ಶುಕ್ರವಾರ, ಮೇ 14, 2021
32 °C
ವಾಣಿಜ್ಯ ಮಳಿಗೆಗೆ ಕೊರೊನಾ ಸೋಂಕಿಗಿಂತ ರಸ್ತೆ ಕಾಮಗಾರಿಯೇ ಅಡ್ಡಿ

ವ್ಯಾಪಾರ ವಹಿವಾಟು ಸಂಪೂರ್ಣ ಖೋತಾ

ಜಿ.ಬಿ. ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಲಾಕ್‌ಡೌನ್‌ ಹಾಗೂ ಕೊರೊನಾ ಸೋಂಕಿನ ಪರಿಣಾಮವನ್ನು ಹೇಗೊ ನಿಭಾಯಿಸುತ್ತೇವೆ. ಆದರೆ, ರಸ್ತೆ ಕಿತ್ತು ಹಾಕಿ ಗ್ರಾಹಕರು ಅಂಗಡಿಗೆ ಬಾರದಂತೆ ಮಾಡಿದ ರೀತಿಯನ್ನು ಮಾತ್ರ ಕ್ಷಮಿಸಲಾರೆವು. ಬಾಡಿಗೆ ಕಟ್ಟಲು ಸಾಧ್ಯವಾಗದ ಸ್ಥಿತಿಯಲ್ಲಿ ನರಳುತ್ತಿದ್ದೇವೆ...’

ಹೊಳಲ್ಕೆರೆ ರಸ್ತೆಯ ಕಿರಾಣಿ ಅಂಗಡಿಯ ಮಾಲೀಕರೊಬ್ಬರು ತೋಡಿಕೊಂಡ ನೋವಿದು. ಒಂದು ವರ್ಷದಿಂದ ಅವರ ವ್ಯಾಪಾರ ವಹಿವಾಟಿಗೆ ಪೆಟ್ಟು ಬಿದ್ದಿದೆ. ನಿತ್ಯ ಅಂಗಡಿಯ ಬಾಗಿಲು ತೆರೆದು ಗ್ರಾಹಕರಿಗೆ ಕಾಯುತ್ತಿದ್ದಾರೆ. ರಸ್ತೆ ನಿರ್ಮಾಣ ಕಾಮಗಾರಿ ಮುಗಿಯುವ ಸಮಯವನ್ನು ಎದುರು ನೋಡುತ್ತಿದ್ದಾರೆ.

ಇದು ಒಬ್ಬ ವ್ಯಾಪಾರಿಯ ಸಂಕಟವಲ್ಲ. ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡ ಪ್ರಮುಖ ರಸ್ತೆಯ ವಾಣಿಜ್ಯ ಮಳಿಗೆಯ ಮಾಲೀಕರ ನೋವು ಇದಕ್ಕಿಂತ ಭಿನ್ನವಾಗಿಲ್ಲ. ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ವಹಿವಾಟಿಗೆ ನೆರವಾಗುವಂತೆ ಗುತ್ತಿಗೆದಾರರು, ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇವರ ಮನವಿಗೆ ಲೋಕೋಪಯೋಗಿ ಇಲಾಖೆ ಸ್ಪಂದಿಸಿದಂತೆ ಕಾಣುತ್ತಿಲ್ಲ.

ಹೊಳಲ್ಕೆರೆ ರಸ್ತೆಯಲ್ಲಿ ಕಿರಾಣಿ ಅಂಗಡಿಗಳೇ ಹೆಚ್ಚಾಗಿವೆ. ಔಷಧ ಮಳಿಗೆ, ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಅಂಗಡಿ, ಹೋಟೆಲ್‌ಗಳು ಇವೆ. ದಾವಣಗೆರೆ ರಸ್ತೆಯಲ್ಲಿ ಬ್ಯಾಂಕ್‌, ಸೂಪರ್‌ ಮಾರ್ಕೆಟ್‌, ಪೆಟ್ರೋಲ್‌ ಬಂಕ್‌ ಸೇರಿ ಹಲವು ಉದ್ದಿಮೆಗಳಿವೆ. ಸುಮಾರು ಹತ್ತು ತಿಂಗಳಿಂದ ಈ ಎರಡೂ ಮಾರ್ಗಗಳಲ್ಲಿ ಸರಿಯಾದ ವಹಿವಾಟು ನಡೆಯುತ್ತಿಲ್ಲ.

‘45 ವರ್ಷದಿಂದ ಕಿರಾಣಿ ಅಂಗಡಿ ನಡೆಸುತ್ತಿದ್ದೇವೆ. ಇಂತಹ ಸಮಸ್ಯೆ ಯಾವತ್ತೂ ಎದುರಾಗಿರಲಿಲ್ಲ. ರಸ್ತೆ ಕಿತ್ತುಹಾಕಿದ್ದರಿಂದ ಗ್ರಾಹಕರು ಬರುತ್ತಿಲ್ಲ. ಗ್ರಾಹಕರು ಕೈಬಿಟ್ಟು ಹೋಗುವ ಆತಂಕ ಕಾಡುತ್ತಿದೆ’ ಎನ್ನುತ್ತಾರೆ ಶಶಾಂಕ್‌.

ಹೊಳಲ್ಕೆರೆ ರಸ್ತೆಯ ಒಂದು ಬದಿಗೆ ಸಿಮೆಂಟ್‌ ರಸ್ತೆ ನಿರ್ಮಾಣವಾಗಿದೆ. ಮತ್ತೊಂದು ಬದಿಯ ರಸ್ತೆಯಲ್ಲಿ ಕಂದಕ ಸೃಷ್ಟಿಯಾಗಿದೆ. ಇಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಎರಡು ತಿಂಗಳ ಹಿಂದೆ ಅಗೆದ ರಸ್ತೆ ಇನ್ನೂ ದುರಸ್ತಿ ಆಗಿಲ್ಲ. ಇದರಿಂದ ಅನೇಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಈ ರಸ್ತೆಯಲ್ಲಿರುವ ಅಂಗಡಿಗಳಿಗೆ ಗ್ರಾಹಕರು ಭೇಟಿ ನೀಡುತ್ತಿಲ್ಲ.

ಸಿ.ಸಿ. ರಸ್ತೆ ನಿರ್ಮಾಣವಾಗಿರುವ ಸ್ಥಳದಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಕಿರಿದಾದ ರಸ್ತೆಯಲ್ಲೇ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವಾಹನ ನಿಲುಗಡೆ ಮಾಡಿದರೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಹೀಗಾಗಿ, ಮತ್ತೊಂದು ಬದಿಯ ವಾಣಿಜ್ಯ ಮಳಿಗೆಯ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀಲಕಂಠೇಶ್ವರ
ದೇಗುಲ ಸಮೀಪದ ರಸ್ತೆ ಬದಿಯಲ್ಲಿ ಹೂ, ಹಣ್ಣು ಮಾರಾಟ ಮಾಡುತ್ತಿದ್ದವರ ಬದುಕು ಇನ್ನಷ್ಟು ದುರ್ಬರವಾಗುತ್ತಿದೆ.

‘ಎರಡು ವರ್ಷಗಳಿಂದ ಹೋಟೆಲ್‌ ನಡೆಸುತ್ತಿದ್ದೇವೆ. ನಿತ್ಯ ಬೆಳಿಗ್ಗೆ 100ಕ್ಕೂ ಹೆಚ್ಚು ಜನರು ಉಪಾಹಾರ ಸೇವಿಸುತ್ತಿದ್ದರು. ರಸ್ತೆ ಅಗೆದು ಹಾಕಿದ ಬಳಿಕ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ, ಬೆಳಗಿನ ಉಪಾಹಾರವನ್ನು ನಿಲ್ಲಿಸಿದ್ದೇವೆ. ಮಧ್ಯಾಹ್ನ ಮಾತ್ರ ಉತ್ತರ ಭಾರತ ಶೈಲಿಯ ಊಟವನ್ನು ಪೂರೈಕೆ ಮಾಡುತ್ತಿದ್ದೇವೆ. ಕಟ್ಟಡದ ಬಾಡಿಗೆ, ಕೆಲಸಗಾರರ ಸಂಬಳಕ್ಕೂ ಸಾಕಾಗುತ್ತಿಲ್ಲ’ ಎನ್ನುತ್ತಾರೆ ಹೋಟೆಲ್‌ ಸಂತೃಪ್ತಿಯ ಅಭಿಲಾಷ್‌.

ದೊಡ್ಡಪೇಟೆ ರಾಜಬೀದಿಯಲ್ಲಿಯೂ ಇದೇ ಸಮಸ್ಯೆ ಉಂಟಾಗಿದೆ. ವಾಹನ ಸಂಚಾರಕ್ಕೆ ಅವಕಾಶ ಇಲ್ಲದಂತೆ ರಸ್ತೆ ಅಗೆದು ಹಾಕಿ ಒಂದೂವರೆ ತಿಂಗಳು ಕಳೆದಿದೆ. ರಸ್ತೆ ನಿರ್ಮಾಣದ ಆರಂಭದ ಲಕ್ಷಣಗಳು ಇನ್ನೂ ಗೋಚರಿಸುತ್ತಿಲ್ಲ. ಹೋಟೆಲ್‌, ಖಾನಾವಳಿ, ಔಷಧ ಮಳಿಗೆ ಹೀಗೆ ಹಲವು ಅಂಗಡಿಗಳ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಅನೇಕರು ತಾತ್ಕಾಲಿಕವಾಗಿ ಅಂಗಡಿಗಳ ಬಾಗಿಲು ಹಾಕಿದ್ದಾರೆ. 

ಮಳೆ ಬಿದ್ದರೆ ಕೆಸರು ಗದ್ದೆ

ಮಳೆ ಬಿದ್ದರೆ ನಗರದ ಹಲವು ರಸ್ತೆಗಳು ಕೆಸರು ಗದ್ದೆಗಳಂತೆ ಕಾಣಿಸಿಕೊಳ್ಳುತ್ತವೆ. ವಾರಗಟ್ಟಲೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿವೆ.

ಇತ್ತೀಚೆಗೆ ಸುರಿದ ಮಳೆಗೆ ಹೊಳಲ್ಕೆರೆ ರಸ್ತೆಯ ಕುಬೇರ ಮೆಡಿಕಲ್ಸ್‌ನಿಂದ ದೇಗುಲದವರೆಗೆ ನೀರು ನಿಂತಿತ್ತು. ಸುಮಾರು ನಾಲ್ಕು ಅಡಿಯಷ್ಟು ನೀರು ನಿಂತಿದ್ದರಿಂದ ಜನ ಮತ್ತು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರಸ್ತೆಯ ಬದಿಯ ಮಳಿಗೆಯ ಮಾಲೀಕರು, ನಿವಾಸಿಗಳು ಸ್ಥಳೀಯ ಕಾರ್ಪೊರೇಟರ್‌ ನೆರವು ಕೋರಿದರೂ ಪ್ರಯೋಜನವಾಗಿಲ್ಲ.

ಆಯತಪ್ಪಿ ಬೀಳುತ್ತಿವೆ ವಾಹನ

ನಿರ್ಮಾಣ ಹಂತದಲ್ಲಿರುವ ರಸ್ತೆಗಳಲ್ಲಿ ಗುತ್ತಿಗೆದಾರರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಲ್ಲ. ಹೀಗಾಗಿ, ವಾಹನ ಸವಾರರು ಆಯತಪ್ಪಿ ಬೀಳುವುದು ಮಾಮೂಲಿ ಎನ್ನುವಂತಾಗಿದೆ.

ಗಾಂಧಿ ವೃತ್ತದಿಂದ ಕನಕ ವೃತ್ತದವರೆಗಿನ ಮಾರ್ಗದಲ್ಲಿ ಒಳಚರಂಡಿಯ ಚೇಂಬರ್‌ಗಳು ಅಲ್ಲಲ್ಲಿ ಬಾಯ್ತೆರೆದಿವೆ. ಮಳೆ ಬಂದಾಗ ಇವು ಕಾಣಿಸುವುದಿಲ್ಲ. ಚೇಂಬರ್‌ ಸಮೀಪದಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿಲ್ಲ. ಇತ್ತೀಚೆಗೆ ಎರಡು ಆಟೊಗಳು ರಸ್ತೆಯಲ್ಲೇ ಉರುಳಿ ಬಿದ್ದಿವೆ. ದ್ವಿಚಕ್ರ ವಾಹನ ಸವಾರರು ನಿತ್ಯವೂ ಬೀಳುತ್ತಿದ್ದಾರೆ.

ಗ್ರಾಹಕರು ಅಂಗಡಿಗೆ ಬರಲು ದಾರಿಯೇ ಇಲ್ಲ. ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸಿಲ್ಲ. ಹಲವು ತಿಂಗಳಿಂದ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ.
–ಶಶಾಂಕ್‌, ಕಿರಾಣಿ ಅಂಗಡಿ ಮಾಲೀಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.