ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರ ಕೂಲಿ ಕಾರ್ಮಿಕರಿಗೆ ಸಹಾಯಧನ, ‘ಸನ್ಮಾನ ಭ್ಯಾಗ್ಯ’

ಕೈಮಗ್ಗ ಮಾಲೀಕ ಮಂಚಿ ಮಾರುತಿ ಅವರಿಂದ ವಿನೂತನ ಪ್ರಯತ್ನ
Last Updated 15 ನವೆಂಬರ್ 2020, 16:17 IST
ಅಕ್ಷರ ಗಾತ್ರ

ಮೊಳಕಾಲ್ಮುರು: ನೇಕಾರಿಕೆ ಅವನತಿಯತ್ತ ಸಾಗುತ್ತಿರುವ ಬೆನ್ನಲ್ಲೇ ಇದನ್ನು ನಂಬಿರುವ ನೇಕಾರ ಕೂಲಿ ಕಾರ್ಮಿಕರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಆದರೆ ಭಾನುವಾರ ದೀಪಾವಳಿ ಹಬ್ಬದ ಪ್ರಯುಕ್ತ ಮಾಸ್ಟರ್ ವೀವರ್ ಒಬ್ಬರು ಕೈಮಗ್ಗ ಕಾರ್ಮಿಕರಿಗೆ ತಲಾ ₹ 5 ಸಾವಿರ ಸಹಾಯಧನ ನೀಡಿ ಪುರಸ್ಕರಿದ್ದಾರೆ.

ಪಟ್ಟಣದ ಕೈಮಗ್ಗ ಮಾಲೀಕ (ಮಾಸ್ಟರ್ ವೀವರ್) ಮಂಚಿ ಮಾರುತಿ ಅವರು ಭಾನುವಾರ 10 ಮಂದಿ ಕೈಮಗ್ಗ ಕಾರ್ಮಿಕರನ್ನು ಸನ್ಮಾನಿಸಿದ್ದಾರೆ. ಅಲ್ಲದೇ ಪ್ರತಿ ವರ್ಷವೂ ಈ ಕಾರ್ಯ ಮಾಡುವುದಾಗಿ ತಿಳಿಸಿದ್ದಾರೆ.

ಕೆಲ ವರ್ಷಗಳಿಂದ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ ಮಂಚಿ ಮಾರುತಿ ಅವರು ಈ ವೃತ್ತಿಯಲ್ಲಿ ಏನಾದರೂ ಸಾಧನೆ ಮಾಡಬೇಕು. ನಶಿಸುತ್ತಿರುವ ಕೈಮಗ್ಗ ನೇಕಾರಿಕೆ ಉಳಿಸಬೇಕು. ಇದಕ್ಕಾಗಿ 100 ಕೈಮಗ್ಗಗಳನ್ನು ಸ್ಥಾಪಿಸಿ ನೂರಾರು ಜನರಿಗೆ ಕೆಲಸ ನೀಡಬೇಕು ಎಂಬ ನಿರ್ಧಾರ ಮಾಡಿ ಪಡುತ್ತಿರುವ ಕಷ್ಟದ ಹಾದಿಯಲ್ಲಿ ತುಸು ಸಾಧನೆ ಮಾಡಿದ್ದಾರೆ.

‘ಅನೇಕ ಕೈಮಗ್ಗ ಮಾಲೀಕರು ರಾಜ್ಯ, ರಾಷ್ಟ್ರಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಾರ್ಮಿಕರು ನೇಯ್ದ ಸೀರೆಯಿಂದ ಅವರಲ್ಲಿ ಅನೇಕರು ಪ್ರಶಸ್ತಿ ಪಡೆದಿರುತ್ತಾರೆ. ಆದರೆ, ಕಾರ್ಮಿಕರಿಗೆ ಯಾವುದೇ ಸನ್ಮಾನ, ಗೌರವ ಸಿಗುವುದಿಲ್ಲ. ಆದ್ದರಿಂದ ಕಾರ್ಮಿಕರನ್ನು ಸನ್ಮಾನಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಮಿಕರು ತುಂಬಾ ಖುಷಿಯಾಗಿದ್ದಾರೆ’ ಎಂದು ಮಂಚಿ ಮಾರುತಿ ‘ಪ್ರಜಾವಾಣಿ‘ಗೆ ತಿಳಿಸಿದರು.

‘ನನ್ನ ಬಳಿ 63 ಜನ ನೇಕಾರರು ವೃತ್ತಿ ಮಾಡುತ್ತಿದ್ದಾರೆ. ನೇಯ್ಗೆಯಿಂದ ವಿಮುಖವಾಗುತ್ತಿರುವ ನೇಕಾರರನ್ನು ಮರಳಿ ವೃತ್ತಿಯತ್ತ ಕರೆತರುವ ಮಹತ್ತರ ಹೊಣೆ ಮಾಸ್ಟರ್ ವೀವರ್ಸ್‌ಗೆ ಇದೆ. ಈ ವೃತ್ತಿಯಲ್ಲೂ ಗೌರವವಿದೆ ಎಂದು ತೋರಿಸಿಕೊಟ್ಟಲ್ಲಿ ಖಂಡಿತವಾಗಿಯೂ ಮರಳಿ ವೃತ್ತಿಯತ್ತ ಮುಖ ಮಾಡುವ ವಿಶ್ವಾಸವಿದೆ’ ಎನ್ನುತ್ತಾರೆ.

ನೇಕಾರ ಕಾರ್ಮಿಕರಾದ ಮಹೇಶ್, ಯರಿಸ್ವಾಮಿ, ಶ್ರೀಕಾಂತ್ ಮಾತನಾಡಿ, ‘ನೇಕಾರಿಕೆ ವೃತ್ತ ಪವಿತ್ರವಾದುದು. ಕೋವಿಡ್ ಸಂದಿಗ್ಧತೆಯಲ್ಲೂ ಅನ್ನ ನೀಡಿದೆ. ಎಲ್ಲಾ ವೃತ್ತಿಯಲ್ಲಿ ಸಮಸ್ಯೆಗಳಿವೆ. ಇವುಗಳನ್ನು ದೊಡ್ಡದು ಮಾಡದೇ ಕೆಲಸ ಮಾಡಿಕೊಂಡು ಹೋಗಬೇಕು. ಮೊಳಕಾಲ್ಮುರು ರೇಷ್ಮೆ ಸೀರೆ ವಿಶ್ವಮಟ್ಟದಲ್ಲಿ ಹೆಸರು ಮಾಡಲು ಹಿಂದಿನ ತಲೆಮಾರಿನ ನೇಕಾರ ಕಾರ್ಮಿಕರ ಶ್ರಮವಿದೆ. ಇದನ್ನು ಸ್ವಲ್ಪವಾದರೂ ಉಳಿಸಬೇಕು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT