ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ರೇಣುಕಾಸ್ವಾಮಿ ಹತ್ಯೆ; ಕಠಿಣ ಶಿಕ್ಷೆಗೆ ಒತ್ತಾಯ

Published 12 ಜೂನ್ 2024, 14:23 IST
Last Updated 12 ಜೂನ್ 2024, 14:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕುರಿತು ಸಮರ್ಪಕವಾಗಿ ತನಿಖೆ ನಡೆಸಿ, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಬೇಡ ಜಂಗಮ ಸಂಘಟನೆ ವತಿಯಿಂದ ಆಗ್ರಹಿಸಲಾಯಿತು.

ನಗರದ ಮಿನಿವಿಧಾನಸೌಧದಲ್ಲಿ ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗೆ ಸಂಘಟನೆಯ ಮುಖಂಡರು ಈ ಕುರಿತು ಬುಧವಾರ ಮನವಿ ಸಲ್ಲಿಸಿದರು.

ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ₹1 ಕೋಟಿ ಪರಿಹಾರ ನೀಡಬೇಕು. ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಯುವ ಘಟಕದ ಅಧ್ಯಕ್ಷ ನಿರಂಜನಯ್ಯ ಹಿರೇಮಠ, ಆಟೊ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮೊದಲಾದವರಿದ್ದರು.

ಸಮತಾ ಸೇನಾ, ವಿವಿಧ ದಲಿತ ಸಂಘ–ಸಂಸ್ಥೆಗಳ ಮಹಾಮಂಡಳ ಖಂಡನೆ: ‘ಹುಬ್ಬಳ್ಳಿಯಲ್ಲಿ ನೇಹಾ ಮತ್ತು ಅಂಜಲಿ ಹತ್ಯೆ ನಡೆದಾಗ ಬೀದಿಗಿಳಿದು ಬೊಬ್ಬೆ ಹೊಡೆದ ಹಿಂದೂ ಸಂಘಟನೆಯರು ಈಗ ಎಲ್ಲಿ ಕಾಣೆಯಾದರು’ ಎಂದು ಸಮತಾ ಸೇನಾ, ವಿವಿಧ ದಲಿತ ಸಂಘ– ಸಂಸ್ಥೆಗಳ ಮಹಾಮಂಡಳ ಪ್ರಶ್ನಿಸಿದೆ.

‘ಸಾವಿನ ಮನೆಯಲ್ಲಿ ರಾಜಕಾರಣ ಮಾಡುವ, ಹಿಂದೂಗಳ ಹೆಸರಿಗೆ ಮಸಿ ಬಳಿಯುವ ಸಂಘ ಹಾಗೂ ಪಕ್ಷಗಳಿಗೆ ರೇಣುಕಾಸ್ವಾಮಿ ಪತ್ನಿಯ ಕೂಗು ಕೇಳಲಿಲ್ಲವೇ? ನಟ ದರ್ಶನ ಮತ್ತು ಸಹಚರರಿಂದ ಹತ್ಯೆ ನಡೆದಿರುವುದಾಗಿ ತಿಳಿದೂ ಮೌನವಹಿಸಿವೆ’ ಎಂದು ಮಂಡಳದ ಪ್ರಮುಖ ಗುರುನಾಥ ಉಳ್ಳಿಕಾಶಿ ಪ್ರಕಟಣೆಯಲ್ಲಿ ಛೇಡಿಸಿದ್ದಾರೆ.

‘ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಶಿಕ್ಷೆ ನೀಡಬೇಕು. ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರಬಾರದು. ಶವ ರಾಜಕೀಯ ಬಿಟ್ಟು ದೇಶದ ಕಾನೂನು ಗೌರವಿಸುವುದನ್ನು ಹಲವರು ಕಲಿಬೇಕು’ ಎಂದು ತಿಳಿಸಿದ್ದಾರೆ.

ಚಿತ್ರರಂಗ ತಲೆತಗ್ಗಿಸುವಂತಾಗಿದೆ: ರೇಣುಕಾಸ್ವಾಮಿ ಹತ್ಯೆ ಸಂಬಂಧ ಚಿತ್ರನಟ ದರ್ಶನ್‌ ಬಂಧನವಾಗಿದ್ದು, ಇದರಿಂದ ಕನ್ನಡ ಚಿತ್ರರಂಗ ಮತ್ತು ಕನ್ನಡಾಭಿಮಾನಿಗಳು ತಲೆ ತಗ್ಗಿಸುವಂತಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಶಿವಾನಂದ ಮುತ್ತಣ್ಣವರ ತಿಳಿಸಿದ್ದಾರೆ.

ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಪೊಲೀಸರ ಗಮನಕ್ಕೆ ತರಬೇಕಿತ್ತು. ರಾಜ್‌ಕುಮಾರ್‌, ತೂಗುದೀಪ ಶ್ರೀನಿವಾಸ್‌  ಉತ್ತಮ ರೀತಿಯಲ್ಲಿ ಬದುಕಿದವರು. ಪೊಲೀಸ್‌ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ವಿಶ್ವಾಸವಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT