ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರಕ್ಕೆ ಅಭಿಮಾನಿಗಳ ಲಗ್ಗೆ

Last Updated 25 ಅಕ್ಟೋಬರ್ 2021, 6:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ನಿಷ್ಕ್ರಿಯಗೊಂಡಿದ್ದ ಚಿತ್ರಮಂದಿರಗಳು ಮತ್ತೆ ಕಳೆಗಟ್ಟುತ್ತಿವೆ. ಸ್ಟಾರ್‌ ನಟರ ಅಭಿಮಾನಿಗಳಿಂದ ಭರ್ತಿಯಾಗುತ್ತಿವೆ. ಸೋಂಕು ಹರಡುವುದನ್ನು ತಡೆಯಲು ವಿಧಿಸಿದ್ದ ನಿರ್ಬಂಧಗಳನ್ನು ಸರ್ಕಾರ ತೆರವು ಮಾಡಿರುವುದು ಸಿನಿಮಾ ಉದ್ಯಮದಲ್ಲಿ ಹೊಸ ಸಂಚಲನವುಂಟು ಮಾಡಿದೆ.

ಶೇ 100ರಷ್ಟು ಆಸನ ಭರ್ತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟ ಬಳಿಕ ಇಬ್ಬರು ಸ್ಟಾರ್‌ ನಟರ ಕನ್ನಡ ಚಲನ ಚಿತ್ರಗಳು ತೆರೆಕಂಡಿವೆ. ಸುದೀಪ್‌ ಅಭಿನಯದ ‘ಕೋಟಿಗೊಬ್ಬ–3’ ಹಾಗೂ ದುನಿಯಾ ವಿಜಯ್‌ ಅಭಿನಯದ ‘ಸಲಗ’ ಭರ್ಜರಿ ಪ್ರದರ್ಶನ ಕಾಣುತ್ತಿವೆ. ಈ ಇಬ್ಬರು ನಟರಿಗೆ ದೊಡ್ಡ ಅಭಿಮಾನಿ ಪಡೆಯೇ ಇರುವುದರಿಂದ ಸಹಜವಾಗಿ ಚಿತ್ರಮಂದಿರ ತುಂಬಿ ತುಳುಕಿವೆ. ಮತ್ತೊಂದೆಡೆ ತೆಲಗು ಸಿನಿಮಾಗಳು ಹೊಸ ಕ್ರೇಜ್‌ ಸೃಷ್ಟಿಸುತ್ತಿವೆ.

ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ನಾಲ್ಕು, ಚಳ್ಳಕೆರೆಯಲ್ಲಿ ಐದು, ಹಿರಿಯೂರು ಮೂರು, ಮೊಳಕಾಲ್ಮುರು, ಚಿಕ್ಕಜಾಜೂರು ಹಾಗೂ ಹೊಸದುರ್ಗ ಪಟ್ಟಣದಲ್ಲಿ ತಲಾ ಒಂದು ಸಿನಿಮಾ ಮಂದಿರಗಳಿವೆ. ಎಲ್ಲ ಚಿತ್ರಮಂದಿರಗಳು ಏಕಪರದೆ ವ್ಯವಸ್ಥೆ ಹೊಂದಿದ್ದು, ನಿತ್ಯ ನಾಲ್ಕು ಪ್ರದರ್ಶನದ ವ್ಯವಸ್ಥೆ ಇದೆ. ಕನ್ನಡ, ತೆಲುಗು ಸಿನಿಮಾಗಳು ಜಿಲ್ಲೆಯಲ್ಲಿ ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತವೆ. ತಮಿಳು ಸಿನಿಮಾ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಈ ಚಿತ್ರಗಳ ಪ್ರದರ್ಶನಕ್ಕೆ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಬಾಲಿವುಡ್‌ ಸಿನಿಮಾಗಳು ಆಗಾಗ ಕ್ರೇಜ್‌ ಸೃಷ್ಟಿಸಿದ ನಿದರ್ಶನಗಳಿವೆ.

ರಾಜಕುಮಾರ್‌, ವಿಷ್ಣುವರ್ಧನ್‌, ಶಂಕರನಾಗ್‌, ಅಂಬರೀಶ್‌ ನಾಯಕ ನಟರಾಗಿ ಮಿಂಚುತ್ತಿದ್ದ ಕಾಲದಲ್ಲಿ ಜಿಲ್ಲೆಯಲ್ಲಿ ಚಿತ್ರೋದ್ಯಮ ಉತ್ತುಂಗದ ಸ್ಥಿತಿಯಲ್ಲಿತ್ತು. ರಾಂಪುರ ಸೇರಿ ದೊಡ್ಡ ಹಳ್ಳಿಗಳಲ್ಲಿಯೂ ಥಿಯೇಟರ್‌ಗಳು ಇದ್ದವು. ಕೌಟುಂಬಿಕ ಚಿತ್ರಗಳು ತೆರೆಕಂಡರೆ ತಿಂಗಳು ಕಾಲ ಚಿತ್ರಮಂದಿರಗಳು ಹೌಸ್‌ಫುಲ್‌ ಆಗಿರುತ್ತಿದ್ದವು. ಈ ಟ್ರೆಂಡ್‌ ಕಡಿಮೆ ಆಗಿರುವ ಪರಿಣಾಮ ರಾಂಪುರ ಹಾಗೂ ಹೊಳಲ್ಕೆರೆಯ ಚಿತ್ರಮಂದಿರಗಳು ಬಾಗಿಲು ಮುಚ್ಚಿದವು. ಚಿತ್ರದುರ್ಗ ನಗರದ ಚಿತ್ರಮಂದಿರಗಳ ಸಂಖ್ಯೆಯೂ ಕಡಿಮೆಯಾಯಿತು. ಕೋವಿಡ್‌ ಕಾಣಿಸಿಕೊಂಡ ಬಳಿಕ ಮತ್ತೊಂದು ಸುತ್ತಿನ ಸಂಕಷ್ಟದಿಂದ ಚಿತ್ರೋದ್ಯಮ ಪಾರಾಗಲು ಪ್ರಯತ್ನಿಸುತ್ತಿದೆ.

ಕೊರೊನಾ ಸೋಂಕು ದೇಶದಲ್ಲಿ ಕಾಣಿಸಿಕೊಂಡು ಲಾಕ್‌ಡೌನ್‌ ವಿಧಿಸುವ ಮೊದಲೇ ಥಿಯೇಟರ್‌ಗಳು ಬಾಗಿಲು ಮುಚ್ಚಬೇಕಾಯಿತು. ಮನರಂಜನೆಯ ಉದ್ದೇಶದಿಂದ ಅತಿ ಹೆಚ್ಚು ಜನರು ಒಂದಡೆ ಸೇರುವುದಕ್ಕೆ ಸರ್ಕಾರ ನಿರ್ಬಂಧ ವಿಧಿಸಿತು. 2020ರ ಮಾರ್ಚ್‌ 14ರಂದು ಬಾಗಿಲು ಮುಚ್ಚಿದ ಚಿತ್ರಮಂದಿರಗಳಿಗೆ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಸಿಗಲು ವಿಳಂಬವಾಯಿತು.

ಸುಪ್ರಸಿದ್ಧ ತಾರೆಯರ ದೊಡ್ಡ ಬಜೆಟ್‌ ಸಿನಿಮಾಗಳೇ ಏಕಪರದೆ ಚಿತ್ರಮಂದಿರದ ಜೀವಾಳ. ಬಿಡುಗಡೆಯಾದ ಹಲವು ದಿನ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಾರೆ. ಅರ್ಧದಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದ ಸಂದರ್ಭದಲ್ಲಿ ದೊಡ್ಡ ಬಜೆಟ್‌ ಸಿನಿಮಾ ಬಿಡುಗಡೆ ಆಗಲಿಲ್ಲ. ಇದರಿಂದ ಚಿತ್ರಮಂದಿರಗಳು ಸಂಕಷ್ಟ ಎದುರಿಸಬೇಕಾಯಿತು. ಹಿರಿಯೂರು ಚಿತ್ರಮಂದಿರವೊಂದು ಈವರೆಗೆ ಪ್ರದರ್ಶನಕ್ಕೆ ಒಲವು ತೋರಿರಲಿಲ್ಲ. ಚಳ್ಳಕೆರೆ, ಹೊಸದುರ್ಗ ಸೇರಿ ಹಲವೆಡೆ ಇಂತಹದೇ ಸ್ಥಿತಿ ನಿರ್ಮಾಣವಾಗಿತ್ತು.

ಕೋವಿಡ್‌ ಮೊದಲ ಅಲೆ ಅಂತ್ಯವಾದ ಬಳಿಕ ಸಿನಿಮಾ ಕ್ಷೇತ್ರದಲ್ಲಿ ಸಣ್ಣ ಸಂಚಲನ ಶುರುವಾಗಿತ್ತು. ಪುನೀತ್‌ ರಾಜಕುಮಾರ್‌ ನಟನೆಯ ‘ಯುವರತ್ನ’, ದರ್ಶನ್‌ ಅಭಿನಯದ ‘ರಾಬರ್ಟ್‌’ ಹಾಗೂ ಧ್ರುವ ಸರ್ಜಾ ಅವರ ‘ಪೊಗರು’ ಚಿತ್ರಗಳು ತೆರೆಕಂಡವು. ಕೋವಿಡ್‌ಗೂ ಮೊದಲೇ ನಿರ್ಮಾಣವಾಗಿದ್ದ ಸಿನಿಮಾಗಳು ಸರದಿ ಪ್ರಕಾರ ಚಿತ್ರಮಂದಿರಕ್ಕೆ ಬಂದವು. ಚಿತ್ರಮಂದಿರದ ಎಲ್ಲ ಆಸನಗಳ ಭರ್ತಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ತೋರಿದ ದ್ವಂದ್ವ ನೀತಿಗಳು ಕೂಡ ಪ್ರೇಕ್ಷಕರನ್ನು ಇನ್ನಷ್ಟು ಭೀತಿಯಲ್ಲಿಟ್ಟವು.

ಮೂರನೇ ಅಲೆಯ ಎಚ್ಚರಿಕೆಯ ನಡುವೆಯೂ ಜನಜೀವನ ಸಹಜಸ್ಥಿತಿಗೆ ಮರಳಿದೆ. ಕೋವಿಡ್‌ ಪ್ರಕರಣಗಳು ತೀರಾ ಕನಿಷ್ಠ ಮಟ್ಟಕ್ಕೆ ಬಂದಿವೆ. ಜಿಲ್ಲೆಯಲ್ಲಿ ನಿತ್ಯ ಒಂದಂಕಿ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿಯೇ ಸಿನಿಮಾ ಥಿಯೇಟರ್‌ಗಳ ಆಸನಗಳ ಭರ್ತಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಶಿವರಾಜ್‌ಕುಮಾರ್‌ ಅಭಿನಯದ ‘ಭಜರಂಗಿ–2’, ಯಶ್‌ ಅಭಿನಯದ ‘ಕೆಜಿಎಫ್‌–2’ ಸೇರಿ ತೆಲುಗು, ತಮಿಳು ಹಾಗೂ ಬಾಲಿವುಡ್‌ ಸಿನಿಮಾಗಳು ತೆರೆಕಾಣಲು ಸಜ್ಜಾಗಿವೆ. ಚಿತ್ರಮಂದಿರಗಳಲ್ಲಿ ಮತ್ತೆ ವೈಭವ ಮರುಕಳಿಸುವ ಭರವಸೆ ಮೂಡಿದೆ.

ಒಟಿಟಿಯತ್ತ ಪ್ರೇಕ್ಷಕರ ಚಿತ್ತ

ಓವರ್‌ ದಿ ಟಾಪ್‌ (ಒಟಿಟಿ) ವೇದಿಕೆ ಮೂಲಕ ಸಿನಿಮಾ ವೀಕ್ಷಣೆ ಮಾಡುವ ಟ್ರೆಂಡ್‌ ಸೃಷ್ಟಿಯಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಹೇರಿದ ಲಾಕ್‌ಡೌನ್‌ ಹಾಗೂ ಇತರ ನಿರ್ಬಂಧಗಳಿಂದ ಈ ವೇದಿಕೆ ಹೆಚ್ಚು ಮುನ್ನೆಲೆಗೆ ಬಂದಿತು. ಪ್ರೇಕ್ಷಕರು ಈ ವೇದಿಕೆಯ ಸೆಳೆತಕ್ಕೆ ಒಳಗಾದಂತೆ ಚಿತ್ರಮಂದಿರದ ಒಲವು ಕಡಿಮೆಯಾಗುತ್ತಿರುವಂತೆ ಕಾಣುತ್ತಿದೆ.

‘ಒಟಿಟಿ ಮತ್ತು ಚಿತ್ರಮಂದಿರದ ಪ್ರೇಕ್ಷಕರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಒಟಿಟಿಯಲ್ಲಿ ವೀಕ್ಷಿಸಿವವರು ಚಿತ್ರಮಂದಿರಗಳಿಗೆ ಈ ಮೊದಲು ಕೂಡ ಬರುತ್ತಿರಲಿಲ್ಲ. ಚಿತ್ರಮಂದಿರದಲ್ಲಿ ತೆರೆಕಂಡ ವಾರಕ್ಕೆ ಒಟಿಟಿಯಲ್ಲಿ ಸಿನಿಮಾ ಲಭ್ಯವಾದ ಸಂದರ್ಭದಲ್ಲಿ ಸಂಕಷ್ಟ ಎದುರಾಗಬಹುದು. ಆದರೆ, ಈ ಪ್ರಮಾಣ ತೀರಾ ಕಡಿಮೆ’ ಎನ್ನುತ್ತಾರೆ ಜಿಲ್ಲಾ ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷ ಜಿ.ಪಿ. ಕುಮಾರ್‌.

ಸಿಗಲಿಲ್ಲ ಸರ್ಕಾರದ ನೆರವು

ಕೋವಿಡ್‌ ಕಾರಣಕ್ಕೆ ಥಿಯೇಟರ್‌ಗಳು ಬಾಗಿಲು ಮುಚ್ಚಿದರೂ ಕಾರ್ಮಿಕರು ಹಾಗೂ ಮಾಲೀಕರಿಗೆ ಮಾತ್ರ ನೆರವು ಸಿಗಲಿಲ್ಲ. ಈ ಕೊರಗು ಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವವರನ್ನು ಕಾಡುತ್ತಿದೆ.

ಕೋವಿಡ್‌ ಕಾಣಿಸಿಕೊಂಡ ಬಳಿಕ ಚಿತ್ರಮಂದಿರಗಳನ್ನು ಬಾಗಿಲು ಮುಚ್ಚಲಾಯಿತು. ಪ್ರದರ್ಶನ ಸ್ಥಗಿತಗೊಳಿಸಿದ್ದರೂ ನಿತ್ಯ ಸರಾಸರಿ ₹ 10 ಸಾವಿರ ನಿರ್ವಹಣಾ ವೆಚ್ಚ ತಗಲುತ್ತಿತ್ತು. ವಿದ್ಯುತ್‌ ಶುಲ್ಕ, ತೆರಿಗೆ, ಕಾರ್ಮಿಕರ ವೇತನ ನೀಡುವುದು ಮಾಲೀಕರಿಗೆ ಕಷ್ಟವಾಗಿತ್ತು. ತೆರಿಗೆ ಹಾಗೂ ವಿದ್ಯುತ್‌ ಬಿಲ್‌ ಪಾವತಿಯಲ್ಲಿ ವಿನಾಯಿತಿ ನೀಡುವಂತೆ ಚಿತ್ರಮಂದಿರದ ಮಾಲೀಕರು ಸರ್ಕಾರವನ್ನು ಕೋರಿಕೊಂಡಿದ್ದರು.

‘ಇದಕ್ಕೆ ಸ್ಪಂದಿಸುವ ಆಶ್ವಾಸನೆ ನೀಡಿದ ಸರ್ಕಾರ ಒಂದು ವರ್ಷದ ಆಸ್ತಿ ತೆರಿಗೆ ರದ್ದು ಮಾಡಿತು. ಪರವಾನಗಿ ನವೀಕರಣಕ್ಕೆ ಶುಲ್ಕವನ್ನು ಪಡೆಯಲಿಲ್ಲ. ಆದರೆ, ಕಾರ್ಮಿಕರಿಗೆ ಘೋಷಣೆ ಮಾಡಿದ ಪರಿಹಾರ ಮಾತ್ರ ಫಲಾನುಭವಿಗಳನ್ನು ತಲುಪಲೇ ಇಲ್ಲ’ ಎಂದು ಬಸವೇಶ್ವರ ಚಿತ್ರಮಂದಿರದ ಮಾಲೀಕ ಮಧು ಮಾಹಿತಿ ಹಂಚಿಕೊಂಡರು.

ಚೇತರಿಕೆಯತ್ತ ಚಲನಚಿತ್ರ ಮಂದಿರಗಳು

ಚಳ್ಳಕೆರೆ: ಕೋವಿಡ್ ಪರಿಸ್ಥಿತಿಯಿಂದ ಒಂದೂವರೆ ವರ್ಷ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಮಂದಿರಗಳು ಎರಡನೇ ಅಲೆ ನಂತರ ಆರ್ಥಿಕವಾಗಿ ಸ್ವಲ್ಪ ಚೇತರಿಕೆಯತ್ತ ಸಾಗುತ್ತಿವೆ.

ಮಹಾದೇವಿ ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮಕೃಷ್ಣ, ಬಳ್ಳಾರಿ ರಸ್ತೆ ಚಳ್ಳಕೇರಮ್ಮ ದೇವಸ್ಥಾನದ ಶ್ರೀಪದ್ಮಾ, ಬೆಂಗಳೂರು ರಸ್ತೆಯ ರಂಗನಾಥ (ಟಿಎಟಿ) ಮತ್ತು ಪಾವಗಡ ರಸ್ತೆಯ ಬಾಲಾಜಿ ಚಿತ್ರಮಂದಿರ ಸೇರಿದಂತೆ ನಗರದಲ್ಲಿ ಒಟ್ಟು ನಾಲ್ಕು ಮಂದಿರಗಳಿವೆ.

ಬೆಳಿಗ್ಗೆ 10.30ರಿಂದ 1 ಗಂಟೆ, ಮಧ್ಯಾಹ್ನ 2ರಿಂದ 5 ಹಾಗೂ ಸಂಜೆ 6 ರಿಂದ ರಾತ್ರಿ 9 ಮತ್ತು ರಾತ್ರಿ 9ರಿಂದ 12 ಗಂಟೆ ಹೀಗೆ ಪ್ರತಿದಿನ ಸರದಿಯಂತೆ ಪ್ರದರ್ಶನಗಳು ನಡೆಯುತ್ತಿವೆ. ದುನಿಯಾ ವಿಜಯ್‌ ಅಭಿನಯದ ‘ಸಲಗ’ ಹಾಗೂ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಕನ್ನಡ ಮತ್ತು ‘ಪೆಳ್ಳಿಸಂದಳಿ’ ತೆಲುಗು ಭಾಷೆಯ ಚಿತ್ರಗಳು ನಿತ್ಯ ನಾಲ್ಕು ಪ್ರದರ್ಶನ ಕಾಣುತ್ತಿವೆ.

‘ಶ್ರೀಪದ್ಮಾ’ದಲ್ಲಿ ‘ಸಲಗ’, ‘ಬಾಲಾಜಿ’ಯಲ್ಲಿ ‘ಕೋಟಿಗೊಬ್ಬ–3’ ಮತ್ತು ‘ರಂಗನಾಥ’ ಹಾಗೂ ‘ರಾಮಕೃಷ್ಣ’ದಲ್ಲಿ ತೆಲುಗು ‘ಪೆಳ್ಳಿಸಂದಳಿ’ ಚಲನ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಇಲ್ಲಿ ಕನ್ನಡ ಮತ್ತು ತೆಲಗು ಸಿನಿಮಾ ನಿತ್ಯ ಎರಡು ಪ್ರದರ್ಶನ ಕಾಣುತ್ತವೆ.

ಆರ್ಥಿಕ ತೊಂದರೆ ಮತ್ತು ಇನ್ನಿತರ ಸಮಸ್ಯೆಯಿಂದ ಜೈರಾಮ್‌ ಮತ್ತು ಮಹಾಲಕ್ಷ್ಮೀ ಚಿತ್ರಮಂದಿರ ಎರಡು ವರ್ಷ ಬಾಗಿಲು ಮುಚ್ಚಿದ್ದವು. ಚಿತ್ರಮಂದಿರದ ಕಟ್ಟಡವನ್ನು ಚುನಾವಣಾ ತರಬೇತಿ ಹಾಗೂ ಬಟ್ಟೆ ಮಾರಾಟಕ್ಕೆ ಬಾಡಿಗೆ ನೀಡಲಾಗಿತ್ತು.

‘ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಲ್ಲಿ ಯುವಸಮೂಹದ ಸಂಖ್ಯೆಯೇ ಹೆಚ್ಚು. ಸಾಮಾಜಿಕ ಹಾಗೂ ಸಂಸಾರಿಕ ಜೀವನದ ಅರ್ಥವನ್ನು ತಿಳಿಯಲು ಬರುವವರ ಸಂಖ್ಯೆ ತೀರಾ ಕಡಿಮೆ. ಪ್ರತಿ ಚಲನಚಿತ್ರ ಕನಿಷ್ಠ ಎರಡು ವಾರ ಪ್ರದರ್ಶನ ಕಾಣುತ್ತವೆ. ಪ್ರತಿ ಶೋನಲ್ಲಿ 100-200 ಜನ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಇರುತ್ತಾರೆ’ ಎನ್ನುತ್ತಾರೆ ಬಾಲಾಜಿ ಚಿತ್ರಮಂದಿರದ ಮಾಲೀಕ ಶ್ರೀನಿವಾಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT