ಸೋಮವಾರ, ಮಾರ್ಚ್ 27, 2023
31 °C

ಚಿತ್ರದುರ್ಗ: ಸವಿತಾ ಮಹರ್ಷಿ ತತ್ವ ಸಾರ್ವಕಾಲಿಕ:. ತಿಪ್ಪಾರೆಡ್ಡಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಮನುಕುಲದ ಶ್ರೇಯಸ್ಸಿಗೆ ಕಾಯಕ ತತ್ವಗಳನ್ನು ಒಳಗೊಂಡ ಉತ್ತಮ ಸಂದೇಶ ನೀಡಿದ ಮಹನೀಯರು ಸವಿತಾ ಮಹರ್ಷಿ. ಅವರು ಪ್ರತಿಪಾದಿಸಿದ ತತ್ವ ಎಲ್ಲ ವರ್ಗಗಳಿಗೂ ಅನ್ವಯಿಸುತ್ತದೆ’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ಶನಿವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿಯಲ್ಲಿ ಅವರು ಮಾತನಾಡಿದರು.

‘ಸವಿತಾ ಮಹರ್ಷಿ ಸಿದ್ಧಾಂತ ಮತ್ತು ಬೋಧನೆ ಬಹಳ ಜನರಿಗೆ ತಿಳಿದಿಲ್ಲ. ಮನುಕುಲದ ಉದ್ಧಾರಕ್ಕಾಗಿ ಅವರು ನೀಡಿರುವ ಸಂದೇಶ ಉತ್ತಮ ಸಮಾಜಕ್ಕೆ ಸ್ಫೂರ್ತಿಯಾಗಿದೆ. ಪ್ರತಿ ಹಳ್ಳಿಯಲ್ಲಿ ಸವಿತಾ ಸಮಾಜ
ನೆಲೆಸಿದ್ದು, ಪ್ರತಿಯೊಂದು ಶುಭ ಕಾರ್ಯಗಳಿಗೂ ಈ ಸಮಾಜ ಸೇವೆ ಸಲ್ಲಿಸುತ್ತದೆ’ ಎಂದರು.

‘ಸಾಧಕರ ಜಯಂತಿ ಆಯಾ ವರ್ಗದ ಸಮಾಜಕ್ಕೆ ಸೀಮಿತವಾಗುತ್ತಿರುವುದು ಸರಿಯಲ್ಲ. ಇಂತಹ ಜಯಂತಿಗಳಿಗೆ ಎಲ್ಲ ಸಮುದಾಯದವರು ಪಾಲ್ಗೊಳ್ಳಬೇಕು. ಆಧುನಿಕ ವ್ಯವಸ್ಥೆಯಲ್ಲಿ ಸವಿತಾ ಸಮಾಜದವರ ಕಾಯಕದ ಸ್ವರೂಪವೂ ಬದಲಾಗಿದೆ. ಸವಿತಾ ಸಮುದಾಯವಷ್ಟೇ ಅಲ್ಲದೆ ಬೇರೆ ಸಮಾಜದವರೂ ಈ ಕಾಯಕ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ‘ಸವಿತಾ ಸಮಾಜ ಕ್ಷೌರಿಕ ವೃತ್ತಿ ಪರಂಪರೆ ಉಳಿಸಿಕೊಂಡಿದೆ. ಉದ್ಯೋಗವಾಗಿ ಇದನ್ನು ಸ್ವೀಕರಿಸಲಾಗಿದೆ. ಆಧುನಿಕ ಜಗತ್ತಿಗೆ ತಕ್ಕಂತೆ ಅವರ ಕಾಯಕ ಶೈಲಿಯೂ ಬದಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಮತ್ತು ಶಿಕ್ಷಣವನ್ನು ಪಡೆಯುವಲ್ಲಿ ಈ ಸಮಾಜ ಮುಂಚೂಣಿಯಲ್ಲಿದೆ’ ಎಂದರು.

ತಿಪ್ಪೇಸ್ವಾಮಿ ಸಂಪಿಗೆ ವಿಶೇಷ ಉಪನ್ಯಾಸ ನೀಡಿ, ‘ಸವಿತ ಸಮಾಜದ ಬಗ್ಗೆ ವೇದಗಳಲ್ಲಿ ಉಲ್ಲೇಖಗಳಿವೆ. ಕೆಲವು ಸಲ ಅವಮಾನಗಳು ಆಗುತ್ತವೆ. ಆದರೆ, ಅವುಗಳನ್ನು ಮೆಟ್ಟಿ ನಿಲ್ಲಬೇಕು. ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಬೇಕು’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್, ಸವಿತಾ ಸಮಾಜದ ಅಧ್ಯಕ್ಷ ಎನ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎನ್.ಡಿ. ಕುಮಾರ್, ಮುಖಂಡರಾದ ತಿಪ್ಪೇಸ್ವಾಮಿ, ಆರ್.ಶ್ರೀನಿವಾಸ್, ನಾಗರಾಜ್, ಕವಿತಾ ಶಾಮ್, ಹನುಮಂತಪ್ಪ, ರಾಜು, ರಂಜಿತ್, ಪ್ರಸನ್ನ ಇದ್ದರು.

ಸಮಾರಂಭಕ್ಕೂ ಮುನ್ನ ಸವಿತಾ ಮಹರ್ಷಿಗಳ ಭಾವಚಿತ್ರದ ಅದ್ಧೂರಿ ಮೆರವಣಿಗೆಗೆ ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿ ಚಾಲನೆ ನೀಡಲಾಯಿತು. ಗಾಂಧಿವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿದ ಮೆರವಣಿಗೆ ತರಾಸು ರಂಗಮಂದಿರ ತಲುಪಿತು. ಮೆರವಣಿಗೆಯಲ್ಲಿ ಹಲವು ಕಲಾತಂಡಗಳು ಪಾಲ್ಗೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು