ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆಗೆ ಬೇಕು ಐದು ವರ್ಷ: ಮುಖ್ಯ ಎಂಜಿನಿಯರ್‌ ಶಿವಕುಮಾರ್‌

Last Updated 16 ಅಕ್ಟೋಬರ್ 2018, 13:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಇನ್ನೂ ಐದು ವರ್ಷಗಳು ಬೇಕಾಗುತ್ತವೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‌ ಶಿವಕುಮಾರ್‌ ಹೇಳಿದರು.

ಶರಣ ಸಂಸ್ಕೃತಿ ಉತ್ಸವದಲ್ಲಿ ಮಂಗಳವಾರ ‘ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ನೋಟ’ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ ರೈತರು ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘2005ರಲ್ಲಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕರೂ ಕಾಮಗಾರಿ ಆರಂಭವಾಗಿದ್ದು 2008ರಲ್ಲಿ. ಹತ್ತು ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಯೋಜನೆಯ ರೂಪುರೇಷ ಸಿದ್ಧಪಡಿಸಿ ಭೂಸ್ವಾಧೀನ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದೇವೆ. ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿ ಹಾಗೂ ಕೇಂದ್ರ ಜಲ ಮಂಡಳಿಯ ಅನುಮತಿ ಪಡೆಯಲಾಗಿದೆ. ವಿಳಂಬಕ್ಕೆ ಅವಕಾಶ ಇಲ್ಲದಂತೆ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

‘1.07 ಲಕ್ಷ ಹೆಕ್ಟೇರ್‌ ಭೂಮಿಗೆ ನೀರು ಒದಗಿಸುವ ಉದ್ದೇಶದಿಂದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ತುಮಕೂರು ಶಾಖಾ ನಾಲೆ ನಿರ್ಮಾಣ ಸೇರ್ಪಡೆಯಾದ ಬಳಿಕ ನೀರಾವರಿ ಭೂಮಿ 2.25 ಲಕ್ಷ ಹೆಕ್ಟೇರ್‌ಗೆ ವಿಸ್ತರಣೆ ಆಯಿತು. 6.5 ಲಕ್ಷ ಹೆಕ್ಟೇರ್‌ ಭೂಪ್ರದೇಶಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಕೆ ಮಾಡುತ್ತಿರುವುದು ದೇಶದಲ್ಲಿ ಇದೇ ಮೊದಲು’ ಎಂದು ವಿವರಿಸಿದರು.

‘ತುಂಗಾ ನದಿಯ 17.4 ಟಿಎಂಸಿ ಅಡಿ ನೀರು ಹಾಗೂ ಭದ್ರಾ ನದಿಯ 12 ಟಿಎಂಸಿ ಅಡಿ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಜಲಾಶಯ ಭರ್ತಿಯಾದ ಬಳಿಕವೇ ನೀರು ಹರಿಸಲಾಗುತ್ತದೆ ಎಂಬುದು ತಪ್ಪು ಕಲ್ಪನೆ. ಪ್ರತಿ ಜೂನ್‌ 15ರಿಂದ ನಾಲೆಯಲ್ಲಿ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಜಲಾಶಯ ತುಂಬುವವರೆಗೂ ಕಾಯುವ ಅಗತ್ಯವಿಲ್ಲ’ ಎಂದು ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

‘ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ತಂದ ನೀರನ್ನು ನಾಲೆಗೆ ಹರಿಸಲಾಗುತ್ತದೆ. ಇತರ ನಾಲೆಗಳಿಗೆ ಈ ನೀರನ್ನು ಹರಿಸಲು ಯೋಜನೆಯಲ್ಲಿ ಅವಕಾಶವಿಲ್ಲ. ಅಧ್ಯಯನದ ಪ್ರಕಾರ ಹತ್ತು ವರ್ಷಗಳಲ್ಲಿ ಭದ್ರಾ ಜಲಾಶಯ ಏಳು ವರ್ಷ ಭರ್ತಿಯಾಗಿದೆ. ಹೀಗಾಗಿ, ರೈತರು ಆತಂಕಪಡುವ ಅತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

₹ 5 ಸಾವಿರ ಕೋಟಿ ನೀಡಿ

‘ಭದ್ರಾ ಮೇಲ್ದಂಡೆ ಯೋಜನೆಯ ತ್ವರಿತ ಕಾಮಗಾರಿಗೆ ಸರ್ಕಾರ ಕೂಡಲೇ ₹ 5 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮುರುಘಾ ಶರಣರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು ವೆಚ್ಚ₹ 12,340 ಕೋಟಿ. ಈವರೆಗೆ ₹ 2,300 ಕೋಟಿ ಬಿಡುಗಡೆ ಮಾಡಿದೆ. ಪ್ರಸಕ್ತ ವರ್ಷ ₹ 720 ಕೋಟಿ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ. ವಿ.ವಿ.ಸಾಗರಕ್ಕೆ ತ್ವರಿತವಾಗಿ ನೀರು ಹರಿದುಬರಲು ಇನ್ನಷ್ಟು ಅನುದಾನದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಅಮೆರಿಕದ ಅಧ್ಯಯನವೊಂದರ ಪ್ರಕಾರ ಮಧ್ಯ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಈ ದಯನೀಯ ಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ. ಜಲ ಹಾಗೂ ನೆಲ ಕೇಳುವ ಮನೋಭಾವವನ್ನು ಜನ ಬೆಳೆಸಿಕೊಳ್ಳಬೇಕು. ಸಾತ್ವಿಕ ಹೋರಾಟಕ್ಕೆ ಸಿದ್ಧವಾಗಬೇಕು’ ಎಂದು ಸಲಹೆ ನೀಡಿದರು.

‘ಅಧಿಕಾರಿಗಳ ಕಿವಿ ಹಿಂಡಿ’

‘ಸರ್ಕಾರಿ ಯೋಜನೆಗಳು ರೈತರನ್ನು ತಲು‍ಪುತ್ತಿಲ್ಲ. ರೈತರು ಹಾಗೂ ಸರ್ಕಾರದ ನಡುವೆ ದಲ್ಲಾಳಿಗಳು ಕೆಲಸ ಮಾಡುತ್ತಿದ್ದಾರೆ. ದಲ್ಲಾಳಿ ವ್ಯವಸ್ಥೆ ತಪ್ಪಿಸಲು ರೈತರ ಕಿವಿ ಹಿಂಡುವ ಅಗತ್ಯವಿದೆ’ ಎಂದು ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ಅವರು ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರಿಗೆ ಸಲಹೆ ನೀಡಿದರು.

‘ಅಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡುತ್ತಿಲ್ಲ. ಕಚೇರಿಯಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದಾರೆ. ಕಚೇರಿಯಲ್ಲಿ ರೈತರಿಗಿಂತ ಮೊದಲು ದಲ್ಲಾಳಿಗೆ ಕುರ್ಚಿ ಹಾಕುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಮುಖಂಡ ನುಲೇನೂರು ಶಂಕರಪ್ಪ, ಸೋಮನಾಥ ರೆಡ್ಡಿ, ಕೆ.ಪಿ.ಭೂತಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT