ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಖರೀದಿ ಭರಾಟೆಯಲ್ಲಿ ಅಂತರ ಮರೆತ ಜನ

Last Updated 4 ಮೇ 2021, 5:06 IST
ಅಕ್ಷರ ಗಾತ್ರ

ಹೊಸದುರ್ಗ: ಸಂತೆ ದಿನವಾದ ಸೋಮವಾರ ಪಟ್ಟಣದಲ್ಲಿ ಜನರ ನೂಕುನುಗ್ಗಲು ಉಂಟಾಯಿತು. ಅಗತ್ಯ ವಸ್ತುಗಳ ಖರೀದಿ ಭರಾಟೆಯಲ್ಲಿ ಜನರು ಕೊರೊನಾ ಸೋಂಕಿನ ಬಗ್ಗೆ ಮೈಮರೆತರು.

ಅವಶ್ಯ ವಸ್ತುಗಳ ಖರೀದಿಗೆ ಪ್ರತಿದಿನ ಬೆಳಿಗ್ಗೆ 6ರಿಂದ 10 ಗಂಟೆವರೆಗೂ ಅನುಮತಿ ಕೊಟ್ಟಿದೆ. ಆದರೂ ಲಾಕ್‌ಡೌನ್‌ ಪೂರ್ವದಲ್ಲಿ ವಾರದ ಸಂತೆಗೆ ಬರುವಂತೆ ಜನರು ಈಗಲೂ ನುಗ್ಗಿದ್ದರು. ಇದರಿಂದಾಗಿ ಮುಖ್ಯರಸ್ತೆ, 2ನೇ ರಸ್ತೆ, ಹಳೆಯ ಕೆನರಾ ಬ್ಯಾಂಕ್‌, ಅರಳೀಮರದ ಕಟ್ಟೆ, ಗುರುಒಪ್ಪತ್ತಿನಸ್ವಾಮಿ ವಿರಕ್ತ ಮಠದ ರಸ್ತೆಯಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗಿತ್ತು.

ಕಳೆದ ವರ್ಷ ಪಟ್ಟಣದಲ್ಲಿ ಮೂರ್ನಾಲ್ಕು ಸೋಂಕಿನ ಪ್ರಕರಣಗಳು ದಾಖಲಾಗುತ್ತಿದ್ದಂತೆ ಗ್ರಾಮೀಣ ಜನರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಆದರೆ, ಈ ಬಾರಿ ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆ ಮೂಲಗಳ ಪ್ರಕಾರ 80 ಸಕ್ರಿಯ ಪ್ರಕರಣ, 5 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ತಾಲ್ಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಅಲ್ಲಿಂದಲೂ ಜನರು ತಾಲ್ಲೂಕಿಗೆ ನುಗ್ಗುತ್ತಿದ್ದಾರೆ. ಹಳ್ಳಿಗಳಲ್ಲಿಯೂ ಕೊರೊನಾ ಸೋಂಕು ಹಬ್ಬುತ್ತಿದೆ ಎನ್ನುತ್ತಾರೆ ಹಿರಿಯ ನಾಗರಿಕ ಕರಿಯಪ್ಪ.

ಕಳೆದ ವಾರವಷ್ಟೇ ಮಾಸ್ಕ್‌ ಧರಿಸದೇ ಮಾರುಕಟ್ಟೆಗೆ ಬಂದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಹಿಡಿದು ಆತನನ್ನು ಕೊರೊನಾ ಪರೀಕ್ಷೆ ಒಳಪಡಿಸಿದಾಗ ಪಾಸಿಟಿವ್‌ ಬಂದಿತ್ತು. ಪರಿಸ್ಥಿತಿ ಹೀಗಿದ್ದರೂ ಸಹ ಜನರು ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ. ಹಿಂದಿನಂತೆ ವಾರದ ಸಂತೆ ದಿನವೇ ಅಗತ್ಯ ವಸ್ತು ಖರೀದಿಸಲು ಹೆಚ್ಚಿನ ಜನರು ಬರುತ್ತಿದ್ದಾರೆ. ಬಹುತೇಕ ಅಂಗಡಿಗಳ ಬಳಿ ಅಂತರ ಪಾಲನೆ ಆಗುತ್ತಿಲ್ಲ. ಅಂಗಡಿಗಳ ಬಳಿ ಸ್ಯಾನಿಟೈಸರ್‌ ಇಟ್ಟಿರಲಿಲ್ಲ. ಕೆಲವರು ಮಾಸ್ಕ್‌ ಧರಿಸಿರಲಿಲ್ಲ. ಹಲವರು ಮಾಸ್ಕ್‌ ಧರಿಸಿದ್ದರೂ ಮೂಗು, ಬಾಯಿ ಮುಚ್ಚಿಕೊಂಡಿರಲಿಲ್ಲ. ನಾ ಮುಂದು ತಾ ಮುಂದು ಎಂದು ಅಗತ್ಯ ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದ ದೃಶ್ಯ ಕಂಡುಬಂತು.

ಪೊಲೀಸರು ಬೆಳಿಗ್ಗೆ 10 ಗಂಟೆಗೆ ಅಂಗಡಿಗಳ ಬಾಗಿಲು ಮುಚ್ಚಿಸಿ ಹೋಗುತ್ತಾರೆ. ಅವರು ಹೋಗುತ್ತಿದ್ದಂತೆ ಮತ್ತೆ ಕೆಲವರು ಬಾಗಿಲು ತೆರೆದು ವ್ಯಾಪಾರ, ವಹಿವಾಟು ನಡೆಸುತ್ತಾರೆ. ನಿಷೇಧಾಜ್ಞೆ ನಡುವೆಯೂ ಹಲವರು ಅನಗತ್ಯವಾಗಿ ಸುತ್ತಾಡುತ್ತಿರುವುದಕ್ಕೆ ಪುರಸಭೆ ಆಡಳಿತ ಹಾಗೂ ಪೊಲೀಸ್‌ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಪರಿಸ್ಥಿತಿ ಕೈಮೀರುವ ಮೊದಲು ತಾಲ್ಲೂಕು ಆಡಳಿತ ಜನರ ಹಿತ ಕಾಪಾಡಲು ಕಾಳಜಿ ವಹಿಸಬೇಕು ಎಂದು ಹಿರಿಯ ನಾಗರಿಕರು ಆಗ್ರಹಿಸಿದ್ದಾರೆ. ಲಾಕ್‌ಡೌನ್‌ ನಿಯಮ ಉಲ್ಲಂಘನೆ ಸಂಬಂಧ ಈ ಬಾರಿ 22 ಪ್ರಕರಣಗಳು ದಾಖಲಾಗಿವೆ ಎಂದು ಪಿಎಸ್‌ಐ ಇ. ಶಿವಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT