ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಾಸ್ವಾಮಿ ಹತ್ಯೆ: ಶೋಕದ ಸೌಧವಾದ ಸದ್ಧರ್ಮ ಸದನ...

ಮಗ ಬಂದೇ ಬರ್ತಾನೆ ಎಂಬ ನಂಬಿಕೆ ಇತ್ತು l ರೇಣುಕಾಸ್ವಾಮಿ ತಂದೆ– ತಾಯಿಯ ನೋವಿನ ಮಾತು
Published 13 ಜೂನ್ 2024, 6:43 IST
Last Updated 13 ಜೂನ್ 2024, 6:43 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿವಿಧ ಮಠಾಧೀಶರು, ಶರಣರಿಗೆ, ಸದ್ಭಕ್ತರಿಗೆ ದಾಸೋಹ ಭವನದಂತಿದ್ದ ‘ಸದ್ಧರ್ಮ ಸದನ’ವೀಗ ಶೋಕದ ಸೌಧವಾಗಿದೆ. ಶರಣ, ಜಂಗಮ ಪರಂಪರೆಯಲ್ಲಿ ನಡೆದು ಬಂದಿರುವ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಇದ್ದ ಒಂದೇ ಒಂದು ಕುಟುಂಬದ ಕುಡಿಯೂ ಇದ್ದಕ್ಕಿದ್ದಂತೆ ಮರೆಯಾಗಿ ಹೋಗಿದ್ದು ಮನೆಯವರಿಗೆ ದಿಕ್ಕೇ ತೋಚದಂತಾಗಿದೆ.

ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಯಾದ ರೇಣುಕಾಸ್ವಾಮಿ ಮನೆಯ ಹೆಸರೇ ಸದ್ಧರ್ಮ ಸದನ. ತುರುವನೂರು ರಸ್ತೆಯಲ್ಲಿರುವ ಮನೆಯೊಳಗೆ ಭೇಟಿ ನೀಡಿದರೆ ಎಲ್ಲೆಲ್ಲೂ ಮಠಾಧೀಶರು, ಸಾಧುಗಳು ಮನೆಗೆ ಬಂದ ಚಿತ್ರಗಳೇ ಕಣ್ಣಿಗೆ ಕಾಣುತ್ತವೆ. ಕಾಶಿನಾಥಯ್ಯ ಶಿವನಗೌಡರ್‌ ಹಾಗೂ ರತ್ನಪ್ರಭಾ ದಂಪತಿ ಶ್ರೀ ಶರಣರ ಸೇವಾ ಹಾದಿಯಲ್ಲಿ ಬಂದವರು.

ಚಿತ್ರದುರ್ಗಕ್ಕೆ ಬಂದ ಹಲವು ಸ್ವಾಮೀಜಿಗಳು ಇದೇ ಮನೆಗೆ ಭೇಟಿ ನೀಡಿ ಹೋಗುತ್ತಿದ್ದರು, ಹಲವು ಸಂದರ್ಭಗಳಲ್ಲಿ ಇಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಕುಟುಂಬ ಸದಸ್ಯರೆಲ್ಲರೂ ಶ್ರೀಗಳ ಸೇವೆ ಮಾಡುತ್ತಿದ್ದರು. ಇಂತಹ ಕುಟುಂಬದಲ್ಲಿ ಹುಟ್ಟಿದ ರೇಣುಕಾಸ್ವಾಮಿ ವಿಚಿತ್ರ ಬೆಳವಣಿಗೆಗಳ ಮೂಲಕ ಹತ್ಯೆಯಾದದ್ದು ಸ್ಥಳೀಯರಿಗೆ ಆಶ್ಚರ್ಯ ತರಿಸಿದೆ.

ಬಿ.ಕಾಂ ಅರ್ಧಕ್ಕೆ ನಿಲ್ಲಿಸಿದ್ದ ರೇಣುಕಾಸ್ವಾಮಿ ಹಾದಿ ತಪ್ಪಿದ್ದ, ದುಶ್ಚಟಕ್ಕೆ ಬಲಿಯಾಗಿದ್ದ, ಮೊಬೈಲ್‌ ಗೀಳಿಗೆ ಒಳಗಾಗಿದ್ದ ಎಂಬ ಮಾತುಗಳನ್ನು ಅವರ ತಂದೆ ಕಾಶಿನಾಥಯ್ಯ ಶಿವನಗೌಡರ್‌ ಒಪ್ಪುವುದಿಲ್ಲ. ‘ಹಲವು ಸಂಘಟನೆಯೊಳಗೆ ಗುರುತಿಸಿಕೊಂಡಿದ್ದ ಆತ ಸ್ವಾಮೀಜಿಗಳಿಗೆ ಸೇವೆ ಮಾಡುತ್ತಿದ್ದ, ಯಾವಾಗಲೂ ಏಕಾಂತ ಬಯಸುತ್ತಿದ್ದ, ಕ್ರಿಕೆಟ್‌ ವೀಕ್ಷಣೆ ಹೊರತುಪಡಿಸಿದರೆ ಸಿನಿಮಾ, ಧಾರಾವಾಹಿ ನೋಡುವ ಅಭ್ಯಾಸವೇ ಇರಲಿಲ್ಲ. ಅವನು ಏಕೆ ಇಂತಹ ಘಟನೆಗೆ ಬಲಿಯಾದ ಎಂಬ ಬಗ್ಗೆ ತಿಳಿಯುತ್ತಿಲ್ಲ’ ಎಂದು ಹೇಳುತ್ತಾ ಅವರು ಕಣ್ಣೀರಾಗುತ್ತಾರೆ.

ಘಟನೆಯ ನಂತರ ಸದ್ಧರ್ಮ ಸದನಕ್ಕೆ ವಿವಿಧ ಮಠಗಳ ಮಠಾಧೀಶರು, ವೀರಶೈವ, ಜಂಗಮ ಸಮುದಾಯದ ಮುಖಂಡರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ. ಮಠಾಧೀಶರ ನೆಚ್ಚಿನ ತಾಣವಾಗಿದ್ದ ಮನೆ ನೋವಿನಲ್ಲಿ ಮುಳುಗಿರುವುದನ್ನು ಕಂಡು ಮರುಗುತ್ತಾರೆ. ‘ಒಳ್ಳೆಯವರ ಮನೆ ಮನೆಮಗನ ಸಾವು ಇಡೀ ಸಾಮಾಜಕ್ಕೆ ನೋವು ತಂದಿದೆ, ಇಂತಹ ಸಂದರ್ಭದಲ್ಲಿ ಎಲ್ಲರೂ ಸದ್ಧರ್ಮ ಸದನದ ನೋವಿಗೆ ಜೊತೆಯಾಗಬೇಕು’ ಎಂದು ಹೇಳುತ್ತಾರೆ.

ಫಾರ್ಮಸಿ ಮೂಲಕ ಸಂಪರ್ಕ: ‘ರೇಣುಕಾಸ್ವಾಮಿಗಾಗಿ ಜೂನ್‌ 9ರಂದು ದಿನವಿಡೀ ನಾವು ಹುಡುಕಾಟ ನಡೆಸಿದ್ದೆವು. ಪೊಲೀಸರಿಗೆ ದೂರು ನೀಡುವಂತೆ ಹಲವು ಸಲಹೆ ಕೊಟ್ಟಿದ್ದರು. ಆದರೆ ಪೊಲೀಸ್‌ ಠಾಣೆವರೆಗೂ ಹೋಗುವುದು ಬೇಡ ಎಂದು ಸುಮ್ಮನಾಗಿದ್ದೆ. ಮಗ ಬಂದೇ ಬರುತ್ತಾನೆ ಎಂಬ ನಂಬಿಕೆ ಇತ್ತು. ಆದರೆ ನಮ್ಮ ನಂಬಿಕೆ ಸುಳ್ಳಾಯಿತು. ಮಗನ ಮಾಹಿತಿ ಸಿಕ್ಕರೆ ಕರೆ ಮಾಡಿ ಎಂದು ಮಗ ಕೆಲಸ ಮಾಡುತ್ತಿದ್ದ ಫಾರ್ಮಸಿ ಹುಡುಗರಿಗೆ ಮೊಬೈಲ್‌ ನಂಬರ್‌ ಕೊಟ್ಟು ಬಂದಿದ್ದೆ. ಫಾರ್ಮಸಿಯನ್ನು ಸಂಪರ್ಕಿಸಿದ್ದ ಬೆಂಗಳೂರು ಪೊಲೀಸರು ಆ ಮೂಲಕ ನನಗೆ ಕರೆ ಮಾಡಿದರು’ ಎಂದು ಕಾಶಿನಾಥಯ್ಯ ಶಿವನಗೌಡರ್‌ ಹೇಳಿದರು.

‘ಮಗ ಮೃತಪಟ್ಟಿದ್ದಾನೆ ಎಂದು ಮೊದಲು ಪೊಲೀಸರು ತಿಳಿಸಲಿಲ್ಲ. ಟಿ.ವಿಯಲ್ಲಿ ಸುದ್ದಿ ಬರುತ್ತಿದ್ದರೂ ಅದು ನಮಗೆ ಗೊತ್ತಿರಲಿಲ್ಲ. ಸೋಮವಾರ ಮಧ್ಯಾಹ್ನವಷ್ಟೇ ನಮಗೆ ವಿಷಯ ತಿಳಿಸಿದರು. ಮಗನ ಮೃತದೇಹವನ್ನು ನಾವು ಗುರುತಿಸಿದೆವು. ಮಗನನ್ನು ಬಹಳ ವಿಕಾರವಾಗಿ ಕೊಲೆ ಮಾಡಿದ್ದನ್ನು ಕಂಡು ನನಗೆ ಪ್ರಜ್ಞೆಯೇ ತಪ್ಪಿದಂತಾಯಿತು’ ಎಂದರು.

ಪತ್ನಿ ಕರೆ ಸ್ವೀಕರಿಸಲಿಲ್ಲ: ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಮಾತನಾಡಿ ‘ಜೂನ್‌ 8ರಂದು ಮಧ್ಯಾಹ್ನ ಮಗ ತನ್ನ ಪತ್ನಿಗೆ ಕರೆ ಮಾಡಿದ್ದ. ಪತ್ನಿ ಕರೆ ಸ್ವೀಕಾರ ಮಾಡಿರಲಿಲ್ಲ, ನಂತರ ನನಗೆ ಕರೆ ಮಾಡಿ ಊಟಕ್ಕೆ ಬರುವುದಿಲ್ಲ ಎಂದು ತಿಳಿಸಿದ. ಗೆಳೆಯರ ಜೊತೆ ಹೊರಗೆ ಹೋಗುತ್ತಿರುವುದಾಗಿ ತಿಳಿಸಿದ್ದ. ಆ ನಂತರ ಮಗ ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ. ಇದ್ದ ಒಬ್ಬ ಮಗನನ್ನು ಕಳೆದುಕೊಳ್ಳುವ ಕಷ್ಟ ಯಾವ ತಂದೆ–ತಾಯಿಗೂ ಬರಬಾರದು’ ಎಂದು ಅವರು ಗೋಳಿಟ್ಟರು.

‘ಸದ್ಧರ್ಮ ಸದನ’ ಹೆಸರಿನ ರೇಣುಕಾಸ್ವಾಮಿ ನಿವಾಸ
‘ಸದ್ಧರ್ಮ ಸದನ’ ಹೆಸರಿನ ರೇಣುಕಾಸ್ವಾಮಿ ನಿವಾಸ
ಸಾಧು ಸಂತರಿಗೆ ಮೇಲಿನ ಅಂತಸ್ತು ಮೀಸಲು
ಸದ್ಧರ್ಮ ಸದನದ ಕೆಳ ಅಂತಸ್ತಿನಲ್ಲಿ ಕಾಶಿನಾಥಯ್ಯ ಶಿವನಗೌಡರ್‌– ರತ್ನಪ್ರಭಾ ದಂಪತಿ ವಾಸಿಸುತ್ತಿದ್ದರೆ ಮೇಲಂತಸ್ತು ಸಾಧು ಸಂತರಿಗೆ ಮೀಸಲಾಗಿದೆ. ಸ್ವಾಮೀಜಿಗಳು ಬಂದರೆ ಅವರ ವಾಸ್ತವ್ಯಕ್ಕಾಗಿ ಒಂದು ಕೊಠಡಿ ಅಡುಗೆ ಮನೆ ಪೂಜಾ ಮಂದಿರ ಭಕ್ತರಿಗೆ ದರ್ಶನ ಆಶೀರ್ವಾದ ಮಾಡಲು ಒಂದು ದೊಡ್ಡ ಹಜಾರವನ್ನು ಸಿದ್ಧಗೊಳಿಸಲಾಗಿದೆ. ‘ಸಾಧುಸಂತರ ಸೇವೆ ಮಾಡುವ ಕುಟುಂಬವದು. ಶ್ರೀಗಳು ಮನೆಗೆ ಬಂದರೆ ಕುಟುಂಬ ಸದಸ್ಯರು ಕಟ್ಟುನಿಟ್ಟಿನ ಮಡಿಯಲ್ಲಿ ಇದ್ದುಕೊಂಡು ಅಡುಗೆ ಮಾಡಿ ಬಡಿಸುತ್ತಿದ್ದರು. ಇಡೀ ಕುಟುಂಬದಲ್ಲಿ ಮುಗ್ಧತೆ ಇತ್ತು. ಭಕ್ತಿ ಮಾರ್ಗ ಬಿಟ್ಟು ಬೇರೇನೂ ತಿಳಿದವರಲ್ಲ. ಇಂತಹ ಕುಟುಂಬದಲ್ಲಿ ಹೀಗಾಗಬಾರದಾಗಿತ್ತು’ ಎಂದು ಕಾಶಿನಾಥಯ್ಯ ಶಿವನಗೌಡರ ಆತ್ಮೀಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT