ಮಂಗಳವಾರ, ಸೆಪ್ಟೆಂಬರ್ 21, 2021
23 °C

ಬಾಲಕಿ ಮೇಲೆ ಅತ್ಯಾಚಾರ: ಸ್ವಾಮೀಜಿಗಳ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭರಮಸಾಗರ: ಅತ್ಯಾಚಾರಕ್ಕೆ ಬಲಿಯಾದ ಹೋಬಳಿಯ ಬಾಲಕಿಯ ಮನೆಗೆ ಸೋಮವಾರ ಭೇಟಿ ನೀಡಿದ ವಿವಿಧ ಮಠಾಧೀಶರು ಕುಟುಂಬದವರಿಗೆ ಸಾಂತ್ವನ ಹೇಳಿದರು. ದುಷ್ಕೃತ್ಯ ಎಸಗಿದವರನ್ನು ಶೀಘ್ರ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

ಹೊಸದುರ್ಗ ಕುಂಚಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ ನಿಯೋಗದಲ್ಲಿದ್ದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಆರೋಪಿಗೆ ಯಾವುದೇ ಕಾರಣಕ್ಕೂ ರಕ್ಷಣೆ ನೀಡಬಾರದು. ಈ ಕೃತ್ಯ ಎಸಗಿದವರ ಬಗ್ಗೆ ಮಾಹಿತಿ, ಅನುಮಾನವಿದ್ದಲ್ಲಿ ಪೊಲೀಸರಿಗೆ ವಿಷಯ ಮುಟ್ಟಿ‌ಸಬೇಕು. ಅವರನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಬೇಕು. ಇದರಿಂದ ಗ್ರಾಮದ ಎಲ್ಲ ಮಹಿಳೆಯರಿಗೂ ರಕ್ಷಣೆ ಸಿಕ್ಕಂತ್ತಾಗುತ್ತದೆ’ ಎಂದು ಹೇಳಿದರು.

ಕುಂಚಿಟಿಗ‌ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ‘ದುಷ್ಕರ್ಮಿಗಳ ಬಂಧನವಾದಾಗ ಮಾತ್ರ ನೊಂದವರಿಗೆ ನೆಮ್ಮದಿ ದೊರಕುತ್ತದೆ. ಯಾವುದೇ ಅನ್ಯಾಯ, ಅತ್ಯಾಚಾರಗಳಂತಹ ಕೃತ್ಯಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ಎಲ್ಲರೂ ಶೌಚಾಲಯಗಳನ್ನು ನಿರ್ಮಿಸಿಕೊಂಡು ನೆಮ್ಮದಿ ಮತ್ತು ಆರೋಗ್ಯದಿಂದ ಇರಬೇಕು. ಮಹಿಳೆಯರಿಗೆ ರಕ್ಷಣೆ ಗೌರವ ಸಿಗಬೇಕೆಂದರೆ ಈ ಗ್ರಾಮ ಬಯಲುಶೌಚ ಮುಕ್ತ ಆಗಬೇಕು’ ಎಂದು ಹೇಳಿದರು.

ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ‘ಇದೊಂದು ಪೈಶಾಚಿಕ ಕೃತ್ಯ. ಇದನ್ನು ಎಲ್ಲರೂ ಖಂಡಿಸಿದ್ದೇವೆ. ಎಲ್ಲರ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣಮಾಡಿಕೊಳ್ಳಬೇಕು. ಇದಕ್ಕೆ ಪ್ರತಿಜ್ಞೆ ಮಾಡಬೇಕು. ಇಂತಹ ಕೃತ್ಯ ಎಸಗಿದವರನ್ನು ಶೀಘ್ರ ಪತ್ತೆ ಹಚ್ಚಬೇಕು. ನೊಂದ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಮಠ ಎಲ್ಲ ರೀತಿಯ ಸಹಕಾರ ನೀಡುತ್ತದೆ’ ಎಂದರು.

ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ‘ಬಾಲಕಿ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನೋವಿನ ಸಂಗತಿ. ಇಂತಹ ಘಟನೆಗಳು ಮರುಕಳಿಸದ ರೀತಿ ಗ್ರಾಮಸ್ಥರು ಎಚ್ಚೆತ್ತುಕೊಳ್ಳಬೇಕು. ಇದನ್ನು ಎಲ್ಲ ಸ್ವಾಮೀಜಿಗಳು ಖಂಡಿಸುತ್ತೇವೆ. ನೊಂದ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಆರೋಪಿಗಳನ್ನು ಬೇಗ ಪತ್ತೆಹಚ್ಚಬೇಕು. ಯಾವುದೇ ಕಾರಣಕ್ಕೂ ಆರೋಪಿಯನ್ನು ರಕ್ಷಿಸುವ ಕೆಲಸವಾಗಬಾರದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.