ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಗುಡ್ಡ ಕುಸಿದ ಮಾರ್ಗದಲ್ಲಿ ಮೆಟ್ಟಿಲು

ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಕಾರ್ಮಿಕರ ಸಾಹಸ
Last Updated 13 ಜುಲೈ 2021, 3:50 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಲೋಕದೊಳಲಿನ ಬೆಟ್ಟದ ಮೇಲಿನ ದೊಡ್ಡಹೊಟ್ಟೆ ರಂಗನಾಥಸ್ವಾಮಿಯ ದೇವಾಲಯಕ್ಕೆ ತೆರಳಲು ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತಿದೆ.

324 ಮೀಟರ್ ಎತ್ತರ ಇರುವ ಬೆಟ್ಟಕ್ಕೆ 7 ಇಂಚು ಎತ್ತರಕ್ಕೆ ಒಂದರಂತೆ ಸುಮಾರು 500 ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 148 ಮೆಟ್ಟಿಲುಗಳ ನಿರ್ಮಾಣ ಕಾರ್ಯ ಮುಗಿದಿದೆ. ಉಳಿದ ಕಾಮಗಾರಿಗಳು ನಡೆಯುತ್ತಿವೆ. ಕಡಿದಾದ ಪ್ರದೇಶದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವ ಕಾರ್ಯ ಕಠಿಣವಾಗಿದ್ದು, ಕಾರ್ಮಿಕರು ಹರಸಾಹಸಪಟ್ಟು ಕೆಲಸ
ಮಾಡುತ್ತಿದ್ದಾರೆ.

‘2008ರಲ್ಲಿ ಶಾಸಕನಾಗಿದ್ದಾಗ ಬೆಟ್ಟದ ಮೇಲಿನ ದೇವಾಲಯಕ್ಕೆ ಸುಸಜ್ಜಿತ ಮೆಟ್ಟಿಲುಗಳನ್ನು ನಿರ್ಮಿಸುವ ಮನಸ್ಸಿತ್ತು. ಆದರೆ ದೊಡ್ಡ ಬಂಡೆಗಳಿಂದ ಕೂಡಿದ ಮಾರ್ಗದಲ್ಲಿ ಮೆಟ್ಟಿಲು ನಿರ್ಮಿಸುವುದು ಸವಾಲಿನ ಕೆಲಸವಾಗಿತ್ತು. ಕಾಕತಾಳೀಯ ಎಂಬಂತೆ ಗುಡ್ಡ ಕುಸಿದು ದೇವಾಲಯಕ್ಕೆ ತೆರಳುವ ಮಾರ್ಗ ಬಂದ್ ಆಗಿ ಮೆಟ್ಟಿಲು ನಿರ್ಮಿಸಲು ದೇವರೇ ಅಪ್ಪಣೆ ಕೊಟ್ಟಂತೆ ಆಯಿತು. ಈಗ ಇದೇ ಮಾರ್ಗದಲ್ಲಿ ₹ 3 ಕೋಟಿ ವೆಚ್ಚದಲ್ಲಿ ಮೆಟ್ಟಿಲು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮುಂದೆ ಮೆಟ್ಟಿಲುಗಳ ಮೇಲೆ ನೆರಳಿನ ವ್ಯವಸ್ಥೆ ಮಾಡುವ ಚಿಂತನೆ ಇದೆ’ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದ್ದಾರೆ.

‘ಬೆಟ್ಟದಲ್ಲಿ ಮೆಟ್ಟಿಲು ನಿರ್ಮಿಸುವುದು ಸಾಹಸದ ಕೆಲಸ. ಮೇಲಕ್ಕೆ ಸಿಮೆಂಟ್, ಕಬ್ಬಿಣ ಸಾಗಿಸುವುದು ಕಷ್ಟ. ಒಂದು ಹಂತದವರೆಗೆ ಮಾತ್ರ ಲಾರಿ ಹತ್ತಲಿದ್ದು, ಕೇವಲ 50 ಚೀಲ ಸಿಮೆಂಟ್, 1 ಟನ್ ಕಬ್ಬಿಣ ಮಾತ್ರ ಸಾಗಿಸಬಹುದು. ಅಲ್ಲಿಂದ ಮೇಲೆ ವಾಹನಗಳು ಹೋಗುವುದಿಲ್ಲ. ಮುಂದೆ ಇನ್ನೂ ಕಡಿದಾದ ಪ್ರದೇಶ ಇದ್ದು, ಜನ ಹತ್ತುವುದೇ ಕಷ್ಟ. ಹೀಗಿರುವಾಗ ಸಿಮೆಂಟ್, ಕಬ್ಬಿಣ, ಜಲ್ಲಿ ಸಾಗಿಸುವುದು ಮತ್ತಷ್ಟು ಕಷ್ಟವಾಗಲಿದೆ. ಕಾರ್ಮಿಕರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ’ ಎಂದು ಮೆಟ್ಟಿಲು ನಿರ್ಮಾಣದ ಹೊಣೆ ಹೊತ್ತಿರುವ ಶಿವಮೊಗ್ಗದ ಪಿಳ್ಳಂಗೇರಿಯ ಶಿಲ್ಪಿ ಮಂಜುನಾಥ್ಹೇಳುತ್ತಾರೆ.

‘ನಾನು ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿಯ ಭಕ್ತ. ನಾನು ₹1.5 ಕೋಟಿ ಕಾಮಗಾರಿಯ ಟೆಂಡರ್ ಪಡೆದಿದ್ದೇನೆ. ನನಗೆ ಲಾಭ ಬೇಡ, ಉತ್ತಮ ಕೆಲಸ ಮಾಡಿದರೆ ಸಾಕು ಎಂದು ಶಿಲ್ಪಿ ಹಾಗೂ ಕಾರ್ಮಿಕರಿಗೇ ಕೆಲಸ ವಹಿಸಿದ್ದೇನೆ. ಮಳೆ ಬಂದರೆ ಕುಸಿಯದಂತೆ ಪಿಲ್ಲರ್ ಮೇಲೆ ಮೆಟ್ಟಿಲು ನಿರ್ಮಿಸಲಾಗುತ್ತಿದೆ. ಮೆಟ್ಟಿಲುಗಳ ಎರಡೂ ಕಡೆ ಸ್ಟೀಲ್ ಕಂಬಿಗಳನ್ನು ಅಳವಡಿಸಲಾಗುವುದು’ ಎನ್ನುತ್ತಾರೆ ಗುತ್ತಿಗೆದಾರ
ರಾಜಶೇಖರ್.

2019ರಲ್ಲಿ ಕುಸಿದಿದ್ದ ದೇವರ ಗುಡ್ಡ

2019ರ ಅಕ್ಟೋಬರ್‌ನಲ್ಲಿ ಭಾರಿ ಮಳೆಯಿಂದ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಗುಡ್ಡ ಕುಸಿದಿತ್ತು. ಕೊಡಗಿನಲ್ಲಿ ಕುಸಿದಿದ್ದ ಮಾದರಿಯಲ್ಲೇ ಇಲ್ಲಿಯೂ ಸುಮಾರು ಅರ್ಧ ಕಿಲೋಮೀಟರ್‌ವರೆಗೆ ಗುಡ್ಡ ಜಾರಿತ್ತು. ಬೃಹತ್ ಮಣ್ಣಿನೊಂದಿಗೆ ಬಂಡೆಗಳು ಬೆಟ್ಟದ ಕೆಳಗಿನ ಗುಂಡ ಹನುಮಪ್ಪನ ಗುಡಿಯವರೆಗೆ ಜರುಗಿ ಬಂದಿದ್ದವು. ಈ ಮಾರ್ಗದಲ್ಲಿ ಭಾರಿ ಕೊರಕಲು ಉಂಟಾಗಿ ಬೆಟ್ಟ ಹತ್ತಲು ದಾರಿಯೇ ಇಲ್ಲದಂತೆ ಆಗಿತ್ತು. ಹಿಂದಿನ ಕಾಲದಲ್ಲಿ ನಿರ್ಮಿಸಿದ್ದ ಕಾಡುಗಲ್ಲಿನ ಮೆಟ್ಟಿಲುಗಳು ಕಣ್ಮರೆಯಾಗಿದ್ದವು.

‘ಗುಡ್ಡದೊಂದಿಗೆ ದೇವಾಲಯವೂ ಕುಸಿದುಬಿದ್ದು, ಒಡಮೂಡಿದ್ದ ದೇವರ ವಿಗ್ರಹಕ್ಕೆ ಮಾತ್ರ ಯಾವುದೇ ಹಾನಿಯಾಗಿರಲಿಲ್ಲ. ದೇವಾಲಯಕ್ಕೆ ತೆರಳಲು ಸಾಧ್ಯವಾಗದೇ ಕೆಲದಿನಗಳು ದೇವರ ಪೂಜೆಯೂ ನಿಂತು ಹೋಗಿತ್ತು. ಗ್ರಾಮದ ಯುವಕರು ಪರ್ಯಾಯ ಮಾರ್ಗದಲ್ಲಿ ಬೆಟ್ಟ ಏರಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ದೇವರಿಗೆ ಪೂಜೆ ಸಲ್ಲಿಸಿದ ದೃಶ್ಯ ವೈರಲ್ ಆಗಿತ್ತು. ಭಕ್ತರು ಇನ್ನು ಮುಂದೆ ದೇವರ ದರ್ಶನ ಪಡೆಯುವುದು ಸಾಧ್ಯವೇ ಇಲ್ಲ ಎಂದುಕೊಂಡಿದ್ದರು. ಈ ದೇವಾಲಯ ಸುತ್ತಲಿನ ಏಳು ಹಳ್ಳಿಗಳಿಗೆ ಸೇರಿದ್ದು, ರಾಜ್ಯಾದ್ಯಂತ ಲಕ್ಷಾಂತರ ಭಕ್ತರಿದ್ದಾರೆ. ಶ್ರಾವಣ ಮಾಸದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬರುತ್ತಿದ್ದ ಸಾವಿರಾರು ಭಕ್ತರು ಬೆಟ್ಟ ಹತ್ತುತ್ತಿದ್ದರು. ಭಕ್ತರ ಆಶಯದಂತೆ ಶಾಸಕರು ಪಣತೊಟ್ಟು ಮೆಟ್ಟಿಲು ನಿರ್ಮಿಸುತ್ತಿದ್ದಾರೆ’ ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ತಿಮ್ಮೇಶ್ ಹಾಗೂ ಗೌರವಾಧ್ಯಕ್ಷ ವೀರಭದ್ರಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

...

ಕಡಿದಾದ ಬೆಟ್ಟಕ್ಕೆ ಮೆಟ್ಟಿಲು ನಿರ್ಮಿಸುವುದು ಕನಸಿನ ಮಾತಾಗಿತ್ತು. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯ ಅಲ್ಲ.

-ಎಂ. ಚಂದ್ರಪ್ಪ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT