ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಶೂನ್ಯಪೀಠ ಅಲಂಕರಿಸಿದ ಮುರುಘಾ ಶರಣರು

ಮುರುಘಾ ಮಠದಲ್ಲಿ 30ನೇ ವರ್ಷದ ಪೀಠಾರೋಹಣದ ಸಂಭ್ರಮ
Last Updated 16 ಅಕ್ಟೋಬರ್ 2021, 12:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಶನಿವಾರ ಶೂನ್ಯಪೀಠವನ್ನು ಅಲಂಕರಿಸಿ ಸರಳತೆ ಮೆರೆದರು. ವೈಚಾರಿಕ ಪ್ರಜ್ಞೆಯಿಂದ ನಾಡಿನಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಶರಣರು, ರುದ್ರಾಕ್ಷಿ ಕಿರೀಟ ಧರಿಸಿ ಭಕ್ತರಿಗೆ ದರ್ಶನ ನೀಡಿದರು.

ಶಿವಮೂರ್ತಿ ಮುರುಘಾ ಶರಣರು ಪೀಠಾಧ್ಯಕ್ಷರಾಗಿ ಮೂರು ದಶಕ ಸಂದಿದ ಸಂಭ್ರಮ ಮುರುಘಾ ಮಠದಲ್ಲಿ ಮನೆ ಮಾಡಿತ್ತು. ಪೀಠಾರೋಹಣದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು ಶರಣರ ಆಶೀರ್ವಾದ ಪಡೆದು ಪುಳಕಗೊಂಡರು.

ಮಠದ ಪೀಠಾಧ್ಯಕ್ಷರು ಕೈತುಂಬ ಉಂಗುರ, ಚಿನ್ನದ ಕಿರೀಟ, ಆಭರಣ, ಬಂಗಾರದ ಪಾದುಕೆ ಧರಿಸಿ ರತ್ನಖಚಿತ ಸಿಂಹಾಸನದ ಪೀಠಾರೋಹಣ ಮಾಡುವುದು ಸಂಪ್ರದಾಯ. ಈ ಆಡಂಬರದ ಉತ್ಸವವನ್ನು ಸರಳೀಕರಿಸಿದ ಮುರುಘಾ ಶರಣರು ಚಿನ್ನದ ಬದಲು ರುದ್ರಾಕ್ಷಿ ಕಿರೀಟ ಧರಿಸುವ ಪರಂಪರಗೆ ನಾಂದಿ ಹಾಡಿದರು. ಮರದ ಪಾದುಕೆ ಧರಿಸಿ, ಮರದ ಆಸನದ ಮೇಲೆ ಕುಳಿತು ಸರಳತೆ ತೋರಿದರು.

ಪೀಠಾರೋಹಣಕ್ಕೆ ಮಠವು ಸಕಲ ರೀತಿಯಲ್ಲಿ ಸಜ್ಜಾಗಿತ್ತು. ತಳಿರು, ತೋರಣಗಳನ್ನು ಕಟ್ಟಿ ದೀಪಾಲಂಕಾರ ಮಾಡಲಾಗಿತ್ತು. ಕಲ್ಲಿನ ಗೋಡೆಗಳು ತರಹೇವಾರಿ ಪುಷ್ಪಗಳಿಂದ ಅಲಂಕೃತಗೊಂಡಿದ್ದವು. ಕೊರೊನಾ ಸೋಂಕಿನ ಕಾರಣಕ್ಕೆ 2020ರಲ್ಲಿ ಸರಳವಾಗಿ ನಡೆದಿದ್ದ ಈ ಉತ್ಸವಕ್ಕೆ ಪ್ರಸಕ್ತ ವರ್ಷ ಭಕ್ತರ ದಂಡು ಹರಿದು ಬಂದಿತ್ತು. ವೀರಗಾಸೆ, ಕಂಸಾಳೆ ತಂಡಗಳ ಪ್ರದರ್ಶನದಿಂದ ಉತ್ಸವ ಕಳೆಗಟ್ಟಿತ್ತು.

ಪೀಠಾರೋಹಣದ ಕೈಂಕರ್ಯಗಳು ನಿಗದಿಯಂತೆ ಬೆಳಿಗ್ಗೆ 10ಕ್ಕೆ ಆರಂಭವಾದವು. ಹಿರಿಯ ಗುರುಗಳಾದ ಮುರುಘಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ತೆರಳಿ ಭಕ್ತಿ ಸಮರ್ಪಿಸಿದರು. ಚಿನ್ನದ ಕಿರೀಟ, ಪಾದುಕೆ ಹಾಗೂ ಆಭರಣಗಳನ್ನು ಭಕ್ತರಿಗೆ ಹಸ್ತಾಂತರಿಸಿದರು. ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೀಡಿದ ರುದ್ರಾಕ್ಷಿ ಕಿರೀಟವನ್ನು ಧರಿಸಿದರು. ರುದ್ರಾಕ್ಷಿ ಮಾಲೆ ಹಾಕಿಕೊಂಡು, ಕೈಯಲ್ಲಿ ವಚನಗಳ ಪ್ರತಿ ಹಿಡಿದರು. ಆಗ ಮಠದಲ್ಲಿ ಜೈಯಘೋಷಗಳು ಮೊಳಗಿದವು.

ಮಠದ ಮುಖ್ಯ ಪ್ರಾಂಗಣಕ್ಕೆ ಅಡಿಯಿಟ್ಟು ಮರದ ಪೀಠದತ್ತ ತೆರಳಿದರು. ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಭಕ್ತರು ಬಸವಾದಿ ಶರಣರನ್ನು ಸ್ಮರಿಸಿದರು. ಮರದ ಪೀಠವನ್ನು ಸರಳವಾಗಿ ಅಲಂಕರಿಸಿ ಸುಮಾರು ಅರ್ಧ ಗಂಟೆ ಕುಳಿತು ಸಂಪ್ರದಾಯ ಪೂರೈಸಿದರು. ಭಕ್ತರು ಸರತಿ ಸಾಲಿನಲ್ಲಿ ಸಾಗಿ ಶರಣರ ದರ್ಶನ ಪಡೆದರು. ಪಾದಕ್ಕೆ ಎರಗಿ ಫಲಪುಷ್ಪ ಸಹಿತ ಭಕ್ತಿ ಸಮರ್ಪಿಸಿದರು. ಕೆಲ ಸಮಯದ ಬಳಿಕ ಗದ್ದುಗೆಗೆ ಮರಳಿ ರುದ್ರಾಕ್ಷಿ ಕಿರೀಟವನ್ನು ಬಿಚ್ಚಿಟ್ಟರು.

ಗದ್ದುಗೆಯಲ್ಲಿದ್ದ ವಚನಗಳ ಪ್ರಾಚೀನ ಹಸ್ತಪ್ರತಿಯನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಲೆಮೇಲೆ ಹೊತ್ತು ಹೊರ ಬಂದರು. ಅದಾಗಲೇ ಸಿಂಗಾರಗೊಂಡಿದ್ದ ಪಲ್ಲಕ್ಕಿಯ ಮಧ್ಯದಲ್ಲಿ ಪ್ರಾಚೀನ ಹಸ್ತಪ್ರತಿಗಳನ್ನು ಇಡಲಾಯಿತು. ಅಲ್ಲಮಪ್ರಭು ಹಾಗೂ ಬಸವಣ್ಣನವರ ಭಾವಚಿತ್ರಗಳು ಎರಡೂ ಬದಿಯಲ್ಲಿದ್ದವು. ಮಠದ ಆವರಣದಲ್ಲಿ ನಡೆದ ಮೆರವಣಿಗೆಯಲ್ಲಿ ಶರಣರು ಪಲ್ಲಕ್ಕಿಯೊಂದಿಗೆ ಹೆಜ್ಜೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT