ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಮಾತು | ಧರ್ಮಪುರದ ಯುವ ರೈತನ ಬದುಕಿಗಾಸರೆಯಾದ ದಾಳಿಂಬೆ ಬೆಳೆ

ಧರ್ಮಪುರ ಸಮೀಪದ ತೋಪಿನ ಗೊಲ್ಲಾಹಳ್ಳಿಯ ಯುವರೈತ ಲಕ್ಷ್ಮೀಶ್ ಗೌಡ ಸಾಧನೆ
Published 29 ಮೇ 2024, 6:15 IST
Last Updated 29 ಮೇ 2024, 6:15 IST
ಅಕ್ಷರ ಗಾತ್ರ

ಧರ್ಮಪುರ: ಸಮೀಪದ ತೋಪಿನ ಗೊಲ್ಲಾಹಳ್ಳಿಯ ಯುವರೈತ ಜಿ.ಇ.ಲಕ್ಷ್ಮೀಶ್ ಗೌಡ ತಮ್ಮ ಹೊಲದಲ್ಲಿ ದಾಳಿಂಬೆ ಬೆಳೆದು ಬದುಕು ಹಸನಾಗಿಸಿಕೊಂಡಿದ್ದಾರೆ. ಆ ಮೂಲಕ ಅನುಭವಿ ರೈತರೂ ಹುಬ್ಬೇರಿಸುವಂತೆ ಮಾಡಿದ್ದಾರೆ. 

ಬಿಕಾಂ ಪದವಿ ಮುಗಿಸಿರುವ ಲಕ್ಷ್ಮೀಶ್‌ಗೆ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಬೇಕೆಂಬ ಅದಮ್ಯ ಉತ್ಸಾಹ. ಆದರೆ, ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ತಮ್ಮ ತಂದೆ ಗಿಡ್ಡರಂಗಪ್ಪ ಮತ್ತು ತಮ್ಮ ಜಿ.ಇ.ವೀರೇಂದ್ರ ಪಾಟೀಲ್ ಜತೆ ಕೃಷಿ ಚಟುವಟಿಕೆ ಪ್ರಾರಂಭಿಸಿ, ಅದರಲ್ಲಿಯೇ ಈಗ ಯಶಸ್ಸು ಗಳಿಸಿದ್ದಾರೆ.

ಕುಟುಂಬದ ಆರ್ಥಿಕ ಪರಿಸ್ಥಿತಿ ವಿಷಮ ಸ್ಥಿತಿಯಲ್ಲಿದ್ದರೂ ಅನ್ಯ ಉದ್ಯೋಗವನ್ನು ಅರಸಿ ಹೋಗದೇ ಕೃಷಿಯಲ್ಲಿಯೇ ಏನನ್ನಾದರೂ ಸಾಧಿಸಬೇಕೆಂಬ ಛಲ ತೊಟ್ಟ ಅವರು ತಮ್ಮ 7 ಎಕರೆ ಖುಷ್ಕಿ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿ ಮೂರು ಎಕರೆಯಲ್ಲಿ ದಾಳಿಂಬೆ ನಾಟಿ ಮಾಡಿದರು. ಈಗ ಮೂರು ವರ್ಷಗಳಿಂದ ಬೆಳೆ ಕೈಗೆ ಸಿಗುತ್ತಿದ್ದು, ಉತ್ತಮ ಆದಾಯ ಲಭಿಸುತ್ತಿದೆ.

ಉಳಿದ ಭೂಮಿಯ ಪೈಕಿ 3 ಎಕರೆಯಲ್ಲಿ ಅಡಿಕೆ ಹಾಕಿದ್ದು, 1 ಎಕರೆಯಲ್ಲಿ ಶೇಂಗಾ, ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ.  ದಾಳಿಂಬೆ ಬೆಳೆಯಲ್ಲಿ ಮೊದಲ ವರ್ಷ ₹ 12 ಲಕ್ಷ, ಎರಡನೇ ವರ್ಷ ₹ 22 ಲಕ್ಷ ಗಳಿಸಿದ್ದಾರೆ. ಪ್ರಸ್ತುತ ಮೂರನೇ ವರ್ಷದಲ್ಲಿ ₹ 55 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಸಮೃದ್ಧ ನೀರು: ಕೊಳವೆಬಾವಿಯನ್ನು 340 ಅಡಿ ಆಳದವರೆಗೂ ಕೊರೆಯಿಸಿದ್ದು, ಅದರಲ್ಲಿ ಸಮೃದ್ಧವಾಗಿ ನೀರು ಬರುತ್ತಿದೆ. 

‘ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೂ ಕೈಹಾಕಿದ್ದ ನಾವು ಸಾಂಬಾರ ಸೌತೆ, ಹೂವು, ತರಕಾರಿ, ಕಲ್ಲಂಗಡಿ, ಕರ್ಬೂಜ ಬೆಳೆಯಲು ಹೋಗಿ ಕೈ ಸುಟ್ಟು ಕೊಂಡಿದ್ದೆವು. ಆದರೆ, ದಾಳಿಂಬೆ ಬೆಳೆ ನಮ್ಮ ಕೈ ಹಿಡಿದಿದ್ದು, ಉತ್ತಮ ಆದಾಯ ಬರುತ್ತಿದೆ’ ಎಂದು ಲಕ್ಷ್ಮೀಶ್‌ ತಿಳಿಸಿದರು.

‘ಮೂರು ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ದಾಳಿಂಬೆ ಗಿಡಗಳನ್ನು ಬಿಸಿಲಿನ ತಾಪ ಹಾಗೂ ಪಕ್ಷಿಗಳ ಕಾಟದಿಂದ ರಕ್ಷಿಸಲು ಬಿಳಿ ಪರದೆಯನ್ನು ಹೊದಿಸಲಾಗಿದೆ. ಪ್ರತಿ ಗಿಡದ ಸುತ್ತಲೂ ಗೋಣಿ ಚೀಲ ಹಾಕಿ, ಅದಕ್ಕೆ ನೀರುಣಿಸಿ ಗಿಡಗಳು ಸಮೃದ್ಧವಾಗಿ ಬೆಳೆಯುವಂತೆ ಮತ್ತು ಬಿಸಿಲಿಗೆ ಒಣಗದಂತೆ ಜಾಗೃತಿ ವಹಿಸಲಾಗಿದೆ. ಮೂರು ಎಕರೆಯಲ್ಲಿ 1,250 ಗಿಡಗಳಿದ್ದು, ಒಂದೊಂದು ಗಿಡದಲ್ಲಿ ಕನಿಷ್ಠ 50 ಹಣ್ಣುಗಳಿವೆ. ಹಣ್ಣು 600 ಗ್ರಾಂನಿಂದ 1 ಕೆ.ಜಿ.ವರೆಗೂ ತೂಕವಿದೆ. ಬೆಂಗಳೂರು, ವಿಜಯಪುರದಿಂದ ವ್ಯಾಪಾರಸ್ಥರು ತೋಟಕ್ಕೆ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಕೆಲವರು ಪೂರ್ಣ ಮೂರು ಎಕರೆಯಲ್ಲಿರುವ ದಾಳಿಂಬೆಯನ್ನು ₹ 53 ಲಕ್ಷಕ್ಕೆ ನೀಡುವಂತೆ ಕೇಳಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ದರ ಇರುವುದರಿಂದ ₹ 60 ಲಕ್ಷದವರೆಗೂ ಆದಾಯದ ನಿರೀಕ್ಷೆಯಲ್ಲಿದ್ದೇವೆ’ ಎಂದು ಜಿ.ಇ.ವೀರೇಂದ್ರ ಪಾಟೀಲ್‌ ಮಾಹಿತಿ ನೀಡಿದರು.

ಸಾವಯವ ಗೊಬ್ಬರ: ಜಮೀನಿನಲ್ಲಿಯೇ ಮನೆ ಕಟ್ಟಿಕೊಂಡಿರುವ ಇವರು ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ. ಮನೆಗೆ ಹಾಲಿನ ಜತೆಗೆ ಯಥೇಚ್ಛವಾಗಿ ಸಗಣಿ ಮತ್ತು ಕುರಿ ಗೊಬ್ಬರ ಸಿಗುವುದರಿಂದ ಬೆಳೆಗಳಿಗೆ ಅನುಕೂಲವಾಗಿದೆ. ಕೃಷಿಯಲ್ಲಿ ಇವತ್ತು ಉತ್ತಮ ಸ್ಥಿತಿ ತಲುಪಲು ಹರಿಯಬ್ಬೆ ಪ್ರಗತಿಪರ ರೈತ ಹೆಂಜಾರಪ್ಪ ಅವರೇ ಕಾರಣ’ ಎಂದು ಯಜಮಾನ ಗಿಡ್ಡರಂಗಪ್ಪ ಸ್ಮರಿಸಿಕೊಂಡರು.

ಜಿ.ಇ.ಲಕ್ಷ್ಮೀಶ್ ಗೌಡ ಮೊ.ನಂ: 9164902909

ಸಮೃದ್ಧವಾಗಿ ಬೆಳೆದಿರುವ ದಾಳಿಂಬೆ ಹಣ್ಣು
ಸಮೃದ್ಧವಾಗಿ ಬೆಳೆದಿರುವ ದಾಳಿಂಬೆ ಹಣ್ಣು
ಬಿಸಿಲು ಮತ್ತು ಪಕ್ಷಿಗಳಿಂದ ದಾಳಿಂಬೆ ಗಿಡಗಳಿಗೆ ಹಾನಿಯಾಗದಂತೆ ತಡೆಯಲು ಹೊದಿಕೆ ಹೊದಿಸಿರುವುದು
ಬಿಸಿಲು ಮತ್ತು ಪಕ್ಷಿಗಳಿಂದ ದಾಳಿಂಬೆ ಗಿಡಗಳಿಗೆ ಹಾನಿಯಾಗದಂತೆ ತಡೆಯಲು ಹೊದಿಕೆ ಹೊದಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT