ಮಂಗಳವಾರ, ಏಪ್ರಿಲ್ 13, 2021
25 °C
ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಅಡ್ಡಪಲ್ಲಕ್ಕಿಯಲ್ಲಿ ಆಸೀನರಾದ ಶಿವಲಿಂಗಾನಂದ ಸ್ವಾಮೀಜಿ

ಚಿತ್ರದುರ್ಗ: ಪಲ್ಲಕ್ಕಿ, ಜಾನಪದ ಉತ್ಸವ ಅದ್ದೂರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಆರೂಢ ಪರಂಪರೆಯ ಕಬೀರಾನಂದಾಶ್ರಮದ 91ನೇ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ಜಾನಪದ ಉತ್ಸವ ಜರುಗಿತು. ಜತೆಗೆ ಪೀಠಾಧ್ಯಕ್ಷ ಶಿವಲಿಂಗಾನಂದ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಇಲ್ಲಿನ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿತು.

ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡ ಪಲ್ಲಕ್ಕಿಯೊಳಗೆ ಶಿವಲಿಂಗಾನಂದ ಸ್ವಾಮೀಜಿ ಆಸೀನರಾದರು. ಕಬೀರಾನಂದಾಶ್ರಮದ ಮುಂಭಾಗದಿಂದ ಆರಂಭವಾದ ಈ ಉತ್ಸವಕ್ಕೆ ನಗರಸಭೆ ಸದಸ್ಯ ವೆಂಕಟೇಶ್‌ ಚಾಲನೆ ನೀಡಿದರು.

ಇದಕ್ಕೂ ಮುನ್ನ ಶ್ರೀಗಳು ಆಶ್ರಮದಲ್ಲಿನ ಕಾಳಿಕಾ ದೇವಿ ಮೂರ್ತಿ ಹಾಗೂ ಗುರು ಸಿದ್ಧಾರೂಢರ ಮೂರ್ತಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಭಕ್ತರಿಗೆ ಮಹಾಮಂಗಳಾರತಿ ನೀಡಿದ ನಂತರ ಪಲ್ಲಕ್ಕಿ ಏರಿದರು.

ಉತ್ಸವವೂ ಇಲ್ಲಿನ ದೊಡ್ಡಗರಡಿಯ ಮಾರ್ಗವಾಗಿ ದೊಡ್ಡಪೇಟೆ, ರಾಜ ಉತ್ಸವಾಂಬ ದೇವಿ ದೇಗುಲದ ಮುಂಭಾಗದಿಂದ ಚಿಕ್ಕಪೇಟೆ, ಆನೆ ಬಾಗಿಲು, ಗಾಂಧಿ ವೃತ್ತ, ಧರ್ಮಶಾಲಾ ರಸ್ತೆಯಲ್ಲಿ ಸಂಚರಿಸಿ ಸಂಜೆ ಆಶ್ರಮ ತಲುಪಿತು.

ಗೊರವರ ಕುಣಿತ, ಗೊಂಬೆ ಕುಣಿತ, ಸೋಮನ ಕುಣಿತ, ಕೋಲಾಟ, ಕೀಲುಕುದುರೆ, ಜಾಂಜ್ ‌ನೃತ್ಯ, ಖಾಸ ಬೇಡರಪಡೆ, ಡೊಳ್ಳು, ತಮಟೆ, ಮಹಿಳೆಯರ ಉರುಮೆ ಮತ್ತಿತರ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಛತ್ರ ಚಾಮರಗಳು ದಾರಿಯುದ್ದಕ್ಕೂ ರಾರಾಜಿಸಿದವು.

ಆರತಿ ತಟ್ಟೆ ಹಿಡಿದ ಮಹಿಳೆಯರು, ಭಜನೆ ಕಲಾವಿದರು ಮೆರವಣಿಗೆ ಆರಂಭದಿಂದ ಹಿಡಿದು ಕೊನೆಯವರೆಗೂ ಭಜನೆ ಹಾಡುತ್ತ ಸಾಗಿದರು. ಅದಕ್ಕೆ ಕೆಲವರು ಹಿಮ್ಮೇಳ ನುಡಿಸುತ್ತಿದ್ದರು. ಉತ್ಸವ ಸಾಗಿದ ವಿವಿಧ ಮಾರ್ಗಗಳಲ್ಲಿ ಸ್ವಾಮೀಜಿ ಬಳಿಗೆ ಬಂದ ಭಕ್ತರು ಆಶೀರ್ವಾದ ಪಡೆಯಲು ಮುಂದಾದರು. ಇದೇ ವೇಳೆ ಸ್ವಾಮೀಜಿ ಭಕ್ತರಿಗೆ ಹಣ್ಣುಗಳನ್ನು ವಿತರಿಸಿದರು.

ರಸ್ತೆಯ ಅಕ್ಕಪಕ್ಕ, ಇಕ್ಕೆಲಗಳಲ್ಲಿ ನೂರಾರು ಭಕ್ತರು, ಇನ್ನೂ ಕೆಲವರು ಮನೆಯ ತಾರಸಿಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಧಣಿವಾರಿಸಿಕೊಳ್ಳಲು ಅಲ್ಲಲ್ಲಿ ನೀರು, ತಂಪುಪಾನೀಯ, ಮಜ್ಜಿಗೆ ವಿತರಿಸಲಾಯಿತು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಓಂಕಾರ್, ರೇಖಾ, ಮಾತೃಶ್ರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್, ನಿರಂಜನ್‌ಮೂರ್ತಿ, ನಾಗರಾಜ್ ‌ಸಂಗಂ, ಜೀತೇಂದ್ರ, ತಿಪ್ಪೇಸ್ವಾಮಿ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು