ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಮೊಲ: ಸಂಕ್ರಾಂತಿ ಹಬ್ಬವೇ ಮುಂದೂಡಿಕೆ!

ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮಸ್ಥರ ವಿಶಿಷ್ಟ ನಂಬಿಕೆ
Last Updated 15 ಜನವರಿ 2021, 1:40 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಗುರುವಾರ ಕಾಡಿನಲ್ಲಿ ಜೀವಂತ ಮೊಲ ಸಿಗದಿದ್ದರಿಂದ ಗ್ರಾಮಸ್ಥರು ಸಂಕ್ರಾಂತಿ ಹಬ್ಬದ ಆಚರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದಾರೆ.

ಕಂಚೀವರದರಾಜಸ್ವಾಮಿ ಭಕ್ತರು ಮಕರ ಸಂಕ್ರಾಂತಿ ದಿನ ಕಾಡಿನಲ್ಲಿ ಬೇಟೆಯಾಡಿ ಮೊಲವೊಂದನ್ನು ಜೀವಂತವಾಗಿ ಹಿಡಿದು ದೇಗುಲಕ್ಕೆ ತರುತ್ತಾರೆ. ನಂತರ ಅದರ ಕಿವಿಚುಚ್ಚಿ ಓಲೆ ಹಾಕಿ, ವಿಶೇಷ ಅಲಂಕಾರ ಮಾಡಿ, ನಾಮಧಾರಣೆ ಮಾಡುವ ಮೂಲಕ ರಾಜಬೀದಿಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡುತ್ತಾರೆ. ನಂತರ ಆ ಮೊಲಕ್ಕೆ ಸ್ವಲ್ಪವೂ ಪೆಟ್ಟು ಮಾಡದಂತೆ ಪುನಃ ಕಾಡಿಗೆ ಬಿಡುವ ಮೂಲಕ ಇಲ್ಲಿನ ಜನರು ಸಂಕ್ರಾಂತಿ ಆಚರಿಸುವುದು ವಿಶೇಷ.

ಪ್ರತಿವರ್ಷದಂತೆ ಈ ವರ್ಷವು ಸಂಕ್ರಾಂತಿ ದಿನ ಬೆಳಿಗ್ಗೆ 10 ಗಂಟೆಗೆ ಬೇಟೆಗಾರಿಕೆಯಲ್ಲಿ ನಿಪುಣತೆ ಹೊಂದಿರುವ ಸುಮಾರು 35 ಮಂದಿ ತಂಡವು ದೇಗುಲದಲ್ಲಿ ನಾಮಧಾರಣೆ ಮಾಡಿಕೊಂಡು ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಹೆಗಲ ಮೇಲೆ ಮೊಲ ಹಿಡಿಯುವ ಐದಾರು ಬಲೆ ಹಾಕಿಕೊಂಡು, ಕಂಚೀವರದರಾಜಸ್ವಾಮಿ ಗೋವಿಂದಾ.. ಗೋವಿಂದಾ... ಎಂಬ ಘೋಷಣೆ ಕೂಗುತ್ತ ಸಮೀಪದ ಕಾಡಿಗೆ ಹೋಗಿದ್ದರು. ಮೊಲ ಹಿಡಿಯುವುದನ್ನು ನೋಡಬೇಕೆಂಬ ಕುತೂಹಲದಿಂದ ಈ ಬಾರಿ ನೂರಾರು ಮಕ್ಕಳು ಕಾಡಿಗೆ ಹೋಗಿದ್ದು ವಿಶಿಷ್ಟವಾಗಿತ್ತು.

ಆದರೆ, ಈ ಬಾರಿ ಕಾಡಿಗೆ ಹೋದ ಬೇಟೆಗಾರರಿಗೆ ಸಂಜೆ 6.30 ಆದರೂ ಮೊಲ ಸಿಗಲಿಲ್ಲ. ದಿನವಿಡೀ ಮೊಲ ಹಿಡಿದುಕೊಂಡು ಹೋಗಲೇಬೇಕು. ಸಂಕ್ರಾಂತಿಯನ್ನು ಇಂದೇ ಆಚರಿಸಬೇಕು ಎಂಬ ನಿರೀಕ್ಷೆಯಿಂದ ಕಾಡಿನಲ್ಲಿ ಮೊಲ ಸುತ್ತಾಡಿರುವ ಜಾಗ ನೋಡಿ ಐದಾರು ಬಲೆಯನ್ನು ಹೂಡಿದ್ದರು.

ಬೇಟೆಗಾರಿಕೆಯಲ್ಲಿ ಅನುಭವ ಇರುವಂತಹ ಏಳೆಂಟು ಜನರು ಬೇಟೆಗಾರಿಕೆಯ ಬೆತ್ತ ಹಿಡಿದು ಗೋವಿಂದಾ.. ಗೋವಿಂದಾ... ಹುಷ್‌..ಹುಷ್‌.. ಹೇ... ಹೇ... ಎಂಬ ಶಬ್ಧ ಮಾಡುತ್ತಾ ಮೊಲ ಕೂತಿರಬಹುದಾದ ಪೊದೆಯನ್ನು ಬೆತ್ತದಿಂದ ಅಲ್ಲಾಡಿಸಿ ಶೋಧಿಸಿದರೈ ಮೊಲ ಸಿಗಲಿಲ್ಲ. ಇದರಿಂದಾಗಿ ನಿರಾಸೆಯನ್ನುಂಟು ಮಾಡಿದೆ. ಮೊಲ ಸಿಗುವ ವರೆಗೂ ಗ್ರಾಮಸ್ಥರು ಸಂಕ್ರಾಂತಿ ಆಚರಿಸುವುದಿಲ್ಲ. ಹಾಗಾಗಿ ಶುಕ್ರವಾರ ಬೆಳಿಗ್ಗೆಯಿಂದ ಮೊಲ ಹಿಡಿಯಲು ಮತ್ತೆ ಬೇಟೆಗಾರಿಕೆ ಮುಂದುವರಿಸಲಿದ್ದಾರೆ ಎಂದು ಗ್ರಾಮದ ಮಾರುತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT