ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ | ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ

ಒಂದೇ ಕುಟುಂಬದ ಎರಡು ಹಸುಗೂಸು ಸೇರಿ ನಾಲ್ವರ ದುರ್ಮರಣ
Published 26 ಜನವರಿ 2024, 6:49 IST
Last Updated 26 ಜನವರಿ 2024, 6:49 IST
ಅಕ್ಷರ ಗಾತ್ರ

ಚಳ್ಳಕೆರೆ: ತಂಗಿಯ ಮದುವೆಯ ಸಂಭ್ರಮಕ್ಕೆ ಸಜ್ಜಾಗಿದ್ದ ಕುಟುಂಬದ ಮೇಲೆ ಈಗ ಸೂತಕದ ಛಾಯೆ ಆವರಿಸಿದೆ. ಸರಿಯಾಗಿ ಜಗತ್ತನ್ನೇ ನೋಡದ ಮುದ್ದಾದ ಕಂದಮ್ಮಗಳ ಜೊತೆಗೆ ವಯಸ್ಸಿಗೆ ಬಂದಿದ್ದ ತಮ್ಮನನ್ನು ಕಳೆದುಕೊಂಡಿರುವ ಅಣ್ಣಂದಿರು ದಿಕ್ಕೇ ತೋಚದಾಗಿದ್ದಾರೆ. ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದೆ.

‌ತಂಗಿಯ ನಿಶ್ಚಿತಾರ್ಥ ಕಾರ್ಯ ಮುಗಿಸಿಕೊಂಡು ದೇವದುರ್ಗದಿಂದ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ಲಿಂಗಪ್ಪ, ನಾಗಪ್ಪ ಹಾಗೂ ಸಿದ್ದಪ್ಪ ಅವರ ಕುಟುಂಬವು ನಾಲ್ವರನ್ನು ಕಳೆದುಕೊಂಡು ನೀರವ ಮೌನಕ್ಕೆ ಜಾರಿದ್ದಾರೆ.   

ಅಪಘಾತದಲ್ಲಿ ಮೃತಪಟ್ಟ ಕಂದಮ್ಮಗಳನ್ನು ಕಂಡು ಅಜ್ಜಿ ಲಕ್ಷ್ಮಮ್ಮ ಗೋಳಾಡುತ್ತಿದ್ದ ದೃಶ್ಯ ಕಲ್ಲು ಹೃದಯವೇ ಕರಗುವಂತಿತ್ತು. 

ತಾಲ್ಲೂಕಿನ ಸಾಣಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆರೆ ಗೇಟ್ ಬಳಿ ಗುರುವಾರ ಮೃತಪಟ್ಟ ನಾಲ್ವರು ಹಾಗೂ ಗಾಯಗೊಂಡ ನಾಲ್ವರು ಒಂದೇ ಕುಟುಂಬದವರು. ಮೃತಪಟ್ಟ ಲಿಂಗಪ್ಪ, ನಾಗಪ್ಪ ಪೂಜಾರಿಯ ದೊಡ್ಡಪ್ಪನ ಮಗ. ನಾಗಪ್ಪ ಕಾರು ಓಡಿಸುತ್ತಿದ್ದು, ನಿದ್ದೆಯ ಮಂಪರಿನಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿ ಹೊಡೆದಿತ್ತು. 

ಅಪಘಾತದಲ್ಲಿ ನಾಗಪ್ಪ ಗಾಯಗೊಂಡಿದ್ದರೆ, ಆತನ ಪುತ್ರಿ ಸಿಂಧುಶ್ರೀ (2), ಐದು ತಿಂಗಳ ಪುತ್ರ ಅಯ್ಯಳಪ್ಪ ಹಾಗೂ ಆತನ ತಮ್ಮ ಸಿದ್ದಪ್ಪನ ಪುತ್ರಿ, ಮೂರು ತಿಂಗಳ ರಕ್ಷಾ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ನಾಗಪ್ಪನ ಪತ್ನಿ ಯಲ್ಲಮ್ಮ, ಸಿದ್ದಪ್ಪನ ಪತ್ನಿ ಮಲ್ಲಮ್ಮ ಗಾಯಗೊಂಡಿದ್ದಾರೆ. ಸಿದ್ದಪ್ಪನ ಇನ್ನೊಬ್ಬ ಪುತ್ರಿ ರೇಣುಕಾ ಅಪಾಯದಿಂದ ಪಾರಾಗಿದ್ದಾರೆ.

ಕಂದಮ್ಮಗಳು ತಾಯಂದಿರ ಎದೆಯ ಮೇಲೆಯೆ ಅಸುನೀಗಿದ್ದ ದೃಶ್ಯ ಮನಕಲಕುವಂತಿತ್ತು.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ದೊಂಡಂಬಳ್ಳಿ ಗ್ರಾಮದ ಲಿಂಗಪ್ಪ, ನಾಗಪ್ಪ, ಸಿದ್ದಪ್ಪ ಅವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. 15 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅವರು ತಂಗಿಯ ನಿಶ್ಚಿತಾರ್ಥಕ್ಕೆ ದೇವದುರ್ಗಕ್ಕೆ ಹೋಗಿದ್ದರು. ಶುಭ ಕಾರ್ಯ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಹಾಲ್ಗೆನ್ನೆಯ ಕಂದಮ್ಮಗಳ ಮೃತದೇಹ ಕಂಡು ನೆರೆದಿದ್ದವರಲ್ಲೂ ದುಃಖ ಉಮ್ಮಳಿಸಿ ಬರುತ್ತಿತ್ತು.

‘ಜೊಲ್ಲು ಸುರಿಸುತಾ, ತಾಯಿಹಾಲ ಹೀರುತಾ, ಅಮ್ಮನ ಎದೆಗೆ ಅವುಚಿ ಬೆಚ್ಚಗೆ ಮಲಗಿ, ಬೆಳೆಯಬೇಕಿದ್ದ ಮೊಮ್ಮಕ್ಕಳು, ತನ್ನ ತಾಯಂದಿರಿಂದ ದೂರ ಸರುದೋದ್ವಲ್ಲೋ, ಅಯ್ಯೋ! ಎದ್ದೆಳ್ರೋ ಮೊಮ್ಮಕ್ಳರ್ರ. ಅಯ್ಯೋ! ಏನಾಯ್ತು ನಿಮ್ಗೆ ಮಾತಾಡ್ರೋ, ಕಣ್ಬಿಡ್ರಪ್ಪಾ’.. ಎಂದು ಅಜ್ಜಿ ಲಕ್ಷ್ಮಜ್ಜಿ, ಶವಾಗಾರದಲ್ಲಿದ್ದ ಮೊಮ್ಮಕ್ಕಳ ಮೃತದೇಹ ಮುಟ್ಟಿ ಮುಟ್ಟಿ ಎದೆ ಬಡಿದುಕೊಂಡು ಅಳುತ್ತಿದ್ದ ದೃಶ್ಯ ಕರಳು ಕಿತ್ತು ಬರುವಂತಿತ್ತು.

‘ನಾವೆಲ್ರೂ ಬೆಂಗಳೂರು ಸೇರಿ 15-20 ವರ್ಷ ಆಯ್ತು. ಹೊಟ್ಟೆ ಪಾಡಿಗೆ ಕೂಲಿ ಮಾಡಿಕೊಂಡಿದ್ವಿ, ಹಬ್ಬ, ಹರಿದಿನ, ಜಾತ್ರೆ, ಉತ್ಸವ ಸಂಬಂಧಿಗಳ ಮದ್ವೆ, ಮುಂಜಿ ಇದ್ದಾಗ ಮಾತ್ರ ಊರಿಗೆ ಬಂದ್ಹೋಗ್ತಿದ್ವಿ. ನಮ್‌ ಗ್ರಾಚಾರ ಇಂಗಾಯ್ತು. ಅಣ್ಣನ ಕಳಕೊಂಡೆ. ಕಂದಮ್ಮಗಳ ಕಳಕೊಂಡೆ. ಇನ್ಯಾವೂರು ಸೇರ್ಲಿ ನಾನೀನ್ನೆಂಗೆ ಬದುಕ್ಲಿ’ ಎಂದು ಮೃತ ಲಿಂಗಪ್ಪನ ತಮ್ಮ ಹೊನ್ನಯ್ಯ ಗೋಳಾಡುತ್ತಿದ್ದರು. 

‘ಬೆಂಗಳೂರಿನ ಶ್ರೀರಾಂಪುರದಲ್ಲಿ ರಸ್ತೆ ಬದಿ ಜೋಪಡಿಯಲ್ಲಿ ಇದ್ದು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದೆವು. ಒಂದೇ ಕುಟುಂಬದ ಅಣ್ಣ-ತಮ್ಮಂದಿರು ನಾವು ಒಟ್ಟಿಗೆ ಜೀವನ ಸಾಗಿಸುತ್ತಿದ್ವಿ. ನಾಲ್ವರನ್ನು ಕಳಕೊಂಡು ಈಗೇನ್ಮಾಡ್ಬೇಕು ಅಂತ ದಿಕ್ಕು ತೋಚುತ್ತಿಲ್ಲ’ ಎಂದು ಮೃತ ಲಿಂಗಪ್ಪನ ಸಂಬಂಧಿ ರಮೇಶ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT