ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪರಿಷ್ಕರಣೆಗೆ ವಿರೋಧ: ಸಿಎಂ ಬಸವರಾಜ ಬೊಮ್ಮಾಯಿಗೆ ಸಾಣೇಹಳ್ಳಿ ಶ್ರೀ ಪತ್ರ

Last Updated 31 ಮೇ 2022, 6:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿಯುಳ್ಳ ಪಠ್ಯವನ್ನು ತಕ್ಷಣ ಹಿಂಪಡೆದು ಪರಿಷ್ಕರಿಸಬೇಕು. ಇಲ್ಲವೇ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು. ಕೂಡಲೇ ಕ್ರಮ ಜರುಗಿಸದಿದ್ದರೆ ನಾಡಿನಾದ್ಯಂತ ಹೋರಾಟ ನಡೆಸುವುದು ಅನಿವಾರ್ಯ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳವಾರ ಪತ್ರ ಬರೆದಿರುವ ಸ್ವಾಮೀಜಿ, ಪಠ್ಯ ಪುಸ್ತಕದಲ್ಲಿರುವ ದೋಷಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬಸವಣ್ಣ ಹಾಗೂ ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದು ಖಂಡನಾರ್ಹ’ ಎಂದು ಆಕ್ರೋಶ ಹೊರಹಾಕಿದ್ದಾರೆ.

‘9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣನವರನ್ನು ಕುರಿತ ಪಾಠವಿದೆ. ಕಳೆದ ವರ್ಷವೂ ಈ ಪಾಠವಿತ್ತು. ಪರಿಷ್ಕೃತ ಪಠ್ಯದಲ್ಲಿ ಕೆಲ ಸಾಲುಗಳನ್ನು ತೆಗೆದು ತಮಗೆ ಬೇಕಾಗಿರುವುದನ್ನು ಸೇರಿಸಲಾಗಿದೆ. ಮಹತ್ವದ ಅಂಶಗಳನ್ನು ಕಿತ್ತುಹಾಕಿ ತಿರುಚಲಾಗಿದೆ. ಬಸವಣ್ಣನವರ ಶುದ್ಧ ಹಾಗೂ ಪಾರದರ್ಶಕ ಬದುಕಿಗೆ ಕಳಂಕವುಂಟು ಮಾಡಲಾಗಿದೆ. ‘ವಚನಕಾರರು ವೀರಶೈವ ಮತವನ್ನು ಸುಧಾರಿಸಿದರು’ ಎಂಬುದು ಶುದ್ಧ ಸುಳ್ಳು. ಅವರು ‘ಲಿಂಗಾಯತ ಧರ್ಮವನ್ನು ಜಾರಿಗೆ ತಂದರು’ ಎಂದಾಗಬೇಕಿತ್ತು. ಇಂತಹ ಹಲವು ದೋಷಗಳು ಪಠ್ಯದಲ್ಲಿವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪಠ್ಯಪುಸ್ತಕ ರಚನಾ ಸಮಿತಿ ಹಾಗೂ ಅದು ಬದಲಾಯಿಸುವ ಪಠ್ಯದ ಬಗ್ಗೆ ಸಾಕಷ್ಟು ಆಕ್ಷೇಪ ಹಾಗೂ ಆಪಾದನೆಗಳು ಕೇಳಿಬರುತ್ತಿವೆ. ಯಾವಹಂತದಲ್ಲಿ ಏನು ಬದಲಾವಣೆ ಮಾಡಿದ್ದಾರೆ ಮತ್ತು ಸೇರಿಸಿದ್ದಾರೆ ಎಂಬುದನ್ನು ಗಮನಿಸಲು ಪಠ್ಯಪುಸ್ತಕಗಳೇ ಸಿಗುತ್ತಿಲ್ಲ. ಈಗಾಗಲೇ ಶಾಲೆಗಳು ಪ್ರಾರಂಭವಾಗಿ 15 ದಿನಗಳು ಕಳೆದಿವೆ. ಆದರೂ, ಪಠ್ಯಪುಸ್ತಕಗಳು ಲಭ್ಯವಾಗಿಲ್ಲವೆಂದಾದರೇ ಶಿಕ್ಷಕರು ಏನು ಪಾಠ ಮಾಡಬೇಕು’ ಎಂದು ಪ್ರಶ್ನಿಸಿದ್ದಾರೆ.

‘ಈಗಿನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಇರುವವರು ಒಂದು ವರ್ಗಕ್ಕೆ ಸೇರಿದವರು ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ದುಡಿದವರು, ಶಿಕ್ಷಣ ತಜ್ಞರು, ಸಾಮಾಜಿಕ ಕಾಳಜಿಯುಳ್ಳ ದೂರದೃಷ್ಟಿಯುಳ್ಳವರು ಪಠ್ಯ ರಚನಾ ಸಮಿತಿಯಲ್ಲಿರಬೇಕಾದದ್ದು ಅಪೇಕ್ಷಣೀಯ. ಇಲ್ಲಿ ಜಾತಿ, ಪಕ್ಷ, ರಾಜಕಾರಣ ಮಾಡಬಾರದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT