ಶನಿವಾರ, ಮೇ 28, 2022
31 °C
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಾಲಕೃಷ್ಣ

ಚಾಲಕನ ತಪ್ಪಿನಿಂದ ಸಂಭವಿಸುವ ಅಪಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಅಪಘಾತಗಳು ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ಬಹುತೇಕ ಅಪಘಾತಗಳಿಗೆ ಚಾಲಕನ ತಪ್ಪೇ ಕಾರಣ ಆಗಿರುತ್ತದೆ. ಇಂತಹ ಅಪಘಾತದಲ್ಲಿ ಬಹುತೇಕ ಯುವಕರೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಎಸ್.ಬಾಲಕೃಷ್ಣ ತಿಳಿಸಿದರು.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಸಾರಿಗೆ ಇಲಾಖೆ, ನೆಹರೂ ಯುವ ಕೇಂದ್ರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವವರಲ್ಲಿ ಯುವಕರ ಪಾಲು ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆ. ಅಪಘಾತಕ್ಕೆ ಬಲಿಯಾಗುವವರಲ್ಲಿ ಶೇ 60ಕ್ಕಿಂತ ಹೆಚ್ಚು ಯುವಕರೇ ಇರುತ್ತಾರೆ. ಅತಿವೇಗ, ಮದ್ಯ ಸೇವಿಸಿ ವಾಹನ ಚಾಲನೆ ಹಾಗೂ ಮೊಬೈಲ್‌ ಬಳಕೆಯ ಕಾರಣಕ್ಕೆ ಅಪಘಾತಗಳು ಸಂಭವಿಸುತ್ತಿವೆ’ ಎಂದು ಹೇಳಿದರು.

‘ಚಾಲಕರು ಹಾಗೂ ಪ್ರಯಾಣಿಕರಿಗೆ ಕೆಲ ಸುರಕ್ಷತಾ ಸಾಧನಗಳನ್ನು ನೀಡಲಾಗಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಇದೇ ರೀತಿ ಕಾರು ಚಾಲಕರು ಸೀಟ್‌ಬೆಲ್ಟ್‌ ಧರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಡಾ.ಗುಡ್ಡದೇಶ್ವರಪ್ಪ ಮಾತನಾಡಿ, ‘ಯುವ ಜನರು ದೇಶದ ಆಸ್ತಿ. ತಮ್ಮ ಸುರಕ್ಷತೆಗಾಗಿ ಹಾಗೂ ಕುಟುಂಬದವರ ಬಗ್ಗೆ ಕಾಳಜಿ ವಹಿಸಿ ವಾಹನ ಚಲಾಯಿಸಬೇಕು. ಅಫಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ನೆಹರೂ ಯುವ ಕೇಂದ್ರದ ಯುವ ಜನ ಅಧಿಕಾರಿ ಎನ್‌.ಸುಹಾಸ್, ರೆಡ್‌ಕ್ರಾಸ್ ಕಾರ್ಯದರ್ಶಿ ಮಜಹರ್ ಉಲ್ಲಾ, ಖಜಾಂಚಿ ಅರುಣ್ ಕುಮಾರ್, ಗಾಯತ್ರಿ ಶಿವರಾಂ, ಪ್ರೊ.ಅಶ್ವಥ್, ಡಾ.ಬಸವರಾಜ್, ಪ್ರೊ.ನಯಜ್ ಅಹಮದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.