ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯರಸ್ತೆ ವಿಸ್ತರಣೆಗೆ ಶಂಕುಸ್ಥಾಪನೆ ಇಂದು

ಎರಡೂ ಬದಿ 30 ಮೀಟರ್, 4 ಪಥದ ರಸ್ತೆ
Last Updated 2 ಜನವರಿ 2022, 5:07 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಪಟ್ಟಣದ ಮುಖ್ಯರಸ್ತೆ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಡಿ. 2ರಂದು ಕಾಮಗಾರಿಗೆ ಶಂಕುಸ್ಥಾಪನೆ ನಿಗದಿಯಾಗಿದೆ.

'ಪಟ್ಟಣ ಅಭಿವೃದ್ಧಿ ಹೊಂದಿಲ್ಲ' ಎಂಬ ಆಪಾದನೆಗೆ ಮುಖ್ಯರಸ್ತೆ ವಿಸ್ತರಣೆ ಆಗದಿರುವುದು ಸಾಕಷ್ಟು ಒತ್ತು ನೀಡಿತ್ತು. 30ಕ್ಕೂ ಹೆಚ್ಚು ವರ್ಷಗಳಿಂದ ಈ ರಸ್ತೆಯನ್ನು ವಿಸ್ತರಣೆ ಮಾಡಲಾಗುವುದು ಎಂಬ ವದಂತಿಯಿಂದಾಗಿ ರಸ್ತೆ ಬದಿ ಮನೆಗಳ, ಅಂಗಡಿಗಳ ಮಾಲೀಕರು ಕಟ್ಟಡ ನವೀಕರಣ, ದುರಸ್ತಿ ಮಾಡಿಸದ ಕಾರಣ ಮುಖ್ಯರಸ್ತೆ ಅಂದವಾಗಿ ಕಾಣಲು ಸಾಧ್ಯವಾಗಿರಲಿಲ್ಲ.

ಇಲ್ಲಿ ಹಾದು ಹೋಗಿರುವ ಮುಖ್ಯರಸ್ತೆಯು ಹಾನಗಲ್- ರಾಯದುರ್ಗ ಸಂಪರ್ಕ ರಸ್ತೆಯಾಗಿದೆ. ರಾಜ್ಯಹೆದ್ದಾರಿಯಾಗಿದ್ದ ಈ ರಸ್ತೆಯನ್ನು ಈಚೆಗೆ

ಹೈದರಾಬಾದ್- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಸೀಮಾಂಧ್ರದ ರಾಯದುರ್ಗದಲ್ಲಿ ಇದಕ್ಕೆ ಸಂಬಂಧಪಟ್ಟ ರಸ್ತೆ ವಿಸ್ತರಣೆ ಈಗಾಗಲೇ ಪೂರ್ಣವಾಗಿದೆ. ವರ್ಷದ ಹಿಂದೆ ಆರಂಭವಾಗಬೇಕಿದ್ದ ಈ ಕಾರ್ಯ ಕೆಲವು ತಾಂತ್ರಿಕ ಮಂಜೂರಾತಿಯಿಂದಾಗಿ ವಿಳಂಬವಾಗಿದೆ ಎನ್ನಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ. ಲಕ್ಷ್ಮಣ್ ಮಾಹಿತಿ ನೀಡಿ, ‘ಹಾನಗಲ್ ರಸ್ತೆಯಲ್ಲಿರುವ ಅಗ್ನಿಶಾಮಕ ದಳ ಕಚೇರಿ ಬಳಿಯಿಂದ ರಾಯದುರ್ಗ ರಸ್ತೆಯ ಆಂಧ್ರದ ಗಡಿಯವರೆಗಿನ 4.6 ಕಿ.ಮೀ. ದೂರದ ರಸ್ತೆ ವಿಸ್ತರಣೆಯಾಗಲಿದೆ. ಇದರಲ್ಲಿ ಪಿ.ಟಿ. ಹಟ್ಟಿ ಬಳಿ ನೂತನವಾಗಿ ನಿರ್ಮಿಸಿರುವ ತಾಲ್ಲೂಕು ಕಚೇರಿಯಿಂದ ಪಲ್ಲಳ್ಳಿ ತಿಮ್ಮಪ್ಪ ಬಡಾವಣೆಯವರೆಗಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ವಿಸ್ತರಣೆ ಮಾಡಲಾಗುವುದು. ಇದರಲ್ಲಿ ತಲಾ ಎರಡು ಪಥ ಏಕಮುಖವಾಗಿರುತ್ತದೆ. ಉಳಿದ ಕಡೆ ದ್ವಿಪಥ ರಸ್ತೆಯಾಗಲಿದೆ’ ಎಂದರು.

‘ರಸ್ತೆಯ ಪ್ರತಿ ಬದಿಯನ್ನು 15 ಮೀಟರ್ ವಿಸ್ತರಣೆ ಮಾಡಲಾಗುತ್ತಿದೆ. ಇದರಲ್ಲಿ 19.5 ಮೀಟರ್ ರಸ್ತೆ, ಉಳಿದಿದ್ದರಲ್ಲಿ ಚರಂಡಿ, ಪಾದಚಾರಿ ರಸ್ತೆ, ವಿದ್ಯುತ್ ಕಂಬ, ಡಿವೈಡರ್, ಸಸಿ ನೆಡುವುದಕ್ಕೆ ಮೀಸಲಿಡಲಾಗುವುದು. ಈಗಾಗಲೇ ನೆಲಸಮ ಆಗಬೇಕಿರುವ ಕಟ್ಟಡಗಳ ಪಟ್ಟಿ ಮಾಡಲಾಗಿದ್ದು, ಸರ್ಕಾರಿ ಕಚೇರಿ ಜಾಗದಲ್ಲಿ ಹೆಚ್ಚು ರಸ್ತೆ ಸಾಗಲಿದೆ’ ಎಂದರು.

ಮಂಡಲ ಬಿಜೆಪಿ ಅಧ್ಯಕ್ಷ ಡಾ.ಪಿ.ಎಂ. ಮಂಜುನಾಥ್ ಮಾತನಾಡಿ, ‘ದಶಕಗಳ ಕನಸಾದ ಈ ರಸ್ತೆ ಕಾಮಗಾರಿಯು ಐತಿಹಾಸಿಕವಾಗಲಿದೆ. ಇದರಿಂದ ಪಟ್ಟಣ ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಹೊಂದಲು, ಅಂದವಾಗಿ ಕಾಣಲು ಸಹಕಾರಿಯಾಗಲಿದೆ. ದಾವಣಗೆರೆಯ ಮೂಲಕ ಗುತ್ತಿಗೆದಾರರು ನಿರ್ಮಾಣ ಹೊಣೆ ಹೊತ್ತಿದ್ದಾರೆ. ಇಂದು ವರ್ಷದಲ್ಲಿ ಕಾಮಗಾರಿ ಪೂರ್ಣವಾಗುವ ಗುರಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 544-ಡಿ ಯೋಜನೆಯ ಅಡಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

₹ 30 ಕೋಟಿ ವೆಚ್ಚದಲ್ಲಿ ಕಾಮಗಾರಿ

₹ 30 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ವಿಸ್ತರಣೆಗೆ ಡಿ. 2ರಂದು ಮಧ್ಯಾಹ್ನ 1ಕ್ಕೆ ಭೂಮಿಪೂಜೆ ನಿಗದಿ ಮಾಡಲಾಗಿದೆ.

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಭಾಗವಹಿಸಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕಾಂತರಾಜ್ ತಿಳಿಸಿದ್ದಾರೆ.

..........

ರಸ್ತೆ ವಿಸ್ತರಣೆಗೆ ನಾಗರಿಕರಿಂದ ಯಾವುದೇ ಅಡ್ಡಿಯಿಲ್ಲ. ಪಟ್ಟಣ ಅಭಿವೃದ್ಧಿಯಾದರೆ ಸಾಕು ಎಂಬ ನಿಲುವು ಹೊಂದಿದ್ದಾರೆ. ಸ್ವಯಂ ಪ್ರೇರಿತವಾಗಿ ಕಾರ್ಯದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

- ಪಿ. ಲಕ್ಷ್ಮಣ್, ಪಟ್ಟಣ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT