ಮಂಗಳವಾರ, ಸೆಪ್ಟೆಂಬರ್ 21, 2021
26 °C
ನ್ಯಾಯಾಧೀಶೆ, ವಕೀಲರ ಮನವೊಲಿಕೆಯಿಂದ ಮನಸ್ಸು ಬದಲಿಸಿದ ದಂಪತಿ

ವಿಚ್ಛೇದನ ಕೋರಿದ್ದವರು ಮತ್ತೆ ಒಂದಾದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ನ್ಯಾಯಾಧೀಶರು ಹಾಗೂ ವಕೀಲರ ಮನವೊಲಿಕೆಯಿಂದ ಮತ್ತೆ ಒಂದಾದ ಅಪರೂಪದ ಘಟನೆ ಪಟ್ಟಣದ ನ್ಯಾಯಾಲಯದಲ್ಲಿ ನಡೆದಿದೆ.

ಕುಮ್ಮಿನಘಟ್ಟ ಗ್ರಾಮದ ವಿ.ರುದ್ರೇಶ್ ಹಾಗೂ ಹೊನ್ನಾಳಿ ತಾಲ್ಲೂಕಿನ ಎಸ್.ವಿ.ವಿನೂತನಾ ದಂಪತಿ 9 ವರ್ಷಗಳ ಹಿಂದೆ ಮದುವೆ ಆಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ. ಆದರೆ, ಇಬ್ಬರಲ್ಲಿ ವೈಮನಸ್ಸು ಮೂಡಿದ್ದರಿಂದ ಸಂಸಾರದಲ್ಲಿ ಬಿರುಕು ಮೂಡಿತ್ತು.

ಆರು ತಿಂಗಳ ಹಿಂದೆ ದಂಪತಿ ಇಲ್ಲಿನ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರೇಮಾ ವಸಂತರಾವ್ ಪವಾರ್ ದಂಪತಿಗೆ ಜೀವನದ ಪಾಠ ಹೇಳಿಕೊಟ್ಟರು. ವಿಚ್ಛೇದನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ಹೇಳಿದರು. ಇಬ್ಬರು ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆಯೂ ದಂಪತಿಗೆ ಮನವರಿಕೆ ಮಾಡಿಕೊಟ್ಟರು. ಇದರಿಂದ ಮನಸ್ಸು ಪರಿವರ್ತನೆ ಮಾಡಿಕೊಂಡ ದಂಪತಿ ಒಂದಾಗಿ ಜೀವನ ನಡೆಸುವುದಾಗಿ ತಿಳಿಸಿದರು. ನ್ಯಾಯಾಧೀಶರ ಸಮ್ಮುಖದಲ್ಲಿ ಹೂವಿನ ಹಾರ ಬದಲಿಸಿಕೊಳ್ಳುವ ಮೂಲಕ ಮತ್ತೆ ಹೊಸ ಜೀವನಕ್ಕೆ ಕಾಲಿಟ್ಟರು.

‘ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯ ಮನವೊಲಿಸಲಾಯಿತು. ಇಬ್ಬರೂ ಸ್ವ ಇಚ್ಛೆಯಿಂದ ಒಪ್ಪಿಕೊಂಡು ಮತ್ತೆ ಒಂದಾಗಿದ್ದಾರೆ. ರುದ್ರೇಶ್ ಕಡೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು, ದಂಪತಿ ಮಕ್ಕಳೊಂದಿಗೆ ಒಟ್ಟಿಗೆ ವಾಸವಾಗಿದ್ದಾರೆ’ ಎಂದು ಪತಿ ಪರ ವಕೀಲ ಜಿ.ಇ.ರಂಗಸ್ವಾಮಿ, ಪತ್ನಿ ಪರ ವಕೀಲ ಜಯದೇವ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು