ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಳಬಾಳು ಹುಣ್ಣಿಮೆ: ಅಡ್ಡಪಲ್ಲಕ್ಕಿ ಉತ್ಸವ ಬೇಡವೆಂದ ಸಿರಿಗೆರೆಶ್ರೀ

Published 8 ಫೆಬ್ರುವರಿ 2024, 16:09 IST
Last Updated 8 ಫೆಬ್ರುವರಿ 2024, 16:09 IST
ಅಕ್ಷರ ಗಾತ್ರ

ಸಿರಿಗೆರೆ: ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಅಡ್ಡಪಲ್ಲಕ್ಕಿ ಉತ್ಸವವನ್ನು ಈ ಬಾರಿ ಹಮ್ಮಿಕೊಳ್ಳದೇ ಇರುವಂತೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕರ್ತರಿಗೆ ಸೂಚಿಸಿದರು.

ಗುರುವಾರ ಮಠದ ನ್ಯಾಯಪೀಠದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಳ್ಳಿಪಲ್ಲಕ್ಕಿಯಲ್ಲಿ ಶ್ರೀಗಳು ಆಸೀನರಾಗಿರುವ ಉತ್ಸವವನ್ನು ಕಣ್ಣುತುಂಬಿಕೊಳ್ಳುವುದು ಭಕ್ತರಿಗೆ ಸಿಗುವ ಸದಾವಕಾಶ. ಅದನ್ನು ಪರಂಪರೆಯಂತೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಕಾರ್ಯಕರ್ತರು ಇರಿಸಿದ ಬೇಡಿಕೆಯನ್ನು ನಿರಾಕರಿಸಿದ ಶ್ರೀಗಳು ಅಡ್ಡಪಲ್ಲಕ್ಕಿ ಉತ್ಸವ ಬೇಡ, ಬದಲಿಗೆ ಹುಣ್ಣಿಮೆ ಆಚರಣೆಯ ಕೊನೆಯ ದಿನದಂದು ತೆರೆದ ವಾಹನದಲ್ಲಿ ಸಿರಿಗೆರೆಯ ಬೀದಿಗಳಲ್ಲಿ ಯಾತ್ರೆ ನಡೆಸುತ್ತೇನೆ’ ಎಂದು ತಿಳಿಸಿದರು.

1950ರಿಂದ ಆರಂಭಗೊಂಡ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನಡೆಯುವ ಅಡ್ಡಪಲ್ಲಕ್ಕಿ ಉತ್ಸವ ಪ್ರಮುಖ ಆಕರ್ಷಣೆಯಾಗಿತ್ತು.

ಸಂಪ್ರದಾಯದಂತೆ ಹುಣ್ಣಿಮೆ ಮಹೋತ್ಸವವು 9 ದಿನಗಳ ಕಾಲ ನಡೆಯಬೇಕಿತ್ತು. ಈ ವರ್ಷ ಬರಗಾಲ ಇರುವುದರಿಂದ ಫೆ.22ರಿಂದ 24ರವರೆಗೆ ಮೂರು ದಿನಗಳ ಕಾಲ ಸರಳವಾಗಿ ಆಚರಿಸಲಾಗುತ್ತಿದೆ. ಹುಣ್ಣಿಮೆ ಆಚರಣೆಯ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ, ಮಹಿಳಾ ಗೋಷ್ಠಿ, ವಿಜ್ಞಾನ ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ವಿವಿಧೆಡೆಯಿಂದ ಗಣ್ಯರನ್ನು ಆಹ್ವಾನಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ ಮಠಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಅದಕ್ಕಾಗಿ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಶಾಲ ದಾಸೋಹ ಮಂಟವವನ್ನು ನಿರ್ಮಿಸಲು ಹಾಗೂ ಆಚರಣೆಯ ಯಶಸ್ಸಿಗೆ ಶ್ರಮಿಸಲು ಹಲವು ಸಮಿತಿ ರಚಿಸಲು ತೀರ್ಮಾನಿಸಲಾಯಿತು.

ತರಳಬಾಳು ಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಜತ್ತಿ, ಭರಮಸಾಗರ ಕೆರೆ ಹೋರಾಟ ಸಮಿತಿಯ ಚೌಲಿಹಳ್ಳಿ ಶಶಿ ಪಾಟೀಲ್‌, ಸಿ.ಆರ್.‌ ನಾಗರಾಜ್‌, ಓಬವ್ವನಾಗತಿಹಳ್ಳಿ ಮಂಜುನಾಥ್‌, ಇಂಜಿನಿಯರ್‌ ಮನೋಜ್‌ ಕುಮಾರ್‌, ಸಂಸ್ಥೆಯ ಎಂಜಿನಿಯರ್‌ ರವಿಕುಮಾರ್‌, ರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT