ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು | ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ

Published 24 ಫೆಬ್ರುವರಿ 2024, 6:54 IST
Last Updated 24 ಫೆಬ್ರುವರಿ 2024, 6:54 IST
ಅಕ್ಷರ ಗಾತ್ರ

ಹಿರಿಯೂರು: ದಕ್ಷಿಣ ಕಾಶಿ ಎಂದು ಹೆಸರಾಗಿರುವ ನಗರದ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಫೆ.24ರಂದು ಮಧ್ಯಾಹ್ನ 12.30ಕ್ಕೆ ಜರುಗಲಿದೆ.

ಹಿರಿಯೂರಿನಲ್ಲಿ ನೆಲೆಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತನ್ನ ಆರಾಧ್ಯ ದೈವ ಚನ್ನಮ್ಲಲಿಕಾರ್ಜುನನ ದರ್ಶನ ಮಾಡಲು ಕಾಲ್ನಡಿಗೆಯಲ್ಲಿ ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಳು. ಆಕೆಗೆ ವಯಸ್ಸಾದ ಮೇಲೆ ಶ್ರೀಶೈಲಕ್ಕೆ ಹೋಗಿಬರಲು ಕಷ್ಟವಾಗಿತ್ತು. ಆದಕಾರಣ ಮಲ್ಲೇಶ್ವರ ಸ್ವಾಮಿಯೇ ಹಿರಿಯೂರಿಗೆ ಬಂದು ನೆಲೆಸಿದ ಎಂಬ ಪ್ರತೀತಿ ಇದೆ.

ಹೊಸದುರ್ಗದ ಸಮೀಪದ ಯಗಟಿಯಲ್ಲಿ ಮಲ್ಲೇಶ್ವರಸ್ವಾಮಿ ರಥೋತ್ಸವ ನಡೆಯುತ್ತಿದ್ದಾಗ ಭೀಕರ ಮಳೆ ಬಂದು ಸ್ವಾಮಿಯ ರಥವು ವೇದಾವತಿ ನದಿಯಲ್ಲಿ ಕೊಚ್ಚಿ ಹೋಗಿ ಹಿರಿಯೂರು ನದಿ ದಡದಲ್ಲಿ ಬಂದು ನಿಂತಿತ್ತು. ತೇಲಿ ಬಂದ ರಥವನ್ನು ಮಲ್ಲೇಶ್ವರ ದೇಗುಲಕ್ಕೆ ತಂದ ನಂತರ ಈ ದೇವಾಲಯ ತೇರುಮಲ್ಲೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು ಎಂದೂ  ಹೇಳಲಾಗುತ್ತದೆ.

ಹಿರಿಯೂರಿನಲ್ಲಿ ಪಾಳೆಗಾರನಾಗಿದ್ದ ರಾಜಾ ಕೆಂಚಪ್ಪನಾಯಕ ಕ್ರಿ.ಶ. 1446ರಲ್ಲಿ ನಿರ್ಮಿಸಿರುವ ತೇರುಮ್ಲಲೇಶ್ವರ ಸ್ವಾಮಿ ದೇಗುಲ ದ್ರಾವಿಡ ಶೈಲಿಯಲ್ಲಿದ್ದು, ದೇವಾಲಯದ ಗೋಪುರ 45 ಅಡಿ ಎತ್ತರವಿದೆ. ಇದು ಹಂಪೆಯ ವಿರೂಪಾಕ್ಷೇಶ್ವರ ದೇಗುಲದ ಗೋಪುರವನ್ನು ಹೋಲುತ್ತದೆ. ಗರ್ಭ ಗುಡಿಯಲ್ಲಿರುವ ವಿಗ್ರಹದ ಮುಖವು ಕಾಶಿಯಲ್ಲಿರುವಂತೆ ಇರುವ ಕಾರಣ ಇದನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತಿದೆ.

ದೇಗುಲದ ಮುಂಭಾಗ ಸುಮಾರು 56 ಅಡಿ ಎತ್ತರದ ದೀಪಸ್ತಂಭವಿದೆ. ಪ್ರತಿವರ್ಷ ಬ್ರಹ್ಮ ರಥೋತ್ಸವ ನಡೆದ 2ನೇ ದಿನ ನಡೆಯುವ ಕರ್ಪೂರದ ಆರತಿ ಸಂದರ್ಭದಲ್ಲಿ ಸ್ತಂಭದ ಮೇಲಿರುವ ನಂದಿ ಮಂಟಪದ ಸುತ್ತ ಇರುವ ಕಬ್ಬಿಣದ 8 ಸೌಟುಗಳಿಗೆ ಎಣ್ಣೆ ಹಾಕಿ, ದೀಪ ಹಚ್ಚುವುದು ವಾಡಿಕೆ. ಇದನ್ನು ಮಹಿಳೆಯರ ಹಬ್ಬವೆಂದೇ ಕರೆಯಲಾಗುತ್ತದೆ.

ದೇವಾಲಯದ ಮುಂಭಾಗ 45 ಅಡಿ ಎತ್ತರದ ಉಯ್ಯಾಲೆ ಕಂಬವಿದೆ. ಜಾತ್ರೆಯ ಸಮಯದಲ್ಲಿ ಉತ್ಸವಮೂರ್ತಿ ಕುಳ್ಳಿರಿಸಿ ತೂಗಲಾಗುತ್ತದೆ. ದೇವರನ್ನು ತೂಗುವಾಗ ಮುಟ್ಟಿ ನಮಸ್ಕರಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಉಯ್ಯಾಲೆ ಕಂಬಕ್ಕೆ ಹೊಂದಿಕೊಂಡಂತೆ ನಾಗರಕಟ್ಟೆ ಇದ್ದು, ನಾಗರಪಂಚಮಿಯಲ್ಲಿ ವಿಶೇಷ ಪೂಜೆ ಸ್ಲಲಿಸಲಾಗುತ್ತದೆ.

ದೇವಸ್ಥಾನದಲ್ಲಿ ಶಿವಧನುಸ್ಸು ಇದ್ದು, ಬ್ರಹ್ಮ ರಥೋತ್ಸವದಂದು ಬೆಳಿಗ್ಗೆ ವೇದಾವತಿ ನದಿಗೆ ಒಯ್ದು ಪೂಜಿಸಿ ತರಲಾಗುತ್ತದೆ. ಪೂಜೆಯ ನಂತರ ಹಿಂದಿರುಗುವಾಗ ಧನುಸ್ಸು ಹಗುರವಾಗಿದ್ದರೆ ಉತ್ತಮ ಮಳೆ-ಬೆಳೆ ಎಂದೂ, ಭಾರವಾಗಿದ್ದರೆ ಬರಗಾಲವೆಂದೂ ಈ ಭಾಗದ ಭಕ್ತರು ನಂಬಿದ್ದಾರೆ.

ಭಗವಾಧ್ವಜ ಹರಾಜಿನಿಂದ ₹ 40 ಲಕ್ಷದಿಂದ ₹ 50 ಲಕ್ಷದವರೆಗೆ ಆದಾಯ ಬರುತ್ತದೆ. ಈ ಹಣವನ್ನು ಭಕ್ತರಿಗೆ ಮೂಲಸೌಲಭ್ಯ ಕಲ್ಪಿಸಲು ಬಳಸಬೇಕು.
ಆಲೂರು ಸಿದ್ದರಾಮಣ್ಣ, ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT