ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಗ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ: ಕಾಶಿನಾಥಯ್ಯ

ರೇಣುಕಸ್ವಾಮಿ ಕೊನೆ ಕ್ಷಣದ ಚಿತ್ರ ಬಹಿರಂಗ; ಕುಟುಂಬ ಸದಸ್ಯರ ಕಣ್ಣೀರು
Published : 5 ಸೆಪ್ಟೆಂಬರ್ 2024, 23:43 IST
Last Updated : 5 ಸೆಪ್ಟೆಂಬರ್ 2024, 23:43 IST
ಫಾಲೋ ಮಾಡಿ
Comments

ಚಿತ್ರದುರ್ಗ: ರೇಣುಕಸ್ವಾಮಿ ಕೊಲೆಯಾಗುವ ಮುನ್ನ ಅನುಭವಿಸಿದ ಯಾತನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡ ಬೆನ್ನಲ್ಲೇ ಆತನ ಕುಟುಂಬ ಸದಸ್ಯರು ಗುರುವಾರ ಭಾವುಕರಾಗಿ ಪ್ರತಿಕ್ರಿಯಿಸಿ ಕಣ್ಣೀರು ಸುರಿಸಿದರು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

‘ಬರಿಮೈನಲ್ಲಿ ಕುಳಿತಿದ್ದ ನನ್ನ ಮಗ ಅಂಗಲಾಚಿ ಬೇಡಿಕೊಳ್ಳುವ ಚಿತ್ರ ನೋಡಿ ನಮ್ಮ ಮನಸ್ಸಿಗೆ ಘಾಸಿಯಾಗಿದೆ. ಅವನು ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಅವನು ಎಷ್ಟು ನೋವು ಅನುಭವಿಸಿರಬಹುದು? ಕಿರುಚಾಡಿರಬಹುದು? ಅತ್ತಿರಬಹುದು? ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅವನ ಬಡಕಲು ದೇಹಕ್ಕೆ ಹತ್ತಾರು ಮಂದಿ ಸೇರಿ ಹೊಡೆದರೆ ಏನಾಗಬಹುದು? ನನ್ನ ಮಗ ಕೈಮುಗಿದು ಅಂಗಲಾಚಿ ಬೇಡಿಕೊಳ್ಳುವಾಗ ಮನಸ್ಸು ಕರಗಿ ಆತನನ್ನು ಬಿಟ್ಟುಬಿಡಬಹುದಾಗಿತ್ತಲ್ಲವೇ’ ಎಂದು ಪ್ರಶ್ನಿಸುತ್ತಲೇ ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್‌ ಭಾವುಕರಾದರು.

‘ಅಷ್ಟು ಜನರಲ್ಲಿ ಒಬ್ಬರಿಗೂ ಮನುಷ್ಯತ್ವ ಇರಲಿಲ್ಲವೇ? ಅನುಕಂಪ, ಕರುಣೆ ಇರಲಿಲ್ಲವೇ? ಒಬ್ಬ ಮನುಷ್ಯನಿಗೆ ಅಷ್ಟೊಂದು ಚಿತ್ರ ಹಿಂಸೆ ನೀಡಿ ಕೊಲ್ಲುವುದು ನ್ಯಾಯವೇ? ನಮಗೆ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಮಗ ಕೊಲೆಯಾಗಿರುವುದು ಅಷ್ಟೇ ಗೊತ್ತಿತ್ತು. ಆದರೆ ಈ ಚಿತ್ರಗಳನ್ನು ನೋಡಿದಾಗ ನಮ್ಮ ನೋವು ಹೆಚ್ಚುತ್ತಲೇ ಇದೆ. ಆತನ ನೆನಪುಗಳು ಮರುಕಳಿಸುತ್ತಿದ್ದು, ತಡೆಯಾಗುತ್ತಿಲ್ಲ’ ಎಂದು ಕಣ್ಣೀರು ಹಾಕಿದರು.

‘ಆರೋಪಿಗಳು ಮನುಷ್ಯರೇ ಎಂಬುದು ತಿಳಿಯುತ್ತಿಲ್ಲ. ಈ ಚಿತ್ರಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ತಾಯಿ ರತ್ನಪ್ರಭಾ ಒತ್ತಾಯಿಸಿದರು.

‘ನಮಗೆ ಆ ಚಿತ್ರಗಳನ್ನು ಯಾರೂ ತೋರಿಸಬೇಡಿ. ನೋಡಲು ಸಾಧ್ಯವಾಗುತ್ತಿಲ್ಲ. ನನ್ನ ಅಣ್ಣ ದರ್ಶನ್‌ ಅವರ ಅಭಿಯಾನಿಯಾಗಿದ್ದ, ಅಭಿಮಾನಕ್ಕಾದರೂ ಕ್ಷಮಿಸಿ ಕಳುಹಿಸಬಹುದಾಗಿತ್ತು’ ಎಂದು ರೇಣುಕಸ್ವಾಮಿ ಸಹೋದರಿ ಸುಚಿತ್ರಾ ನೊಂದು ನುಡಿದರು.

‘ಚಿತ್ರಹಿಂಸೆ ನೀಡಿ ರೇಣುಕಸ್ವಾಮಿ ಕೊಲೆ ಮಾಡಿದ ನಟ ದರ್ಶನ್‌ ಹಾಗೂ ಸಹಚರರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ರೇಣುಕಸ್ವಾಮಿ ಪತ್ನಿ ಸಹನಾ ಅವರ ತಂದೆ ಸೋಮಣ್ಣ ಒತ್ತಾಯಿಸಿದರು.

‘ರೇಣುಕಸ್ವಾಮಿ ಮಾಡಿರುವ ತಪ್ಪನ್ನು ದರ್ಶನ್‌ ಕ್ಷಮಿಸಬಹುದಿತ್ತು. ಆಗ ಅವರಿಗೆ ಒಳ್ಳೆಯದಾಗುತ್ತಿತ್ತು. ಕ್ಷಮಿಸಿ ಎಂಬುದಾಗಿ ಅಂಗಲಾಚಿದರೂ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದು ಶಿಕ್ಷಾರ್ಹ ಅಪರಾಧ’ ಎಂದು ಅವರ ಸ್ವಂತ ಊರಾದ ಹರಿಹರದಲ್ಲಿ ಗುರುವಾರ ಸುದ್ದಿಗಾರರಿಗೆ ಹೇಳಿದರು.

‘ಪುತ್ರಿ ಸಹನಾ 7 ತಿಂಗಳ ಗರ್ಭಿಣಿಯಾಗಿದ್ದು, ಪತಿ ಸಾವಿನ ಬಳಿಕ ತೀವ್ರ ನೋವಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಹೆರಿಗೆಗೆಂದು ತವರು ಮನೆಗೆ ಬಂದಿರುವ ಅವರು ಜ್ವರದಿಂದ ಬಳಲುತ್ತಿದ್ದಾರೆ. ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT