ಶನಿವಾರ, ಜುಲೈ 2, 2022
25 °C

ಆಟೊ–ಲಾರಿ ಡಿಕ್ಕಿ: ಶವಸಂಸ್ಕಾರಕ್ಕೆ ಹೊರಟಿದ್ದ ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಂಬಂಧಿಕರ ಶವಸಂಸ್ಕಾರಕ್ಕೆ ಹೊರಟಿದ್ದ ಆಟೊದಲ್ಲಿ ದುಃಖ ಮಡುಗಟ್ಟಿತ್ತು. ಮಾರಘಟ್ಟ ಗ್ರಾಮ ತಲುಪಲು ಕೆಲವೇ ಕಿ.ಮೀ ದೂರವಿತ್ತು. ವೇಗವಾಗಿ ಬಂದ ಈಚರ್‌ ಲಾರಿ ಸರಕು ಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕಾತ್ರಾಳು ಕೆರೆಯ ಸೇತುವೆಯ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಗಳೂರು ತಾಲ್ಲೂಕಿನ ಕೆಳಗೋಟೆ ಗ್ರಾಮದ ಹಾಲಪ್ಪ (70), ರುದ್ರಮ್ಮ (58) ಹಾಗೂ ಸಣ್ಣ ಬಸವರಾಜಪ್ಪ (45) ಮೃತಪಟ್ಟವರು.

ಚಿತ್ರದುರ್ಗ ತಾಲ್ಲೂಕಿನ ಮಾರಘಟ್ಟದಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಕೆಳಗೋಟೆ ಗ್ರಾಮದ ಒಂಬತ್ತು ಜನರು ಸರಕು ಸಾಗಣೆ ವಾಹನದಲ್ಲಿ ಹೊರಟಿದ್ದರು. ಬೀರಾವರ ಮಾರ್ಗವಾಗಿ ಮಾರಘಟ್ಟದತ್ತ ಪ್ರಯಾಣ ಬೆಳೆಸಿದ್ದರು. ಕಾತ್ರಾಳು ಕೆರೆಯ ಸೇತುವೆಯ ಬಳಿ ಈ ದುರಂತ ಸಂಭವಿಸಿದೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ದಾವಣಗೆರೆ ಕಡೆಯಿಂದ ಚಿತ್ರದುರ್ಗದತ್ತ ಬರುತ್ತಿದ್ದ ಈಚರ್‌ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಆಟೊಗೆ ಅಪ್ಪಳಿಸಿದೆ. ಭೀಕರ ಅಪಘಾತಕ್ಕೆ ಆಟೊ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡಿದ್ದವರು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೇ ಮೂವರು ಮೃತಪಟ್ಟಿದ್ದಾರೆ. ಕಲ್ಲೇಶಪ್ಪ, ಚಂದ್ರಪ್ಪ, ಪಾರ್ವತಮ್ಮ, ರುದ್ರೇಶಪ್ಪ, ಸಿದ್ದೇಶ್‌ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು