ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1ರಿಂದ 5ನೇ ತರಗತಿ ಅ. 25ರಿಂದ ಆರಂಭ- ಚಿಣ್ಣರ ಸ್ವಾಗತಕ್ಕೆ ಸಜ್ಜಾಗುತ್ತಿವೆ ಶಾಲೆ

Last Updated 22 ಅಕ್ಟೋಬರ್ 2021, 4:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮವಾಗಿ 20 ತಿಂಗಳಿಂದ ಮನೆಯಿಂದಲೇ ಶಿಕ್ಷಣ ಪಡೆಯುತ್ತಿದ್ದ ಮಕ್ಕಳು ಶಾಲೆಗೆ ಹೊರಡಲು ಸಜ್ಜಾಗುತ್ತಿದ್ದಾರೆ. ಚಿಣ್ಣರನ್ನು ಸ್ವಾಗತಿಸಲು ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸಕಲ ಸಿದ್ಧತೆಯಲ್ಲಿ ತೊಡಗಿಕೊಂಡಿವೆ.

1ರಿಂದ 5ನೇ ತರಗತಿಯವರೆಗಿನ ಶಾಲೆ ಆರಂಭಿಸುವುದಾಗಿ ಶಿಕ್ಷಣ ಇಲಾಖೆ ನಿರ್ಧಾರ ಪ್ರಕಟಿಸಿದೆ. ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡುವ ಉದ್ದೇಶದಿಂದ ನಿತ್ಯ ಶೇ 50ರಷ್ಟು ಮಕ್ಕಳು ಮಾತ್ರ ತರಗತಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅ. 30ರವರೆಗೆ ಮಕ್ಕಳು ದಿನ ಬಿಟ್ಟು ದಿನ ಶಾಲೆಗೆ ಬರಲಿದ್ದಾರೆ.

6ರಿಂದ 10ನೇ ತರಗತಿ ಆರಂಭವಾಗಿರುವುದರಿಂದ ಶಾಲೆಗಳಲ್ಲಿ ವಿಶೇಷ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿಲ್ಲ. ಖಾಲಿ ಇದ್ದ ಕೊಠಡಿಗಳನ್ನು ಶುಚಿಗೊಳಿಸಿ ಸ್ಯಾನಿಟೈಸ್‌ ಮಾಡುವಂತೆ ಅಧಿಕಾರಿಗಳು ಶಿಕ್ಷಕರಿಗೆ ಸೂಚಿಸಿದ್ದಾರೆ. ಶಾಲಾ ಪೀಠೋಪಕರಣ, ಬೋಧನೆಗೆ ಅಗತ್ಯ ಇರುವ ಪರಿಕರಗಳನ್ನು ಶಿಕ್ಷಕರು ಹೊಂದಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಶಾಲೆಗಳಿಗೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸುತ್ತಿದ್ದಾರೆ.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳೂ ಸೇರಿ ಜಿಲ್ಲೆಯಲ್ಲಿ 861 ಕಿರಿಯ ಪ್ರಾಥಮಿಕ ಶಾಲೆ, 1,065 ಹಿರಿಯ ಪ್ರಾಥಮಿಕ ಶಾಲೆ ಹಾಗೂ 486 ಪ್ರೌಢಶಾಲೆಗಳಿವೆ. ಶಾಲೆಗೆ ಪ್ರವೇಶ ಪಡೆದ ಎಲ್ಲ ಮಕ್ಕಳು ಇನ್ನು ಮುಂದೆ ತರಗತಿಗೆ ಹಾಜರಾಗಲಿದ್ದಾರೆ. ಶೀತ, ನೆಗಡಿ, ಕೆಮ್ಮು ಲಕ್ಷಣ ಇರುವ ಮಕ್ಕಳ ಬಗ್ಗೆ ಎಚ್ಚರದಿಂದ ಇರುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಹಲವು ಮಕ್ಕಳಲ್ಲಿ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ತರಗತಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿದೆ.

ವರ್ಷಗಟ್ಟಲೆ ಮನೆಯಲ್ಲೇ ಉಳಿದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಸವಾಲು ಕೂಡ ಶಿಕ್ಷಕರ ಎದುರಿಗೆ ಇದೆ. ಶಾಲೆ ಮೆಟ್ಟಿಲು ತುಳಿಯುವಂತೆ ಪ್ರೇರೇಪಿಸುವ ಕಾರ್ಯವೂ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದೆ. ಶಿಕ್ಷಣದ ಅಗತ್ಯದ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸಾಂಕ್ರಾಮಿಕ ಕಾಯಿಲೆಯ ಭೀತಿ ಸಂಪೂರ್ಣ ದೂರವಾಗದಿರುವುದರಿಂದ ಮಕ್ಕಳ ಹಾಜರಾತಿಯನ್ನು ಕಡ್ಡಾಯಗೊಳಿಸಿಲ್ಲ. ಶಾಲೆಗೆ ಬಾರದ ಮಕ್ಕಳಿಗೆ ಅಭ್ಯಾಸ ಹಾಳೆಗಳನ್ನು ನೀಡಲಾಗುತ್ತದೆ.

ಶೇ 68ರಷ್ಟು ಹಾಜರಾತಿ

1ರಿಂದ 5ನೇ ತರಗತಿಯ ಮಕ್ಕಳಿಗೆ ಈವರೆಗೆ ನಡೆಸುತ್ತಿದ್ದ ಆನ್‌ಲೈನ್‌ ತರಗತಿಯಲ್ಲಿ ಜಿಲ್ಲೆಯ ಶೇ 68ರಷ್ಟು ಮಕ್ಕಳು ಮಾತ್ರ ಹಾಜರಾಗಿದ್ದಾರೆ. ಉಳಿದ ಶೇ 32ರಷ್ಟು ಮಕ್ಕಳಿಗೆ ಆಫ್‌ಲೈನ್‌ ಮೂಲಕ ಶಿಕ್ಷಣ ನೀಡುವ ಪ್ರಯತ್ನವನ್ನು ಶಿಕ್ಷಕರು ಮಾಡಿದ್ದಾರೆ.

ತರಗತಿವಾರು ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿದ್ದ ಶಿಕ್ಷಕರು ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ನೀಡುತ್ತಿದ್ದರು. ಗೂಗಲ್‌ ಮೀಟ್‌ ಹಾಗೂ ಇತರ ಆ್ಯಪ್‌ಗಳ ನೆರವು ಪಡೆದಿದ್ದರು. ‘ನಲಿಕಲಿ’ ಮೂಲಕ ಸಿದ್ಧಪಡಿಸಿದ ವಿಡಿಯೊಗಳನ್ನು ಮಕ್ಕಳಿಗೆ ನೀಡಲಾಗುತ್ತಿತ್ತು. ಡಿ.ಡಿ. ಚಂದನ ವಾಹಿನಿಯಲ್ಲಿಯೂ ತರಗತಿಗಳು ನಡೆಯುತ್ತಿದ್ದವು.

ಆನ್‌ಲೈನ್‌ ಶಿಕ್ಷಣ ಪಡೆಯಲು ಅಗತ್ಯವಾದ ಮೊಬೈಲ್‌, ಇಂಟರ್‌ನೆಟ್‌ ಹೊಂದಿಲ್ಲದ ಕಾರಣಕ್ಕೆ ಶೇ 32ರಷ್ಟು ಮಕ್ಕಳು ಈ ವ್ಯವಸ್ಥೆಯಿಂದ ಹೊರಗೆ ಉಳಿದಿದ್ದರು. ಇವರಿಗೆ ವಿಶೇಷವಾದ ಪಠ್ಯವನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿತ್ತು. ಇಂತಹ ಮಕ್ಕಳ ಮನೆಗೆ ತೆರಳಿದ ಶಿಕ್ಷಕರು ಅಭ್ಯಾಸ ಹಾಳೆಗಳನ್ನು ನೀಡಿ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡಿದ್ದಾರೆ.

...

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ತೆರೆಯಲು ಕೈಗೊಂಡ ನಿರ್ಧಾರವನ್ನು ಪೋಷಕರು ಸ್ವಾಗತಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಉತ್ಸುಕರಾಗಿದ್ದಾರೆ. ಕೆಲವರಲ್ಲಿರುವ ಆತಂಕವನ್ನು ದೂರ ಮಾಡಲಾಗುತ್ತಿದೆ.

-ಕೆ.ರವಿಶಂಕರ್ ರೆಡ್ಡಿ, ಡಿಡಿಪಿಐ, ಚಿತ್ರದುರ್ಗ

....

ಅಂಕಿ–ಅಂಶ

* 2,512-ಶಾಲೆಗಳು ಜಿಲ್ಲೆಯಲ್ಲಿ ಇವೆ

* 2,55,561-ಶಾಲಾ ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದಾರೆ

* 1,25,128-ಮಕ್ಕಳು ಅ.25ರಿಂದ ಶಾಲೆಗೆ ಬರಲಿದ್ದಾರೆ

* 1,30,333-ವಿದ್ಯಾರ್ಥಿಗಳು ಈಗಾಗಲೇ ಶಾಲೆಗೆ ಬರುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT