ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಪರಿಹಾರದ ಮೊತ್ತ ಸಂಧಾನದಲ್ಲಿ ಇತ್ಯರ್ಥ

ಸರ್ಕಾರಿ ನೌಕರ ಸಾವು, ಅತ್ತೆ–ಮಾವ ಹಾಗೂ ಸೊಸೆ ನಡುವೆ ವ್ಯಾಜ್ಯ
Last Updated 22 ಸೆಪ್ಟೆಂಬರ್ 2020, 2:41 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಕಾಲಿಕ ಸಾವಿಗೆ ತುತ್ತಾದ ಸರ್ಕಾರಿ ನೌಕರನ ಪರಿಹಾರದ ಮೊತ್ತದ ಹಂಚಿಕೆಯಲ್ಲಿ ಸೊಸೆ ಹಾಗೂ ಅತ್ತೆ–ಮಾವನ ನಡುವೆ ನಡೆಯುತ್ತಿದ್ದ ವ್ಯಾಜ್ಯಕ್ಕೆ ಮೆಗಾ ಇ–ಲೋಕ ಅದಾಲತ್‌ನಲ್ಲಿ ಪರಿಹಾರ ಸಿಕ್ಕಿತು. ನ್ಯಾಯಾಧೀಶರು ಮುಂದಿಟ್ಟ ಸಂಧಾನ ಸೂತ್ರಕ್ಕೆ ಕಕ್ಷಿದಾರರು ಒಪ್ಪಿಗೆ ಸೂಚಿಸಿದರು.

ಸರ್ಕಾರಿ ನೌಕರನ ಪರಿಹಾರದ ಮೊತ್ತದಲ್ಲಿ ಪೋಷಕರಿಗೆ ಶೇ 60 ಹಾಗೂ ಪತ್ನಿಗೆ ಶೇ 40ರಷ್ಟು ಪಾಲು ನೀಡಿ ಹಂಚಿಕೆ ಮಾಡಲಾಯಿತು. ‍ಪತಿಯ ಸಾವಿನ ಬಳಿಕ ನೀಡುವ ಅನುಕಂಪದ ಆಧಾರದ ಸರ್ಕಾರಿ ಉದ್ಯೋಗಕ್ಕೆ ಪತ್ನಿ ಅರ್ಹಳು ಎಂಬುದನ್ನು ನ್ಯಾಯಾಧೀಶರು ಮನವರಿಕೆ ಮಾಡಿಕೊಟ್ಟರು.

ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರದ ವ್ಯಕ್ತಿಯೊಬ್ಬರು ಖಜಾನೆ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. 39ರ ವಯೋಮಾನದ ಅವರು ನಾಲ್ಕೂವರೆ ವರ್ಷ ಸಾಂಸಾರಿಕ ಜೀವನ ನಡೆಸಿದ್ದರು. ಪತ್ನಿ ಹಾಗೂ ಮಗುವಿನೊಂದಿಗೆ ಚಿತ್ರದುರ್ಗದ ಕೆಳಗೋಟೆಯಲ್ಲಿ ವಾಸವಾಗಿದ್ದ ಅವರು, ವರ್ಷದ ಹಿಂದೆ ನೇಣಿಗೆ ಶರಣಾಗಿದ್ದರು. ಪತಿಯ ಆತ್ಮಹತ್ಯೆಯಿಂದ ಕಂಗಾಲಾದ ಪತ್ನಿ ತವರಿಗೆ ಹೋಗಲು ರಸ್ತೆ ದಾಟುವಾಗ ನಡೆದ ಅಪಘಾತದಲ್ಲಿ ಮಗುವನ್ನು ಕಳೆದುಕೊಂಡಿದ್ದರು.

‘ಘಟನೆ ನಡೆದ ತಿಂಗಳ ಬಳಿಕ ಪರಿಹಾರದ ಮೊತ್ತವನ್ನು ಕೊಡಿಸುವಂತೆ ಮೃತನ ಪೋಷಕರು ನ್ಯಾಯಾಲಯದ ಮೊರೆಹೋಗಿದ್ದರು. ಪರಿಹಾರಕ್ಕೆ ಅರ್ಹಳಿರುವುದಾಗಿ ಪತ್ನಿಯೂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ‍ಪ್ರಕರಣ ವಿಚಾರಣೆಯ ಹಂತದಲ್ಲಿತ್ತು’ ಎಂದು ಮೃತ ನೌಕರನ ಪತ್ನಿಯ ಪರ ವಕೀಲ ಬಸನಹಳ್ಳಿ ಜಯಪ್ಪ ಮಾಹಿತಿ ನೀಡಿದರು.

ಪತಿಯ ಆತ್ಮಹತ್ಯೆ ಆದಾಗ ಹಾಗೂ ಮಗುವಿಗೆ ಅಪಘಾತ ಸಂಭವಿಸಿದಾಗ ಮಹಿಳೆ 6 ತಿಂಗಳ ಗರ್ಭಿಣಿಯಾಗಿದ್ದರು. ಕೌಟುಂಬಿಕ ದುರಂತದ ಅಘಾತದಲ್ಲಿ ಅವರಿಗೆ ಗರ್ಭಪಾತವಾಯಿತು. ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ನ್ಯಾಯಾಲಯಕ್ಕೆ ಹಾಜರಾಗಲು ಕಷ್ಟವಾಗುತ್ತಿತ್ತು. ಇದು ನ್ಯಾಯಾಧೀಶ ಜಿ.ಎಸ್‌.ಜೀತೇಂದ್ರನಾಥ್‌ ಅವರ ಗಮನಕ್ಕೆ ಬಂದಾಗ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಮಾಡಿಕೊಳ್ಳುವ ಪ್ರಸ್ತಾವ ಮುನ್ನೆಲೆಗೆ ಬಂದಿತು.

ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ ಕೊರೊನಾ ಸೋಂಕು ಕಾಣಿಸಿಕೊಂಡು ಲಾಕ್‌ಡೌನ್‌ ಘೋಷಣೆಯಾಗಿತ್ತು. ನ್ಯಾಯಾಲಯದ ಕಲಾಪ ಆರಂಭಕ್ಕೆ ಅವಕಾಶ ಸಿಕ್ಕಿದ್ದರಿಂದ ಜೂನ್‌ ತಿಂಗಳಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು. ಮೃತ ನೌಕರನ ಪೋಷಕರು ಹಾಗೂ ಪತ್ನಿಯ ಎದುರು ರಾಜಿ ಸೂತ್ರವನ್ನು ಮುಂದಿಡಲಾಯಿತು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದರಿಂದ ಮೆಗಾ ಇ–ಲೋಕ ಅದಾಲತ್ತಿನಲ್ಲಿ ಪ್ರಕರಣ ಇತ್ಯರ್ಥವಾಯಿತು.

‘ಪುತ್ರನ ಸಾವಿನ ಬಳಿಕ ಸಿಗಬೇಕಾಗಿದ್ದ ಪರಿಹಾರದ ಮೊತ್ತದ ವಿಚಾರದಲ್ಲಿ ಸೊಸೆಯೊಂದಿಗೆ ವ್ಯಾಜ್ಯ ಉಂಟಾಗಿತ್ತು. ನ್ಯಾಯಾಧೀಶರು ಸಂಧಾನ ಮಾಡಿಕೊಳ್ಳುವ ಪ್ರಸ್ತಾವ ಮುಂದಿಟ್ಟರು. ಪರಿಹಾರದ ಮೊತ್ತದಲ್ಲಿ ಶೇ 60ರಷ್ಟು ನಮಗೆ ಕೊಡುವುದಾಗಿ ಹೇಳಿದರು. ಇದಕ್ಕೆ ಒಪ್ಪಿಗೆ ಸೂಚಿಸಿ ಪ್ರಕರಣ ಇತ್ಯರ್ಥ ಮಾಡಿಕೊಂಡೆವು’ ಎಂದು ಪೋಷಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT