ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು | ಕಲ್ಲುಮುಳ್ಳುಗಳಿದ್ದ ಭೂಮಿಯಲ್ಲಿ ಸುಸ್ಥಿರ ಕೃಷಿ

ಪರಿಶ್ರಮದೊಂದಿಗೆ ಕೃಷಿಯಲ್ಲಿ ಯಶಸ್ಸು ಕಂಡ ಶಿವಮೂರ್ತಿ
Published 1 ಮೇ 2024, 5:42 IST
Last Updated 1 ಮೇ 2024, 5:42 IST
ಅಕ್ಷರ ಗಾತ್ರ

ಹಿರಿಯೂರು: ಸಮತಟ್ಟು ಇಲ್ಲದ ಭೂಮಿ. ಎತ್ತ ನೋಡಿದರೂ ಕಲ್ಲುಮುಳ್ಳುಗಳು. ಉಳುಮೆಗೆಂದು ಎತ್ತು ಅಥವಾ ಟ್ರ್ಯಾಕ್ಟರ್ ಬಾಡಿಗೆಗೆ ಕೇಳಿದರೆ 2ರಿಂದ 3 ಪಟ್ಟು ಹೆಚ್ಚು ಬಾಡಿಗೆಗೆ ಬೇಡಿಕೆ. ಬಿತ್ತನೆ ಮಾಡಿದ ಬೀಜಗಳು ಕಲ್ಲುಗಳ ಕೆಳಗೆ ಸೇರಿಕೊಂಡರೆ ಮೊಳಕೆ ಒಡೆದು ಹೊರಗೆ ಬರುವುದು ಕಷ್ಟ ಎಂಬ ಹಿತೋಪದೇಶ ಬೇರೆ.

ಈ ಎಲ್ಲ ಸವಾಲನ್ನು ಎದುರಿಸಿ ಎಂತಹ ಭೂಮಿಯಲ್ಲೂ ಸುಸ್ಥಿರ ಕೃಷಿ ಮಾಡಬಹುದು ಎಂದು ಸಾಬೀತುಪಡಿಸಿ ಯಶಸ್ಸು ಕಂಡಿದ್ದಾರೆ ಗನ್ನಾಯಕನಹಳ್ಳಿಯ ರೈತ ಶಿವಮೂರ್ತಿ.

ಹಿರಿಯೂರಿನಿಂದ ಧರ್ಮಪುರದ ಕಡೆ ಹೋಗುವಾಗ ಸಿಗುವ ಭೀಮನಬಂಡೆಯಿಂದ 2 ಕಿ.ಮೀ. ದೂರ ಇರುವ ಪಿತ್ರಾರ್ಜಿತವಾಗಿ ಬಂದ ಕಲ್ಲುಮುಳ್ಳುಗಳ ಭೂಮಿಯಲ್ಲಿ ಕೃಷಿ ಮೂಲಕ ಯಶಸ್ಸು ಕಂಡಿರುವ ಶಿವಮೂರ್ತಿ ಅವರಿಗೆ ಡಾ.ರಾಜಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಸಿನಿಮಾನೇ ಪ್ರೇರಣೆಯಂತೆ.

15 ವರ್ಷಗಳ ಹಿಂದೆ ಜಮೀನಿನಲ್ಲಿಯೇ ಚಿಕ್ಕದೊಂದು ಶೆಡ್ ನಿರ್ಮಿಸಿ, ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಪತ್ನಿ, ಪ್ರಾಥಮಿಕ ಶಾಲೆ ಓದುತ್ತಿದ್ದ ಇಬ್ಬರು ಗಂಡು ಮಕ್ಕಳ ಜೊತೆ ವಾಸವಿದ್ದರು. ಬೆಳಿಗ್ಗೆ ಮತ್ತು ಸಂಜೆ ವೇಳೆ ಕುಟುಂಬದ ಸದಸ್ಯರೆಲ್ಲ ಸೇರಿ ಹೊಲದಲ್ಲಿನ ಕಲ್ಲುಗಳನ್ನು ಆಯ್ದು ಜಮೀನಿನ ಬದುವಿಗೆ ಬೇಲಿಯಂತೆ ಹಾಕುತ್ತಾ ಬಂದರು. ಮೊದಲ ವರ್ಷ ಎರಡು ಎಕರೆ ಭೂಮಿ ಹಸನು ಮಾಡಿಕೊಂಡು ರಾಗಿ ಬಿತ್ತನೆ ಮಾಡಿ ವರ್ಷಕ್ಕೆ ಆಗುವಷ್ಟು ಬೆಳೆ ಬೆಳೆದರು. ಆಗ ಕೃಷಿಯಲ್ಲಿನ ಆಸಕ್ತಿ ಮತ್ತಷ್ಟು ಹೆಚ್ಚಾಯಿತು.

ಸರ್ಕಾರದ ನೆರವು ಪಡೆದು ಕೊಳವೆಬಾವಿ ಕೊರೆಯಿಸಿ, ಹೊಲದ ಇಳಿಜಾರಿಗೆ ಚಿಕ್ಕದೊಂದು ಚೆಕ್ ಡ್ಯಾಂ ನಿರ್ಮಿಸಿಕೊಂಡರು. ಹಂತಹಂತವಾಗಿ ತಮಗಿದ್ದ ಹತ್ತು ಎಕರೆ ಜಮೀನನ್ನು ಹಸನು ಮಾಡಿ, ಎಂಟು ಎಕರೆಯಲ್ಲಿ ರತ್ನಗಿರಿ ಆಲ್ಫಾನ್ಸ್ ತಳಿಯ 550 ಮಾವಿನ ಸಸಿ ನೆಟ್ಟರು. ಹೊಲದ ಅಂಚಿಗೆ ತೇಗದ ಗಿಡ ಹಾಕಿದ್ದಾರೆ. 11 ವರ್ಷಗಳಿಂದ ಮಾವು ಆದಾಯ ತಂದುಕೊಡುತ್ತಿದ್ದು, ಕೃಷಿಯಿಂದ ಬಂದ ಆದಾಯದಿಂದ ದೊಡ್ಡ ಶೆಡ್ ನಿರ್ಮಿಸಿಕೊಂಡು 15–20 ದೇಸೀ ತಳಿಯ ಹಸು–ಎಮ್ಮೆಗಳನ್ನು ಸಾಕುತ್ತಿದ್ದಾರೆ.

ಚಿರತೆ, ಕರಡಿ ಹಾಗೂ ಕಳ್ಳರ ಕಾಟ ನಿಯಂತ್ರಿಸಲು ನಾಯಿಗಳನ್ನು ಸಾಕಿದ್ದು, ರಾತ್ರಿ ವೇಳೆ ಇಡೀ ಹೊಲವನ್ನು ಕಾಯುತ್ತವೆ. ಮಾವಿನ ಗಿಡಗಳ ಮಧ್ಯದಲ್ಲಿ ದನಗಳಿಗೆ ಮೇವು, ಉಳಿದ ಕಡೆ ತಲಾ 2 ಎಕರೆಯಲ್ಲಿ ಮೆಕ್ಕೆಜೋಳ, ಶೇಂಗಾ, ರಾಗಿ ಬೆಳೆಯುತ್ತಿದ್ದಾರೆ. ‘ಕಾಳು ಮನೆಗೆ ಆದರೆ, ಮೇವು ಜಾನುವಾರುಗಳಿಗೆ ಆಗುತ್ತದೆ’ ಎನ್ನುತ್ತಾರೆ ಶಿವಮೂರ್ತಿ.

‘ಮಾವಿನ ಮರಗಳು ಫಸಲು ಬಿಡಲು ಆರಂಭಿಸಿದಾಗಿನಿಂದ ಬಂದ ಲಾಭದಿಂದ ಟ್ರ್ಯಾಕ್ಟರ್ ಖರೀದಿಸಿದ್ದೇನೆ. ನಮ್ಮ ಜಮೀನಿನ ಕೆಲಸದ ಜೊತೆಗೆ ಬೇರೆಯವರ ಹೊಲಕ್ಕೆ ಟ್ರ್ಯಾಕ್ಟರ್‌ ಅನ್ನು ಬಾಡಿಗೆಗೆ ಬಿಡುತ್ತೇನೆ. ಮಾವಿನ ಫಸಲು ನಮ್ಮ ಬದುಕಿನ ಚಿತ್ರಣವನ್ನೇ ಬದಲಿಸಿದೆ. ನಮ್ಮ ತೋಟದ ಹಣ್ಣುಗಳ ಬಣ್ಣ ಮತ್ತು ರುಚಿ ವಿಶೇಷವಾಗಿರುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಈ ವರ್ಷ ಮಾವಿನ ಫಸಲು ಎಲ್ಲ ಕಡೆ ಕಡಿಮೆ ಆಗಿದೆ. ಐದಾರು ಲಕ್ಷ ಆದಾಯ ನಿರೀಕ್ಷೆ ಮಾಡಿದ್ದೆ. ಅದರ ಅರ್ಧದಷ್ಟು ಹಣ ಕೈಗೆ ಬರಬಹುದು’ ಎಮದು ಅವರು ಹೇಳುತ್ತಾರೆ.

‘ಮುಂದಿನ ಏಳೆಂಟು ವರ್ಷಗಳಲ್ಲಿ 150 ತೇಗದ ಮರಗಳು ಕಟಾವಿಗೆ ಬರುತ್ತವೆ. ತೇಗದ ಮರಕ್ಕೆ ಎಲ್ಲಿಲ್ಲದ ಬೇಡಿಕೆ ಇರುವುದು ಸರ್ವವೇದ್ಯ. ಇದಲ್ಲದೆ ನೇರಳೆ, ಲಿಂಬೆ, ಸೀತಾಫಲ, ತೆಂಗು ಫಸಲಿಗೆ ಬರುತ್ತಿವೆ. ವರ್ಷದ ಎಲ್ಲ ತಿಂಗಳುಗಳಲ್ಲೂ ಒಂದಲ್ಲ ಒಂದು ಬೆಳೆಯಿಂದ ಆದಾಯ ಬರುವಂತೆ ಮಾಡಿಕೊಂಡಿದ್ದೇನೆ. ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡರೆ ಯಾವುದಾದರೂ ಬೆಳೆ ಖಂಡಿತ ನಮ್ಮ ಕೈಹಿಡಿಯುತ್ತದೆ’ ಎಂದು ಅವರು ದೃಢವಾಗಿ ಹೇಳುತ್ತಾರೆ.

ರತ್ನಗಿರಿಯ ಆಲ್ಫಾನ್ಸ್ ತಳಿಯ ಮಾವಿನೊಂದಿಗೆ ಕೃಷಿಕ ಶಿವಮೂರ್ತಿ
ರತ್ನಗಿರಿಯ ಆಲ್ಫಾನ್ಸ್ ತಳಿಯ ಮಾವಿನೊಂದಿಗೆ ಕೃಷಿಕ ಶಿವಮೂರ್ತಿ

ಕೃಷಿ ಒಂದು ತಪಸ್ಸು

‘ಕೃಷಿಯ ಬಗ್ಗೆ ಲಘುವಾಗಿ ಮಾತಾಡುವವರೇ ಹೆಚ್ಚಿದ್ದಾರೆ. ಕೃಷಿ ಒಂದು ತಪಸ್ಸು ಎಂದು ಭಾವಿಸಿ ಶ್ರಮ ಹಾಕಿದರೆ ಭೂಮಿತಾಯಿ ಖಂಡಿತ ಕೈಹಿಡಿಯುತ್ತಾಳೆ ಎಂಬುದಕ್ಕೆ ನಾನೇ ನಿದರ್ಶನ. ಅಡಿಕೆ ಸೀಬೆ ದಾಳಿಂಬೆಯನ್ನು ಎರಡೆರಡು ಎಕರೆಯಲ್ಲಿ ಹಾಕಲಿದ್ದೇನೆ. ತೋಟದ ಮಧ್ಯೆ ನುಗ್ಗೆ ಕರಿಬೇವು ತರಕಾರಿ ಸೊಪ್ಪು ಬೆಳೆಯುವ ಉದ್ದೇಶವಿದೆ. ಸೊಪ್ಪು– ತರಕಾರಿ ಹಾಲು ಮಾರಾಟದಿಂದ ಮನೆ ಖರ್ಚಿಗೆ ಬೇಕಿರುವ ಹಣ ಸಿಗಲಿದೆ. ಜಮೀನಿನ ಅಭಿವೃದ್ಧಿಗೆ ಸಾಕಷ್ಟು ಬಂಡವಾಳ ವ್ಯಯಿಸಿದ್ದೇನೆ. ಅದರೊಂದಿಗೆ ಬ್ಯಾಂಕ್‌ಗಳಲ್ಲಿ ಮಾಡಿದ್ದ ಎಲ್ಲ ಸಾಲವನ್ನು ತೀರಿಸಿದ್ದೇನೆ. ಮಕ್ಕಳಿಬ್ಬರು ಪದವೀಧರರಾಗಿದ್ದಾರೆ. ನಿತ್ಯ ನನ್ನ ಕನಸಿನ ಬೆಳೆಗಳ ನಡುವೆ ನೆಮ್ಮದಿಯಿಂದ ಬದುಕುತ್ತಿದ್ದೇನೆ. ವ್ಯವಸಾಯವನ್ನು ಸರಿಯಾಗಿ ಮಾಡಿದಲ್ಲಿ ಭೂಮಿಯಲ್ಲೇ ಸ್ವರ್ಗ ಎಂಬುದನ್ನು ಸ್ವಾನುಭವದಿಂದ ಕಂಡುಕೊಂಡಿದ್ದೇನೆ’ ಎಂದು ಶಿವಮೂರ್ತಿ ತಮ್ಮ ಕೃಷಿ ಕಾಯಕದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT