ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಾವತಿ ನೀರಿಗೆ ರಾಜಕೀಯ ಬೆರಸಬೇಡಿ: ಶಾಸಕಿ ಪೂರ್ಣಿಮಾಗೆ ಶಾಸಕ ರಘುಮೂರ್ತಿ ಸಲಹೆ

ಶಾಸಕಿ ಕೆ.ಪೂರ್ಣಿಮಾ ಟೀಕೆಗೆ ಶಾಸಕ ಟಿ.ರಘುಮೂರ್ತಿ ತಿರುಗೇಟು
Last Updated 1 ಮೇ 2020, 13:40 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿ.ವಿ.ಸಾಗರ ಜಲಾಶಯದಿಂದ ವೇದಾವತಿ ನದಿಗೆ ಹರಿಸುತ್ತಿರುವ ನೀರಿಗೆ ರಾಜಕೀಯ ಬೆರೆಸುತ್ತಿರುವ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ, ನೀರು ಹಂಚಿಕೆಗೆ ಸಂಬಂಧಿಸಿದಂತೆ ಪೂರ್ಣ ಅರಿತಿಲ್ಲ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಟೀಕಿಸಿದರು.

‘ಕಾಂಗ್ರೆಸ್‌ ಪಕ್ಷದ ಒಬ್ಬ ಶಾಸಕರ ಒತ್ತಡಕ್ಕೆ ಬಿಜೆಪಿ ಸರ್ಕಾರ ಮಣಿಯಬಾರದಿತ್ತು’ ಎಂಬ ಶಾಸಕಿ ಪೂರ್ಣಿಮಾ ಅವರ ಟೀಕೆಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ವಾಣಿವಿಲಾಸ ಜಲಾಶಯದ ನೀರಿಗೆ ಸಂಬಂಧಿಸಿದ ವಿದ್ಯಮಾನವನ್ನು ಶಾಸಕಿ ಕೆ.ಪೂರ್ಣಿಮಾ ರಾಜಕೀಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಹಿರಿಯೂರು ಕ್ಷೇತ್ರದ ಜನರ ಹಿತಾಸಕ್ತಿ ಕಾಪಾಡುವ ಭರದಲ್ಲಿ ದುಡುಕುತ್ತಿದ್ದಾರೆ. ಪಕ್ಷ ರಾಜಕಾರಣವನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಿ’ ಎಂದು ಸಲಹೆ ನೀಡಿದರು.

ಒತ್ತಡ ಹೇರಿಲ್ಲ: ‘ಚಳ್ಳಕೆರೆ ತಾಲ್ಲೂಕಿಗೆ ಹರಿಸುತ್ತಿರುವ ನೀರಿನ ವಿಚಾರದಲ್ಲಿ ಪಕ್ಷಪಾತವಾಗಿಲ್ಲ. ಅನ್ಯಮಾರ್ಗದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿಲ್ಲ. ಕ್ಷೇತ್ರದ ಜನರ ಹಿತದೃಷ್ಟಿಯಿಂದ ನಿಯಮಬದ್ಧವಾಗಿ ನೀರು ಪಡೆದಿದ್ದೇವೆ. ಚಳ್ಳಕೆರೆ ತಾಲ್ಲೂಕಿನ ಜನರ ಹಕ್ಕನ್ನು ಪ್ರಶ್ನಿಸುವ ಅಧಿಕಾರ ಹಿರಿಯೂರು ಶಾಸಕಿಗೆ ಇಲ್ಲ. ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ, ಸಂಸದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಚಳ್ಳಕೆರೆ ಸೇರಿ ನಾಲ್ಕು ತಾಲ್ಲೂಕಿಗೆ ತುಂಗ–ಭದ್ರಾ ಜಲಾಶಯದ ಹಿನ್ನೀರಿನಿಂದ ಕುಡಿಯುವ ನೀರು ಯೋಜನೆ ರೂಪಿಸುವಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜಕೀಯ ಮಾಡಲಿಲ್ಲ. ಕೂಡ್ಲಿಗಿ, ಮೊಳಕಾಲ್ಮುರು ಕ್ಷೇತ್ರವನ್ನು ಬಿಜೆಪಿ ಹಾಗೂ ಪಾವಗಡವನ್ನು ಜೆಡಿಎಸ್‌ ಪ್ರತಿನಿಧಿಸುತ್ತಿದ್ದರೂ ಕುಡಿಯುವ ನೀರು ಒದಗಿಸಿ ಉದಾರತೆ ತೋರಿದ್ದಾರೆ. ಅಭಿವೃದ್ಧಿ ಹಾಗೂ ಜನಪರ ಕೆಲಸಗಳಲ್ಲಿ ರಾಜಕಾರಣ ಮಾಡುವುದು ತಪ್ಪು’ ಎಂದು ಕುಟುಕಿದರು.

ಜಲಾಶಯ ರಾಜ್ಯದ ಆಸ್ತಿ:

‘ವೇದಾವತಿ ನದಿಗೆ ಹಿರಿಯೂರು ತಾಲ್ಲೂಕಿನಲ್ಲಿ ನಿರ್ಮಿಸಿದ ವಾಣಿವಿಲಾಸ ಜಲಾಶಯ ರಾಜ್ಯದ ಆಸ್ತಿ. ಇದು ಯಾರೊಬ್ಬರ ಸ್ವತ್ತಲ್ಲ. ನೂರು ಚದರ ಕಿ.ಮೀ ವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜಲಾಶಯ ನಿರ್ಮಿಸಲಾಗಿದೆ. ನೀರಿನ ಮೂಲ ಬತ್ತಿ ಹೋಗಿದ್ದರಿಂದ ಜಲಾಶಯ ಖಾಲಿಯಾಗಿತ್ತು. ಚಂದಾಹಾಕಿ ಜಲಾಶಯ ಕಟ್ಟಿದವರ ರೀತಿಯಲ್ಲಿ ಕೆಲವರು ವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಭದ್ರಾ ಮೇಲ್ದಂಡೆ ಕಾಮಕಾರಿ ಪೂರ್ಣಗೊಳ್ಳುವ ವರೆಗೂ ವಿ.ವಿ.ಸಾಗರ ಜಲಾಶಯಕ್ಕೆ 5.2 ಟಿಎಂಸಿ ಅಡಿ ನೀರು ಮೀಸಲಿಡಲಾಗಿದೆ. ಎತ್ತಿನ ಹೊಳೆ ಯೋಜನೆಯ ನೀರು ಕೂಡ ಜಲಾಶಯಕ್ಕೆ ಹರಿಯುವ ಸಾಧ್ಯತೆ ಇದೆ. ಈಚೆಗೆ ಭದ್ರಾ ನದಿಯಿಂದ 3.4 ಟಿಎಂಸಿ ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಮಳೆ ನೀರು ಸೇರಿ 11 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಕೃಷಿ ಹಾಗೂ ಕುಡಿಯುವ ಉದ್ದೇಶಕ್ಕೆ ಬಳಸಿದರೂ ಕನಿಷ್ಠ 5 ಟಿಎಂಸಿ ಅಡಿ ನೀರು ಜಲಾಶಯದಲ್ಲಿ ಉಳಿಯಲಿದೆ. ನದಿಗೆ ನೀರು ಹರಿಸಿದ್ದರಿಂದ ಹಿರಿಯೂರು ತಾಲ್ಲೂಕಿನ ನದಿ ಪಾತ್ರದ ಜನರೂ ಹರ್ಷಗೊಂಡಿದ್ದಾರೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು,ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ ಮೂರ್ತಿ, ಮಾಜಿ ಅಧ್ಯಕ್ಷ ರವಿಕುಮಾರ್‌, ಮಾಜಿ ಸದಸ್ಯ ಬಾಬುರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT