ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ನಿರ್ವಹಣೆ ಕೊರತೆಗೆ ಸೊರಗಿದ ಕ್ರೀಡಾಂಗಣ

ಸೋರುತಿದೆ ಒಳಾಂಗಣ ಕ್ರೀಡಾಂಗಣ, ಹಾಳಾದ ಸಿಂಥೆಟಿಕ್‌ ಟ್ರ್ಯಾಕ್‌
Last Updated 26 ಜೂನ್ 2022, 5:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಸಾರ್ವಜನಿಕರ ವಾಯುವಿಹಾರ, ಮಳೆ ಸುರಿದರೆ ನೀರು ನಿಲ್ಲುವ ಕ್ರೀಡಾಂಗಣ, ದುರಸ್ತಿ ಕಾಣದ ಟ್ರ್ಯಾಕ್‌ನಲ್ಲೇ ಅಭ್ಯಾಸ ಮಾಡುವ ಅಥ್ಲೀಟ್‌ಗಳು, ಎಲ್ಲೆಂದರಲ್ಲಿ ಓಡಾಡುವ ನಾಯಿಗಳು, ಒಡೆದ ಮದ್ಯದ ಬಾಟಲಿಗಳು...

ಇದು ಜಿಲ್ಲಾ ಕೇಂದ್ರದಲ್ಲಿರುವ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದ ದುಃಸ್ಥಿತಿ. ಕ್ರೀಡಾಪಟುಗಳ ನಿತ್ಯದ ಅಭ್ಯಾಸಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದೆ. ನಿರ್ವಹಣೆಯ ಕೊರತೆಯಿಂದ ಸೊರಗಿ ಹೋಗಿದೆ. ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ರೂಪುಗೊಳ್ಳುವ ಹಂಬಲದಿಂದ ಬರುವ ಆಟಗಾರರು ಮೈದಾನದ ಸ್ಥಿತಿ ಕಂಡು ಕೊರಗುತ್ತಿದ್ದಾರೆ.

ಚಿತ್ರದುರ್ಗ ಹಾಗೂ ಹೊಸದುರ್ಗದಲ್ಲಿ ದಶಕದ ಹಿಂದೆಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಲಾಗಿದೆ. ಈ ಎರಡೂ ಕ್ರೀಡಾಂಗಣ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಕ್ರೀಡಾ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಬೆಳೆಯುವ ಕನಸಿನೊಂದಿಗೆ ಯುವಸಮೂಹ ಕ್ರೀಡಾಂಗಣಕ್ಕೆ ಇಳಿಯುವ ಹುಮ್ಮಸ್ಸು ತೋರಿಸಿತ್ತು. ಅಗತ್ಯ ಪ್ರೋತ್ಸಾಹ, ಪೂರಕ ವಾತಾವರಣ, ತರಬೇತುದಾರರ ಕೊರತೆ ಕಾರಣಕ್ಕೆ ನಿರೀಕ್ಷೆ ಹುಸಿಯಾಗಿದೆ.

ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ 19 ಎಕರೆ ವಿಸ್ತೀರ್ಣದಲ್ಲಿದೆ. 400 ಮೀಟರ್‌ ಸಿಂಥೆಟಿಕ್‌ ಟ್ರ್ಯಾಕ್ ನಿರ್ಮಿಸಲಾಗಿದೆ. ಇದು ಅಲ್ಲಲ್ಲಿ ಕಿತ್ತುಹೋಗಿದ್ದು, ಗುಂಡಿಗಳು ನಿರ್ಮಾಣವಾಗಿವೆ. ಉಬ್ಬು–ತಗ್ಗು ಟ್ರ್ಯಾಕ್‌ನಲ್ಲೇ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಿದ್ದಾರೆ. ಮಳೆ ಸುರಿದರೆ ಟ್ರ್ಯಾಕ್‌ನಲ್ಲೇ ನೀರು ನಿಲ್ಲುತ್ತದೆ. ನೀರು ಸರಾಗವಾಗಿ ಹರಿದು ಹೋಗುವವೈಜ್ಞಾನಿಕ ವ್ಯವಸ್ಥೆ ಇಲ್ಲ. ನೀರು ಇಂಗಿಸಲು ಟ್ರ್ಯಾಕ್‌ನಲ್ಲೇ ರಂಧ್ರಗಳನ್ನು ಕೊರೆಯಲಾಗಿದೆ. ಟ್ರ್ಯಾಕ್‌ ನಿರ್ವಹಣೆಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಯಾರೊಬ್ಬರನ್ನೂ ನೇಮಿಸಿಲ್ಲ.

31 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಹೊರಾಂಗಣ ಕ್ರೀಡಾಂಗಣಕ್ಕೆ ಏಳು ಗೇಟುಗಳಿವೆ. ನಾಲ್ವರು ಕಾವಲುಗಾರರನ್ನು ನೇಮಿಸಲಾಗಿದೆ. ಆದರೆ, ಯಾವ ಗೇಟಿನಲ್ಲಿಯೂ ಕಾವಲುಗಾರ ಕಾಣಿಸುವುದಿಲ್ಲ. ನಾಯಿ, ಕುರಿ ಕ್ರೀಡಾಂಗಣಕ್ಕೆ ನುಗ್ಗುವುದು ಮಾಮೂಲಿಯಾಗಿದೆ. ಸಂಜೆ, ನಸುಕಿನಲ್ಲಿ ಅಭ್ಯಾಸನಡೆಸಲು ಸರಿಯಾದ ವಿದ್ಯುತ್‌ ದೀಪದ ವ್ಯವಸ್ಥೆ ಇಲ್ಲ. ಕತ್ತಲಾಗುತ್ತಿದ್ದಂತೆ ಬೇರೆ ಚಟುವಟಿಕೆಗಳೇ ನಡೆಯುತ್ತವೆ. ಮೈದಾನದ ಅಲ್ಲಲ್ಲಿ ಕಾಣಿಸುವ ಮದ್ಯದ ಬಾಟಲಿ ಚೂರುಗಳು ಇದಕ್ಕೆ ಸಾಕ್ಷ್ಯ ಒದಗಿಸುತ್ತವೆ.

ಅಥ್ಲಿಟ್‌ಗಳಿಗೆ ಸಿಂಥೆಟಿಕ್‌ ಟ್ರ್ಯಾಕ್‌, ವಾಲಿಬಾಲ್‌, ಬ್ಯಾಸ್ಕೆಟ್‌ಬಾಲ್‌, ಬಾಲ್‌ ಬ್ಯಾಡ್ಮಿಂಟನ್‌ಗೆ ಹೊರಾಂಗಣ ಕ್ರೀಡಾಂಗಣದಲ್ಲಿ ಮೈದಾನಗಳಿವೆ. ಒಳಾಂಗಣ ಕ್ರೀಡಾಂಗಣದಲ್ಲಿ ಈಜುಕೊಳ, ಜಿಮ್‌, ಬ್ಯಾಡ್ಮಿಂಟನ್‌ ಕೋರ್ಟ್‌ ಇದೆ. ಇದರ ಚಾವಣಿ ಮಳೆಗೆ ಸೋರುತ್ತಿದ್ದು, ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕ್ರೀಡಾ ಸಾಮಗ್ರಿ ಇಡಲು ನಿರ್ಮಿಸಿದ ಟೆಂಟ್‌ ಹಾಳಾಗಿದೆ. ಶೌಚಾಲಯಗಳು ಬಾಗಿಲು ತೆರೆದಿರುವುದಕ್ಕಿಂತ ಮುಚ್ಚಿದ್ದೇ ಹೆಚ್ಚು.

ಪತ್ರ ವ್ಯವಹಾರಕ್ಕೆ ಸೀಮಿತ
ಕ್ರೀಡಾ ಸೌಲಭ್ಯ ಪಡೆಯುವ ಉದ್ದೇಶದಿಂದ ರೂಪಿಸಿದ ಪ್ರಸ್ತಾವಗಳು ಪತ್ರ ವ್ಯವಹಾರಕ್ಕೆ ಸೀಮಿತವಾಗಿಯೇ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ.

ಹಾಕಿಗೆ ಟರ್ಫ್‌ ಮೈದಾನ, ಫುಟ್‌ಬಾಲ್‌ಗೆ ಕೃತಕ ಹುಲ್ಲುಗಾವಲು ಮೈದಾನ, ಶಟಲ್ ಬ್ಯಾಡ್ಮಿಂಟನ್‌ ಮೈದಾನ ನಿರ್ಮಿಸಲು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಪುರುಷ, ಮಹಿಳಾ ಕ್ರೀಡಾಪಟುಗಳ ಅನುಕೂಲಕ್ಕಾಗಿ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೂ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಈ ಬೇಡಿಕೆಗೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ.

ಹಾಸ್ಟೆಲ್‌ನಲ್ಲಿ 28 ಆಟಗಾರರು
50 ಆಟಗಾರರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಕ್ರೀಡಾ ಹಾಸ್ಟೆಲ್‌ ಇದೆ. ಆದರೆ, ಇಲ್ಲಿರುವುದು ಮಾತ್ರ 28 ವಿದ್ಯಾರ್ಥಿಗಳು. ಬಾಲಕಿಯರು ಕ್ರೀಡಾ ಹಾಸ್ಟೆಲ್‌ ಸೇರಲು ನಿರಾಸಕ್ತಿ ತೋರುತ್ತಿದ್ದಾರೆ.

‘5ರಿಂದ 7ನೇ ತರಗತಿಯ ಮಕ್ಕಳಿಗೆ ಮಾತ್ರ ಹಾಸ್ಟೆಲ್‌ ವಾಸ್ತವ್ಯಕ್ಕೆ ಅವಕಾಶವಿದೆ. 5ನೇ ತರಗತಿಯ ಮಕ್ಕಳನ್ನು ಹಾಸ್ಟೆಲ್‌ಗೆ ಆಯ್ಕೆ ಮಾಡಲಾಗುತ್ತದೆ. ಕೋವಿಡ್‌ ಬಳಿಕ ಹಾಸ್ಟೆಲ್‌ ಸೇರಲು ಮಕ್ಕಳು ಮುಂದೆ ಬರುತ್ತಿಲ್ಲ. ಅಥ್ಲೆಟಿಕ್‌ ಹಾಗೂ ವಾಲಿಬಾಲ್‌ಗೆ ತಲಾ ಒಬ್ಬರು ತರಬೇತುದಾರರಿದ್ದಾರೆ. ಪ್ರಸಕ್ತ ವರ್ಷದಿಂದ ಈಜು ತರಬೇತಿಗೂ ಅವಕಾಶ ಸಿಕ್ಕಿದೆ’ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿಬಾಯಿ ತಿಳಿಸಿದರು.

**

ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಿ 10 ವರ್ಷ ಕಳೆದಿದೆ. ಮಳೆ ಸುರಿದಾಗ ಕೆಲವೆಡೆ ನೀರು ನಿಲ್ಲುವ ಸಮಸ್ಯೆ ಗಮನಕ್ಕೆ ಬಂದಿದೆ. ಮಳೆಗಾಲದಲ್ಲಿ ಇದೇ ಸಮಸ್ಯೆ ಮುಂದುವರಿದರೆ ಹೊಸ ಟ್ರ್ಯಾಕ್‌ಗೆ ಕ್ರಮ ಕೈಗೊಳ್ಳಲಾಗುವುದು.
-ಜಯಲಕ್ಷ್ಮಿಬಾಯಿ, ಸಹಾಯಕ ನಿರ್ದೇಶಕಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT