುಲ್‌ ರೆಹಮಾನ್‌ ಹಾಗೂ ಬಾಲಕಿಯ 23 ವರ್ಷದ ಅಣ್ಣ ಬಂಧಿತರು. ಗರ್ಭಿಣಿಯಾಗಿದ್ದ ಬಾಲಕಿಗೆ ಅವಧಿಪೂರ್ವ ಪ್ರಸವವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿ ಮೌಲ್ವಿಯು ಮೂರು ವರ್ಷಗಳಿಂದ ಬಾಲಕಿಗೆ ಕುರಾನ್‌ ಪಠಿಸಲು ನೆರವಾಗಿದ್ದ.

ಮೂಲತಃ ಉತ್ತರಪ್ರದೇಶದ ಅಬ್ದುಲ್‌ ರೆಹಮಾನ್‌ 20 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದಾನೆ. ಬಾಲಕಿಗೆ ಗಾಳಿ (ದೆವ್ವ) ಸೋಕಿರುವುದಾಗಿ ಕುಟುಂಬದ ಸದಸ್ಯರನ್ನು ನಂಬಿಸಿದ್ದ. ದೆವ್ವ ಬಿಡಿಸುವುದಾಗಿ ಹೇಳಿ ಬಾಲಕಿಯ ತಾಯಿಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದ. ತಂಗಿಯ ಮೇಲೆ ಅತ್ಯಾಚಾರ ಎಸಗುವಂತೆ ಬಾಲಕಿಯ ಅಣ್ಣನನ್ನು ಪುಸಲಾಯಿಸಿ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮೌಲ್ವಿ, ‘ಬೇರೆ ಯಾರಿಗಾದರೂ ತಿಳಿಸಿದರೆ ಪೂಜೆ ಫಲಿಸದು’ ಎಂದಿದ್ದ. ವಾರಕ್ಕೊಮ್ಮೆ ಪೂಜೆಯ ನೆಪದಲ್ಲಿ ಮನೆಗೆ ಬಂದು ಈ ಕೃತ್ಯ ಎಸಗುತ್ತಿದ್ದ. ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ತಾಯಿ ಜಿಲ್ಲಾ ಆಸ್ಪತ್ರೆಗೆ ಕರೆತಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

‘ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಸ್ಪತ್ರೆಯಿಂದ ಮಾಹಿತಿ ಬಂದಿತ್ತು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ನೀಡಿ ಬಾಲಕಿಯನ್ನು ಲೈಂಗಿಕ ತೃಷೆಗೆ ಮೌಲ್ವಿ ಬಳಸಿಕೊಂಡಿದ್ದಾನೆ. ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT