ಭಾನುವಾರ, ನವೆಂಬರ್ 27, 2022
26 °C
ಕೃಷಿಕ ಸಮಾಜದ ಕಾರ್ಯಕಾರಿಣಿಯಲ್ಲಿ ಚರ್ಚೆ

‘ಕಿಸಾನ್ ನರ್ಸರಿ’ ಪುನರಾರಂಭಕ್ಕೆ ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕಾಲುಬಾಯಿ ರೋಗಕ್ಕೆ ಜಿಲ್ಲೆಗೆ ಅಗತ್ಯವಿರುವ 2 ಲಕ್ಷ ಡೊಸ್ ಲಸಿಕೆ ಹಾಗೂ ಸಾಮಾಜಿಕ ಅರಣ್ಯ ಯೋಜನೆಯಡಿ ಜಾರಿಯಲಿದ್ದ ‘ಕಿಸಾನ್ ನರ್ಸರಿ’ ಯೋಜನೆಯನ್ನು ಪುನರಾರಂಭಿಸಲು ಸರ್ಕಾರಕ್ಕೆ ಮನವಿ ಸಲ್ಲಿಸುವ ಕುರಿತು ಕೃಷಿಕ ಸಮಾಜ ನಿರ್ಣಯ ಕೈಗೊಂಡಿತು.

ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಚಂದ್ರಶೇಖರಪ್ಪ ನೇತೃತ್ವದಲ್ಲಿ ಬುಧವಾರ ನಡೆದ ಕಾರ್ಯಕಾರಿಣಿಯಲ್ಲಿ ಈ ಕುರಿತು ಚರ್ಚೆ ನಡೆಯಿತು.

‘ಜಿಲ್ಲೆಯಲ್ಲಿ 45 ಸಾವಿರ ಕುಟುಂಬ ಕುರಿ ಸಾಕಾಣಿಕೆಯನ್ನೇ ಪ್ರಮುಖ ವೃತ್ತಿಯನ್ನಾಗಿಸಿಕೊಂಡಿವೆ. 17.5 ಲಕ್ಷ ಕುರಿಗಳು ಜಿಲ್ಲೆಯಲ್ಲಿವೆ. ಚರ್ಮ ಗಂಟು ರೋಗ ಜಿಲ್ಲೆಯಲ್ಲಿ ಕಂಡುಬಂದಿದೆ. ಇದಕ್ಕೆ ಲಸಿಕೆ ನೀಡಲಾಗುತ್ತಿದೆ. ರೋಗ ಕಂಡಬಂದ ಕುರಿಯನ್ನು ಹಿಂಡಿನಿಂದ ಪ್ರತ್ಯೇಕವಾಗಿರಿಸಬೇಕು’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಸಭೆಗೆ ತಿಳಿಸಿದರು.

‘ಅತಿವೃಷ್ಟಿಯಿಂದ ಜಿಲ್ಲೆಯಾದ್ಯಂತ 16,153 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. 14,242 ಹೆಕ್ಟೇರ್ ಈರುಳ್ಳಿ, 806 ಹೆಕ್ಟೇರ್ ಟೊಮೆಟೊ, 170 ಹೆಕ್ಟೇರ್ ಬಾಳೆ, 119 ಹೆಕ್ಟೇರ್ ಹಸಿಮೆಣಸಿಕಾಯಿ, 55 ಹೆಕ್ಟೇರ್ ಹೂವು, 28 ಹೆಕ್ಟೇರ್ ಕಲ್ಲಂಗಡಿ, 19 ಹೆಕ್ಟೇರ್ ಮಿಡಿಸೌತೆ, 10 ಹೆಕ್ಟೇರ್ ಎಲೆಕೋಸು ಹಾಗೂ 70 ಹೆಕ್ಟೇರ್ ಇತರೆ ತರಕಾರಿ ಬೆಳೆಗಳು ನಾಶವಾಗಿವೆ’ ಎಂದು ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಮಾಹಿತಿ ನೀಡಿದರು.

‘ಬೆಳೆಹಾನಿ ಸಮೀಕ್ಷೆ ಪ್ರಗತಿಯಲ್ಲಿದೆ. ದಾಳಿಂಬೆ, ತೆಂಗು, ಅಡಿಕೆ ಹಾಗೂ ಮಾವು ಬೆಳೆಗಳಿಗೆ ವಿಮಾ ಸೌಲಭ್ಯವಿದೆ. ರೈತರು ವಿಮೆ ಅರ್ಜಿಯನ್ನು ನೀಡಿದರೆ ತೆಂಗಿನ ತೋಟಕ್ಕೆ ಬಂದು ಪರಿಶೀಲಿಸಿ ವಿಮೆಯನ್ನು ಊರ್ಜಿತಗೊಳಿಸಲಾಗು
ವುದು. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ₹ 1.12 ಕೋಟಿ ಕ್ರಿಯಾಯೋಜನೆಗೆ ಅನುಮತಿ ನೀಡಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 71,158 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 50 ಸಾವಿರ ಹೆಕ್ಟೇರ್ ಮೆಕ್ಕಜೋಳ, 9,252 ಹೆಕ್ಟೇರ್ ಶೇಂಗಾ, 4,082 ಹೆಕ್ಟೇರ್ ಹತ್ತಿ, 3,227 ಹೆಕ್ಟೇರ್ ಹೆಸರು, 1,977 ಹೆಕ್ಟೇರ್ ರಾಗಿ, 1,915 ಹೆಕ್ಟೇರ್ ಸೂರ್ಯಕಾಂತಿ, 357 ಹೆಕ್ಟೇರ್ ಸಿರಿಧಾನ್ಯ, 61 ಹೆಕ್ಟೇರ್ ಸೋಯಾಬಿನ್ 29 ಹೆಕ್ಟೇರ್ ಜೋಳ ಬೆಳೆ ನಾಶವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಪಿ.ರಮೇಶಕುಮಾರ್‌ ತಿಳಿಸಿದರು.

ಕೃಷಿಕ ಸಮಾಜದ ಉಪಾಧ್ಯಕ್ಷ ಬಿ.ಟಿ.ಜಗದೀಶ್, ರಾಜ್ಯ ಪ್ರತಿನಿಧಿ ಎನ್.ಆರ್. ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಟಿ.ರೇವಣ್ಣ, ನಿರ್ದೇಶಕರಾದ ಎಸ್.ರಮೇಶಪ್ಪ, ಹನ್ನಿ ಹನುಮಂತರೆಡ್ಡಿ, ಜಿ.ಟಿ. ತಿಪ್ಪೇಶ್, ಎಚ್.ಆರ್. ತಿಮ್ಮಯ್ಯ, ಎಂ.ಎಸ್.ನವೀನ್, ಬಿ.ಕೃಷ್ಣಮೂರ್ತಿ, ವಿಶ್ವನಾಥ್, ಜಿ.ಎಸ್. ರವಿಕುಮಾರ್ ಇದ್ದರು.

ಪ್ರಕೃತಿ ವಿಕೋಪ, ಕೋಯ್ಲೇತರ ಬೆಳೆ ನಾಶಕ್ಕೆ ವಿಮೆ ಸೌಲಭ್ಯವಿದೆ. ರೈತರು ವೈಯಕ್ತಿಕವಾಗಿ ವಿಮೆ ಸೌಲಭ್ಯ ಪಡೆಯಬೇಕು. ಕಳೆದ ಬಾರಿ ₹ 96 ಕೋಟಿಗೂ ಅಧಿಕ ಬೆಳೆ ವಿಮೆ ಮೊತ್ತ ಜಿಲ್ಲೆಯ ರೈತರಿಗೆ ಲಭಿಸಿದೆ.

–ಪಿ.ರಮೇಶಕುಮಾರ್‌, ಜಂಟಿ ಕೃಷಿ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು