ಭಾನುವಾರ, ಸೆಪ್ಟೆಂಬರ್ 19, 2021
24 °C
ಕಂದಾಯ ಅದಾಲತ್‌ಗೆ ಚಾಲನೆ ನೀಡಿದ ತಹಶೀಲ್ದಾರ್

ನಾಯಕನಹಟ್ಟಿ: ಮನೆ ಬಾಗಿಲಿಗೆ ತಾಲ್ಲೂಕು ಆಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ರೈತರು ತಾಲ್ಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಅವರ ಮನೆ ಬಾಗಿಲಿಗೆ ತಾಲ್ಲೂಕು ಆಡಳಿತವನ್ನು ತೆಗೆದುಕೊಂಡು ಹೋಗಿ ಸಮಸ್ಯೆಗಳನ್ನು ಪರಿಹರಿಸುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

ತಳಕು ಹೋಬಳಿಯ ಹಿರೇಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಗುರುವಾರ ಹಮ್ಮಿಕೊಂಡಿದ್ದ ಜನರ ‘ಮನೆ ಬಾಗಿಲಿಗೆ ತಾಲ್ಲೂಕು ಆಡಳಿತ’ ಹಾಗೂ ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಾಸಕ ಬಿ.ಶ್ರೀರಾಮುಲು ಅವರು ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳು, ಪೌತಿಖಾತೆ, ಜಮೀನುಗಳ ಪೋಡಿಕಾರ್ಯ, ಬಗರ್‌ಹುಕುಂ ಅಡಿಯಲ್ಲಿ ಜಮೀನುಗಳ ಮಂಜೂರು ಕಾರ್ಯ ಸೇರಿದಂತೆ ಹಲವು ಸೌಲಭ್ಯಗಳು ತಲುಪಬೇಕು ಎಂದು ಸೂಚಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ತಾಲ್ಲೂಕಿನ ಬಹುತೇಕ ರೈತರು, ಸಾರ್ವಜನಿಕರು, ವೃದ್ಧರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತಾಲ್ಲೂಕು ಕಚೇರಿಗೆ ಅಲೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಮನೆಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವುಗಳಿಗೆ 15 ದಿನದೊಳಗೆ ಪರಿಹರಿಸುವ ಯೋಜನೆ ರೂಪಿಸಲಾಗಿದೆ ಎಂದರು.

ಹಿರೇಹಳ್ಳಿ ಗ್ರಾಮದಿಂದ ಈ ಅಭಿಯಾನವನ್ನು ಆರಂಭಿಸಲಾಗಿದೆ. ಗ್ರಾಮದ ಪ್ರತಿ ಮನೆಗೂ ತೆರಳಿದಾಗ ಒಬ್ಬೊಬ್ಬರದೂ ಒಂದೊಂದು ಸಮಸ್ಯೆಗಳಿವೆ ಎಂಬುದು ತಿಳಿಯಿತು. ಮೂರು ತಲೆಮಾರುಗಳಿಂದ ಖಾತೆ ಬದಲಾವಣೆಯಾಗದೇ ಮೃತವ್ಯಕ್ತಿಗಳ ಹೆಸರಿನಲ್ಲಿ ಜಮೀನುಗಳಿವೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಪೋಡಿ ಸಮಸ್ಯೆ, ದಾರಿ ಸಮಸ್ಯೆ, ಗ್ರಾಮದಲ್ಲಿ ಸ್ವಚ್ಛತೆಯ ಕೊರತೆ, ಆರೋಗ್ಯ ಸಮಸ್ಯೆ, ಅಂಗನವಾಡಿಗಳ ಅವ್ಯವಸ್ಥೆಗಳನ್ನು ಪರಿಶೀಲಿಸಲಾಗಿದೆ. ಅವುಗಳನ್ನು ಪರಿಹರಿಸಲು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ಸೇರಿ ಹಲವಾರು ಸಾಮಾಜಿಕ ಭದ್ರತಾ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಜನರ ಅಸಹಾಯಕತೆ, ಸಿಬ್ಬಂದಿ ನಿರ್ಲಕ್ಷ್ಯದಿಂದ ಶೇ 5ರಿಂದ 10ರಷ್ಟು ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯಗಳು ತಲುಪಿಲ್ಲ. ಜನರು ಅಲೆಯುವುದು ತಪ್ಪಬೇಕು
ಎಂದರು.

ತಾಲ್ಲೂಕು ಪಂಚಾಯಿತಿ ಇಒ ಪ್ರಕಾಶ್, ತಾಲ್ಲೂಕು ಆರೋಗ್ಯಾಧಿಕಾರಿ ಪ್ರೇಮಸುಧಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಮ್ಮ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಪಿಎಸ್‌ಐ ಮಾರುತಿ, ಪಿಡಿಒ ವೆಂಕಟೇಶ್, ಕಂದಾಯ ನಿರೀಕ್ಷಕ ಅನಿಲ್‌ಕುಮಾರ್, ಮುಖಂಡರಾದ ಡಿ.ಆರ್. ಬಸವರಾಜ್, ಟಿ.ರೂಪ, ವಿನೋದಮ್ಮ, ಸಿಆರ್‌ಪಿ ಮಾರಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.