ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂತುರು ಮಳೆ: ರಾಗಿ ಕೊಯ್ಲಿಗೆ ಅಡ್ಡಿ

ಕಟಾವಿಗೆ ಬಂದಿದ್ದ ಬೆಳೆಗೆ ಹಾನಿ: ಸಂಕಷ್ಟದಲ್ಲಿ ರೈತರು
Last Updated 12 ನವೆಂಬರ್ 2021, 5:00 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಗುರುವಾರ ದಿನವಿಡೀ ಹಲವೆಡೆ ಸೋನೆ ಮಳೆ ಬಂದಿದ್ದರಿಂದ ಕಟಾವಿಗೆ ಬಂದಿದ್ದ ರಾಗಿ, ಮೆಕ್ಕೆಜೋಳ ಸೇರಿ ಹಲವು ಬೆಳೆಗಳ ಕೊಯ್ಲಿಗೆ ಅಡ್ಡಿಯಾಗಿದೆ.

ಈ ಭಾಗದ ಜನರ ಮುಖ್ಯ ಆಹಾರ ಬೆಳೆ ಹಾಗೂ ಜಾನುವಾರು ಮೇವಿನ ಬೆಳೆ ರಾಗಿ. ಜಿಲ್ಲೆಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯುವ ತಾಲ್ಲೂಕು ಹೊಸದುರ್ಗ. ಈ ಬಾರಿ ಜುಲೈ, ಆಗಸ್ಟ್‌ನಲ್ಲಿ ಬಂದ ಹದ ಮಳೆಗೆ 25,495 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿತ್ತು.

ಅಕ್ಟೋಬರ್‌ ಮೊದಲ ವಾರದಲ್ಲಿ ಸುರಿದ ಬಿರುಸಿನ ಮಳೆಗೆ ರೈತರು ಯೂರಿಯಾ, ಡಿಎಪಿ ಅನ್ನು ರಾಗಿ ಬೆಳೆಗೆ ಮೇಲುಗೊಬ್ಬರವಾಗಿ ಹಾಕಿದ್ದರು. ಇದರಿಂದ ಬೆಳೆ ಹುಲುಸಾಗಿ ಬೆಳೆದಿತ್ತು. ಕೆಲವೆಡೆ ತೆನೆಯೂ ಉತ್ತಮವಾಗಿ ಒಡೆದಿತ್ತು. ರಾಗಿ ತೆನೆ ಒಣಗಿ ಬೆಳೆ ಕಟಾವಿಗೆ ಬಂದಿರುವ ಸಮಯದಲ್ಲಿ 4 ದಿನಗಳಿಂದ ಮೋಡಕವಿದ ವಾತಾವರಣವಿದೆ. ಸೂರ್ಯನ ಬೆಳಕು ಬೆಳೆಗೆ ಬಿದ್ದಿಲ್ಲ. ತುಂತುರು ಮಳೆ ಬೀಳುತ್ತಿರುವುದರಿಂದ ಬೆಳೆ ಕಟಾವು ಮಾಡಲು ತೊಂದರೆಯಾಗುತ್ತಿದೆ. ಇದರಿಂದಾಗಿ ಹುಲ್ಲು ಹಾಗೂ ರಾಗಿ ಕಪ್ಪಾಗುವ, ತೆನೆ ನೆಲಕ್ಕೆ ಉದುರುವ ಆತಂಕ ಎದುರಾಗಿದೆ.

ಕಳೆದ ವಾರ ಮಳೆ ಬಿಡುವು ಕೊಟ್ಟಿದ್ದರಿಂದ ಕೆಲವು ರೈತರು ಬೆಳೆ ಕೊಯ್ಲು ಮಾಡಲು ಮುಂದಾಗಿದ್ದರು. ಆದರೆ, ಈಗ ಮಳೆಯಿಂದ ಕೊಯ್ಲಿಗೆ ಅಡ್ಡಿಯಾಗಿದೆ. ಕೃಷಿ ಕಾರ್ಮಿಕರ ಕೊರತೆ, ಕೂಲಿ ಹಾಗೂ ಗುತ್ತಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಹಲವು ರೈತರು ಕಟಾವು ಯಂತ್ರದಿಂದ ಕೊಯ್ಲು ಮಾಡಿಸಲು ಸಿದ್ಧತೆ ನಡೆಸಿದ್ದರು. ಆದರೆ, ಮೋಡಕವಿದವಾತಾವರಣದೊಂದಿಗೆ ಮಳೆ ಬೀಳುತ್ತಿರುವುದರಿಂದ ಬೆಳೆಯ ಕೊಯ್ಲು ಸಾಧ್ಯವಾಗುತ್ತಿಲ್ಲ. ಇನ್ನೂ 3 ದಿನ ಮಳೆ ಬೀಳುವ ಸಾಧ್ಯತೆ ಇರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ರೈತ ಕಲ್ಲೇಶ ಅಳಲು ತೋಡಿಕೊಂಡರು.

‘ತಾಲ್ಲೂಕಿನಲ್ಲಿ ಈ ಬಾರಿ 7,427 ಹೆಕ್ಟೇರ್‌ ಪ್ರದೇಶದಲ್ಲಿಬಿತ್ತನೆಯಾಗಿದ್ದ ಮೆಕ್ಕೆಜೋಳ ಬೆಳೆಯೂ ಕಟಾವಿಗೆ ಬಂದಿದೆ. ಹಲವು ರೈತರು ಬೆಳೆ ಕೊಯ್ಲು ಕಾರ್ಯಕ್ಕೆ ಮುಂದಾಗಿರುವ ಈ ಸಂದರ್ಭದಲ್ಲಿ ಮಳೆ ಬರುತ್ತಿರುವುದರಿಂದ ಕೊಯ್ಲಿಗೆ ಹಿನ್ನಡೆಯಾಗಿದೆ. ಶೀತದ ವಾತಾವರಣ ಹಾಗೂ ತೇವಾಂಶದಿಂದಾಗಿ ಒಣಗಿರುವ ಮೆಕ್ಕೆಜೋಳದ ತೆನೆಗೆ ಫಂಗಸ್‌ ಆಗಿ ಮೊಳಕೆಯೊಡೆಯುವ ಭೀತಿ ಎದುರಾಗಿದೆ. ಕಟಾವಿಗೆ ಬಂದಿರುವ ಹತ್ತಿ ಬಿಡಿಸಲು ದಿನವಿಡೀ ಮಳೆ ಬಿಟ್ಟಿಲ್ಲ. ಟೊಮೆಟೊ,ಹಸಿಮೆಣಸಿನಕಾಯಿ ಸೇರಿ ತರಕಾರಿ ಬೆಳೆಗಳಿಗೆ ಹುಳುಬಾಧೆ ಹೆಚ್ಚಾಗಿದೆ’ ಎನ್ನುತ್ತಾರೆ ರೈತ ಚಿಕ್ಕಣ್ಣ.

ಹಣ್ಣಿಗೆ ಬಿಟ್ಟಿದ್ದ ದಾಳಿಂಬೆಗೂ ತೊಂದರೆ: ಸೆಪ್ಟೆಂಬರ್‌ನಲ್ಲಿ ಸಂಪೂರ್ಣ ಮಳೆ ಕೈಕೊಟ್ಟಿದ್ದರಿಂದ ತಾಲ್ಲೂಕಿನ ಕೆಲವೆಡೆ ರೈತರು ದಾಳಿಂಬೆಯನ್ನು ಹಣ್ಣಿಗೆ ಬಿಟ್ಟಿದ್ದರು. ಆದರೆ, ಅಕ್ಟೋಬರ್‌ ಆರಂಭದಿಂದ ಹಲವೆಡೆ ಬಿರುಸಿನ ಮಳೆ ಸುರಿಯಿತು. ಇದರಿಂದಾಗಿ ತೇವಾಂಶ ಹೆಚ್ಚಾಗಿದ್ದರಿಂದ ದಾಳಿಂಬೆ ಗಿಡದಲ್ಲಿ ಹೂವು ಬಿಡಲಿಲ್ಲ. ಈಗ ಮತ್ತೆ ಮೂರ್ನಾಲ್ಕು ದಿನಗಳಿಂದ ಮೋಡಕವಿದ ವಾತಾವರಣವಿದೆ. ಗಿಡಗಳು ಸೂರ್ಯನ ಬೆಳಕು ಕಂಡಿಲ್ಲ. ಇದರಿಂದಾಗಿ ರೋಗ ಭೀತಿ ಎದುರಾಗಿದೆ ಎಂದು ಬೆಳೆಗಾರ ಬಿ.ಆರ್‌. ಕಲ್ಲೇಶ್‌ ನೋವು ತೋಡಿಕೊಂಡರು.

ಕಟಾವಿಗೆ ಬಂದಿರುವ ರಾಗಿಯನ್ನು ಸಕಾಲಕ್ಕೆ ಕೊಯ್ಲು ಮಾಡದಿದ್ದರೆ ಒಣಗಿರುವ ತೆನೆ ನೆಲಕ್ಕೆ ಉದುರುತ್ತದೆ. ನಿರಂತರ ಮೋಡಕವಿದ ವಾತಾವರಣಕ್ಕೆ ರಾಗಿ ಕಾಳು ಹಾಗೂ ಹುಲ್ಲು ಕಪ್ಪಾಗುತ್ತದೆ.

ದಾಸಪ್ಪ ಮಾಡದಕೆರೆ, ರೈತ

ಮೋಡಕವಿದ ವಾತಾವರಣ, ತುಂತುರು ಮಳೆ ಬರುವಾಗ ಬೆಳೆ ಕಟಾವು ಯಂತ್ರದಿಂದಲೂ ರಾಗಿ ಕೊಯ್ಲು ಮಾಡಿಸಲು ಬರುವುದಿಲ್ಲ. ಹುಲ್ಲಿನಲ್ಲಿ ತೇವಾಂಶ ಇಲ್ಲದಿದ್ದರೆ ಮಾತ್ರ ಯಂತ್ರದ ಮಾಲೀಕರು ಬರುತ್ತಾರೆ.

ವೆಂಕಟೇಶ್‌ ಬಾಗೂರು, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT