ಮಂಗಳವಾರ, ಅಕ್ಟೋಬರ್ 19, 2021
22 °C
ಭರಮಸಾಗರ ಕೆರೆಗೆ ಮೈದುಂಬಿ ಹರಿದ ಜಲಾಶಯದ ನೀರು

10 ವರ್ಷಗಳ ನಂತರ ಶಾಂತಿವನ ಜಲಾಶಯ ಭರ್ತಿ: ಬಾಗಿನ ಅರ್ಪಿಸಿದ ಸಿರಿಗೆರೆಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರಿಗೆರೆ: ಸಮೀಪದ ಶಾಂತಿವನದ ಕಿರುಜಲಾಶಯವು 10 ವರ್ಷಗಳ ನಂತರ ಭರ್ತಿಯಾಗಿದ್ದು, ಗುರುವಾರ ಕ್ರೆಸ್ಟ್ ಗೇಟ್‌ಗಳ ಮೂಲಕ ಭರಮಸಾಗರ ಕೆರೆಗೆ ನೀರು ಹರಿಯುತ್ತಿರುವುದು ಕಂಡು ಬಂದಿತು.

ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ‘ಪ್ರಸ್ತುತ ವರ್ಷದಲ್ಲಿ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾ‌‌‌ದದಿಂದ ನೀರಾವರಿ ಯೋಜನೆಯಿಂದ ಭರಮಸಾಗರದ ಕೆರೆಗೆ ನೀರು ಬಂದಿರುವುದು ಮತ್ತು ಶಾಂತಿವನದ ಜಲಾಶಯ ತುಂಬಿದ ಕ್ಷಣಗಳು ತುಂಬಾ ಸಂತೋಷದ ಸಂಗತಿ’ ಎಂದು ಸ್ವಾಮೀಜಿ ಹೇಳಿದರು.

ಶಾಂತಿವನ ಜಲಾಶಯವನ್ನು 2002ರ ಸೆ. 24ರಂದು ಅಂದಿನ ಕೇಂದ್ರ ಕೃಷಿ ಸಚಿವ ಅಜಿತ್‌ಸಿಂಗ್ ಅವರು ಉದ್ಘಾಟಿಸಿದ್ದರು. ನಗರಾಭಿವೃದ್ಧಿ ಸಚಿವ ಅನಂತಕುಮಾರ್, ಸಂಸದ ಜಿ.ಮಲ್ಲಿಕಾರ್ಜುನಪ್ಪ, ಯುವಜನ ಸೇವೆ ಹಾಗೂ ಕ್ರೀಡಾಭಿವೃದ್ಧಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉಪಸ್ಥಿತರಿದ್ದುದನ್ನು ಸ್ಮರಿಸಬಹುದು. 300 ಎಕರೆ ವಿಸ್ತೀರ್ಣದ ಮಧ್ಯಭಾಗದಲ್ಲಿ ಅಂದಾಜು ₹ 100 ಕೋಟಿ ವೆಚ್ಚದಲ್ಲಿ ಚೆಕ್‌ಡ್ಯಾಮ್ ನಿರ್ಮಾಣವಾಗಿದೆ. ನಿರ್ಮಾಣವು 1999ರಲ್ಲಿ ಆರಂಭಗೊಂಡಿತ್ತು. 2 ಕಿ.ಮೀಗಳಷ್ಟು ಉದ್ದವಾಗಿದೆ. 45 ಅಡಿ ಆಳ ಹೊಂದಿದೆ. 2003ರಲ್ಲಿ ಮೊದಲ ಬಾರಿ ಬಾಗಿನ ಅರ್ಪಿಸಲಾಗಿತ್ತು. 2011ರಲ್ಲಿ ಈ ಜಲಾಶಯ ಸಂಪೂರ್ಣ ತುಂಬಿತ್ತು.

‘ನಿಮ್ಮೆಲ್ಲರ ಆನಂದದ ಕ್ಷಣ ನಮಗೆ ಸಂತೋಷ ತಂದಿದೆ. ಮನುಷ್ಯನ ಮೂಲ ಅವಶ್ಯಕತೆಯೇ ನೀರು. ಸರ್ಕಾರದ ಯೋಜನೆಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಆಗಬೇಕು. ಆಗ ಬಹುತೇಕ ರೈತರ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕೆರೆ–ಕಟ್ಟೆಗಳಿಗೆ ನೀರು ತುಂಬಿಸುವುದು, ಮಿನಿ ಚೆಕ್‌ಡ್ಯಾಂ ನಿರ್ಮಾಣ ಮಾಡುವುದು, ‘ಸುಜಲಾ ಜಲಾನಯನ’ ಯೋಜನೆಯ ಮೂಲಕ ಜಲಸಂರಕ್ಷಣೆ ಮಾಡಿ ರೈತರ ಬಾಳಿಗೆ ಬೆಳಕು ನೀಡುವಂತಾಗುವುದೆ ನಮ್ಮ ಗುರಿ’ ಎಂದು ಹೇಳಿದರು.

‘ಹೆಚ್ಚಿನ ನೀರು ಸಂಗ್ರಹವಾಗಲೆಂದು ಜಲಾಶಯದಲ್ಲಿ ಆಳ ಹೆಚ್ಚಿಸಲು 3 ವರ್ಷಗಳಿಂದ ಕಾಮಗಾರಿ ನಡೆದು ವರುಣನಿಗಾಗಿ ಕಾತರದಿಂದ ಕಾಯುತ್ತಿದ್ದೆವು. ಗಾದ್ರಿಗುಡ್ಡ, ಡಿ. ಮೆದಿಕೇರಿಪುರ ಗುಡ್ಡ, ಪಳಿಕೇಹಳ್ಳಿ ಗುಡ್ಡಗಳಿಗೆ ಹೆಚ್ಚು ಮಳೆಯಾಗಿರುವುದರಿಂದ ಜಲಾಶಯಕ್ಕೆ ನೀರು ಬರುವುದು ಖಚಿತವಾಗಿತ್ತು. ನೀರು 3-4 ಹಳ್ಳಿಗಳ ಹಳ್ಳಗಳನ್ನು ದಾಟಿ ಬರುವ ಹೊತ್ತಿಗೆ ಕಡಿಮೆಯಾಗಿ  ಜಲಾಶಯಕ್ಕೆ ಬರುತ್ತಿರಲಿಲ್ಲ. ಸುತ್ತಮುತ್ತಲಿನ ಹಳ್ಳಿಗಳಾದ ಹಳೇರಂಗಾಪುರ, ಸೀಗೇಹಳ್ಳಿ, ಹಳವುದರ, ಹಂಪನೂರು, ಲಿಂಗವ್ವನಾಗ್ತಿಹಳ್ಳಿ, ಅಳಗವಾಡಿ, ಅರಭಗಟ್ಟೆ, ಹೆಗ್ಗರೆ, ಕೊಳಹಾಳು ಗ್ರಾಮಗಳಿಗೆ ಅಂತರ್ಜಲ ತಜ್ಞರ ಪ್ರಕಾರ ಬೋರ್‌ವೆಲ್‌ನಲ್ಲಿ ಹೆಚ್ಚಿನ ನೀರು ಕಾಣಬಹುದು ತಿಳಿಸಿದ್ದಾರೆ. ಜಲಾಶಯಕ್ಕೆ ಹರಿದು ಬರುವ ಪಕ್ಕದ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ನೋಡುಗರಿಗೆ ಕಾರಂಜಿ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ತಡರಾತ್ರಿ ಸುರಿದ ಮಳೆಯಿಂದ ಜಲಾಶಯಕ್ಕೆ ನೀರು ಹರಿದಿದ್ದನ್ನು ಸ್ವಾಮೀಜಿ ವೀಕ್ಷಿಸಿದ್ದರು. ರೈತರ ಮಖದಲ್ಲಿಯೂ ಮಂದಹಾಸ ಮೂಡಿದ್ದು, ಜಲಾಶಯದ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಂಡು ರೈತರು ಸ್ವಾಮೀಜಿಯವರಿಗೆ ಜೈಕಾರ ಹಾಕಿದರು.

ಶ್ರೀಗಳು ಬಾಗಿನ ಅರ್ಪಿಸಿದ ಸಂದರ್ಭದಲ್ಲಿ ಸುತ್ತಮುತ್ತಲಿನ ರೈತರು, ಗ್ರಾಮಸ್ಥರು, ಮಹಿಳೆಯರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು. ಸ್ವಾಮೀಜಿಯವರ ಸಮೀಪ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿತು. ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಬಿ. ರಂಗನಾಥ್, ವಿಶೇಷಾಧಿಕಾರಿ ಎಚ್.ವಿ. ವಾಮದೇವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು, ಸುತ್ತಮುತ್ತಲ ಗ್ರಾಮಸ್ಥರು ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.