ಶನಿವಾರ, ಡಿಸೆಂಬರ್ 3, 2022
27 °C

ಚಳ್ಳಕೆರೆ: ಮೂವರು ಮಹಿಳೆಯರು ಅನುಮಾನಾಸ್ಪದ ಸಾವು, ಆತ್ಮಹತ್ಯೆ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ತಾಲ್ಲೂಕಿನ ಗೋಪನಹಳ್ಳಿಯಲ್ಲಿ ಮೂವರು ಮಹಿಳೆಯರು ಗುರುವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮದ ನಿವಾಸಿ ತಿಪ್ಪಜ್ಜಿ (75), ಪುತ್ರಿಯರಾದ ಮಾರಕ್ಕ (45), ದ್ಯಾಮಕ್ಕ (43) ಮೃತಪಟ್ಟವರು. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.

ಮೂವರು ಮಹಿಳೆಯರು ಮಾತ್ರ ಮನೆಯಲ್ಲಿದ್ದರು. ಬುಧವಾರ ರಾತ್ರಿ ಮಲಗಿದ್ದ ಇವರು ಗುರುವಾರ ಸಂಜೆಯಾದರೂ ಮನೆಯಿಂದ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಬಾಗಿಲು ಬಡಿದರೂ ಒಳಗಿನಿಂದ ಪ್ರತಿಕ್ರಿಯೆ ಬಂದಿಲ್ಲ. ಕಿಟಕಿ ತೆರೆದು ನೋಡಿದಾಗ ಮಲಗಿದ ಸ್ಥಿತಿಯಲ್ಲಿ ಇರುವುದು ಗೊತ್ತಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಪರಿಶೀಲಿಸಿದಾಗ ಮೃತಪಟ್ಟಿರುವುದು ಖಚಿತವಾಗಿದೆ.

ತಿಪ್ಪಜ್ಜಿ ಪುತ್ರ ದ್ಯಾಮಣ್ಣ (47) ಅನಾರೋಗ್ಯ ಸಮಸ್ಯೆಯಿಂದ ತಿಂಗಳ ಹಿಂದೆ ಮೃತಪಟ್ಟಿದ್ದರು. ಪತಿ ಕೆಂಚಪ್ಪ ಕೂಡ ವರ್ಷದ ಹಿಂದೆ ಕೊನೆಯುಸಿರೆಳೆದಿದ್ದರು. ಮಾರಕ್ಕ ಮತ್ತು ದ್ಯಾಮಕ್ಕ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ತವರು ಸೇರಿದ್ದರು. ಇದರಿಂದ ಇಡೀ ಕುಟುಂಬ ಮಾನಸಿಕ ಖಿನ್ನತೆಗೆ ಒಳಗಾಗಿತ್ತು. ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಚಳ್ಳಕೆರೆ ಠಾಣೆಯ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು