ಶುಕ್ರವಾರ, ಆಗಸ್ಟ್ 12, 2022
21 °C
ಶಿವಪುರ: ಸುಳಿವು ಕೊಟ್ಟವರಿಗೂ ₹ 10,000 ಬಹುಮಾನ

ಇಲ್ಲಿ ಮದ್ಯ ಮಾರಿದರೆ ₹ 25,000 ದಂಡ!

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿದ್ದು, ಹಳ್ಳಿಗಳಲ್ಲಿ ತುಂಡು, ಗುಂಡಿನ ಪಾರ್ಟಿಗಳ ಭರಾಟೆ ಹೆಚ್ಚಿದೆ. ಕೆಲ ಅಭ್ಯರ್ಥಿಗಳು ಮದ್ಯ ಇಲ್ಲದೆ ಚುನಾವಣೆಯನ್ನೇ ಮಾಡಲಾಗುವುದಿಲ್ಲ ಎಂಬ ತೀರ್ಮಾನಕ್ಕೂ ಬಂದಿದ್ದಾರೆ. ಆದರೆ, ಇಲ್ಲೊಂದು ಗ್ರಾಮ ಸಂಪೂರ್ಣ ಮದ್ಯ ಮಾರಾಟ ಮುಕ್ತ ಗ್ರಾಮವಾಗಿ ಗಮನ ಸೆಳೆಯುತ್ತಿದೆ.

ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ವರ್ಷದಿಂದ ಮದ್ಯ ಮಾರಾಟ ನಿಲ್ಲಿಸಲಾಗಿದೆ. ಗ್ರಾಮದಲ್ಲಿ ಸುಮಾರು 600 ಮನೆಗಳಿದ್ದು, 2,500 ಜನಸಂಖ್ಯೆ ಇದೆ. 2 ಬ್ಲಾಕ್‌ಗಳಿದ್ದು, 5 ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಯಾಗಬೇಕಿದೆ. ಗ್ರಾಮದ ಒಳಗೆ ಮದ್ಯ ಮಾರಾಟ ಮಾಡಿದವರಿಗೆ ₹ 25,000, ಖರೀದಿಸಿದವರಿಗೆ ₹ 10,000 ದಂಡ ವಿಧಿಸಲಾಗುತ್ತದೆ. ಮದ್ಯ ಮಾರಾಟದ ಬಗ್ಗೆ ಸುಳಿವು ನೀಡಿದವರಿಗೂ ಪ್ರೋತ್ಸಾಹದಾಯಕವಾಗಿ ₹10,000 ಬಹುಮಾನ ನೀಡಲಾಗುತ್ತದೆ.

‘ಶಿವಪುರದಲ್ಲಿ ಸಿರಿಗೆರೆ ಮಠದ ಹೆಚ್ಚು ಭಕ್ತರಿದ್ದಾರೆ. ನಮ್ಮ ಗ್ರಾಮ ಮದ್ಯಪಾನಮುಕ್ತ ಗ್ರಾಮ ಆಗಬೇಕು ಎಂಬುದು ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಆಶಯವಾಗಿತ್ತು. ಶ್ರೀಗಳ ಇಚ್ಛೆಯಂತೆ ಗ್ರಾಮದಲ್ಲಿ ಮದ್ಯ ನಿಷೇಧ ಮಾಡಲಾಗಿದೆ’ ಎಂದು ಗ್ರಾಮದ ಹಿರಿಯರಾದ ಮಾಜಿ ಶಾಸಕ ಪಿ.ರಮೇಶ್, ಟಿ.ಎಂ.ಪರಮೇಶ್ವರಪ್ಪ, ಜಯದೇವಪ್ಪ, ಬಿ.ಅಜ್ಜಪ್ಪ ಹೇಳುತ್ತಾರೆ.

‘ಚುನಾವಣೆ ಸಂದರ್ಭದಲ್ಲಿ ಮದ್ಯಪಾನ ಮಾಡಿ ಜಗಳ ಮಾಡುವುದು ಸಾಮಾನ್ಯ. ಮದ್ಯ ಮಾರಾಟದಿಂದ ಗ್ರಾಮದ ನೆಮ್ಮದಿ ಹಾಳಾಗುತ್ತದೆ. ಗ್ರಾಮದಲ್ಲಿಯೇ ಮದ್ಯ ಸಿಕ್ಕಿದರೆ ಯುವಕರೂ ಮದ್ಯದ ದಾಸರಾಗುತ್ತಾರೆ. ಗ್ರಾಮದಲ್ಲಿ ಮದ್ಯ ಮಾರಾಟ ಕಟ್ಟುನಿಟ್ಟಾಗಿ ನಿಷೇಧಿಸುವಲ್ಲಿ ಯುವಕರ ಪಾತ್ರ ಹೆಚ್ಚಿದೆ’ ಎನ್ನುತ್ತಾರೆ ಎಸ್.ಆರ್.ಅಜ್ಜಯ್ಯ, ಮರುಳಸಿದ್ದಪ್ಪ, ಧೃವಕುಮಾರ್.

***

ಪಂಡಿತಾರಾಧ್ಯ ಶ್ರೀ ಪ್ರೇರಣೆ

ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಪ್ರೇರಣೆ ಪ್ರಮುಖ ಕಾರಣವಾಗಿದೆ.

ಗ್ರಾಮದಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ಸರ್ವಧರ್ಮ ಸಮ್ಮೇಳನ ನಡೆಯುತ್ತದೆ. ಕಾರ್ಯಕ್ರಮಕ್ಕೆ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸುತ್ತಾರೆ. ಪಂಡಿತಾರಾಧ್ಯ ಸ್ವಾಮೀಜಿ ಪ್ರತಿ ವರ್ಷ ಸಮಾರಂಭಕ್ಕೆ ಬಂದಾಗಲೂ ‘ಮದ್ಯ ಮಾರಾಟ ಮಾಡುವ ಗ್ರಾಮದಲ್ಲಿ ಸರ್ವ ಶರಣರ ಸಮ್ಮೇಳನ ನಡೆಸುವುದರಲ್ಲಿ ಅರ್ಥವಿಲ್ಲ. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು’ ಎಂದು ಸಲಹೆ ನೀಡುತ್ತಿದ್ದರು.

ಆದರೂ ಮದ್ಯ ಮಾರಾಟ ನಡೆಯುತ್ತಲೇ ಇತ್ತು. ಇದರಿಂದ ಬೇಸತ್ತ ಸಾಣೇಹಳ್ಳಿ ಶ್ರೀಗಳು ಹಿಂದಿನ ವರ್ಷ ಸರ್ವ ಶರಣರ ಸಮ್ಮೇಳನಕ್ಕೆ ಬರಲು ನಿರಾಕರಿಸಿದ್ದರು. ಮದ್ಯ ಮಾರಾಟ ನಿಲ್ಲಿಸಿದರೆ ಮಾತ್ರ ಸಮಾರಂಭಕ್ಕೆ ಬರುವುದಾಗಿ ತಿಳಿಸಿದ್ದರು. ಇದರಿಂದ ಗ್ರಾಮದ ಮುಖಂಡರು ವರ್ಷದ ಹಿಂದೆಯೇ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಿದರು.

ಮದ್ಯದ ಚಟ ಇರುವವರು ಪಟ್ಟಣಕ್ಕೆ ಹೋಗಿ ಕುಡಿದು ಬರಲಿ. ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದರೆ ಯುವಕರು ಕುಡಿತದ ದಾಸರಾಗುತ್ತಾರೆ.

- ಟಿ.ಎಂ.ಪರಮೇಶ್ವರಪ್ಪ, ಗ್ರಾಮದ ಹಿರಿಯ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು