ಜಿ.ಬಿ.ನಾಗರಾಜ್
ಚಿತ್ರದುರ್ಗ: ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದ ರೋಗ, ಬೆಲೆ ಏರಿಳಿತದ ಸಮಸ್ಯೆಗೆ ಕುಗ್ಗದೇ ಎಂಟು ವರ್ಷಗಳಿಂದ ಟೊಮೆಟೊ ಸಸಿ ನಾಟಿ ಮಾಡುತ್ತಿದ್ದ ರೈತನಿಗೆ ಈ ಬಾರಿ ಬಂಪರ್ ಲಾಭ ಸಿಕ್ಕಿದೆ. 30 ಗುಂಟೆಯಲ್ಲಿ ಬೆಳೆದ ಟೊಮೆಟೊ ₹ 7 ಲಕ್ಷ ಆದಾಯ ತಂದುಕೊಟ್ಟಿದೆ.
ಚಿತ್ರದುರ್ಗ ತಾಲ್ಲೂಕಿನ ತಾಲ್ಲೂಕಿನ ಭರಮಸಾಗರ ಹೋಬಳಿಯ ಸೀಗೆಹಳ್ಳಿಯ ರಂಗಸ್ವಾಮಿ ಹಾಗೂ ಅನಿತಾ ದಂಪತಿ ಟೊಮೆಟೊ ಬೆಳೆದು ಕೈತುಂಬ ಆದಾಯ ಗಳಿಸಿದ್ದಾರೆ. ಇನ್ನೂ ಎರಡು ಬಾರಿ ಟೊಮೆಟೊ ಕೊಯ್ಲಿಗೆ ಬರಲಿದ್ದು, ಕೈತುಂಬ ಲಾಭ ಸಿಗುವ ಸಂತಸದಲ್ಲಿದ್ದಾರೆ.
ರಂಗಸ್ವಾಮಿ ಅವರದು ತುಂಬು ಕುಟುಂಬ. ತಂದೆ, ತಾಯಿ ಹಾಗೂ ಮಕ್ಕಳೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಲ್ಕು ಎಕರೆ ಜಮೀನಿನಲ್ಲಿ ಪ್ರಧಾನವಾಗಿ ತರಕಾರಿ ಬೆಳೆಯುತ್ತಾರೆ. ಬೀನ್ಸ್, ಮೆಣಸು, ಬದನೆ ಹೀಗೆ ಹಲವು ಬಗೆಯ ತರಕಾರಿ ಬೆಳೆ ಇವರ ಕಾಯಕ. ಕುಟುಂಬದ ಸದಸ್ಯರೆಲ್ಲರೂ ಜಮೀನಿನಲ್ಲಿ ಶ್ರಮಪಡುತ್ತಾರೆ. ಎಂದಿನಂತೆ ಬೆಳೆದ ಟೊಮೆಟೊ ಈ ಬಾರಿ ರಂಗಸ್ವಾಮಿ ಅವರ ಕೈಹಿಡಿದಿದೆ.
‘ಪ್ರತಿ ವರ್ಷ ಒಂದೂವರೆ ಎಕರೆ ಟೊಮೆಟೊ ಬೆಳೆಯುತ್ತಿದ್ದೆ. ಆಗಾಗ ರೋಗ ಕಾಣಿಸಿಕೊಂಡಿದ್ದರಿಂದ ಈ ಬಾರಿ ಮುಕ್ಕಾಲು ಎಕರೆಗೆ ಮಾತ್ರ ಸೀಮಿತಗೊಳಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಭರಮಸಾಗರ ನರ್ಸರಿಯಿಂದ ‘ವೆಲ್‌ಕಂ’ ತಳಿಯ 6,500 ಸಸಿ ತಂದು ನಾಟಿ ಮಾಡಿದೆ. 20 ದಿನಗಳ ಬಳಿಕ ರಸಗೊಬ್ಬರ ನೀಡಿ ಕಾಯಿ ಕಟ್ಟಿದ ಬಳಿಕ ಕೀಟನಾಶಕ ಸಿಂಪಡಣೆ ಮಾಡಿದ್ದೆ. ಅಂದಾಜು ₹ 50 ಸಾವಿರ ವೆಚ್ಚ ಮಾಡಿದ್ದೇನೆ’ ಎನ್ನುತ್ತಾರೆ ರೈತ ರಂಗಸ್ವಾಮಿ.
ಸೀಗೆಹಳ್ಳಿ ತರಕಾರಿ ಬೆಳೆಗೆ ಹೆಸರುವಾಸಿ. ಇಲ್ಲಿ ಬೆಳೆಯುವ ಕೋಸು, ಬೀನ್ಸ್, ಟೊಮೆಟೊ, ಮೆಣಸು ಸೇರಿ ಇತರ ತರಕಾರಿ ದಾವಣಗೆರೆ, ಚಿತ್ರದುರ್ಗ, ಭರಮಸಾಗರ, ಹೊಸದುರ್ಗ ಸೇರಿ ಹಲವು ಮಾರುಕಟ್ಟೆಗೆ ಸರಬರಾಜು ಆಗುತ್ತವೆ. ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ರಂಗಸ್ವಾಮಿ ಅವರು ಸಾಮಾನ್ಯವಾಗಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಹಣ್ಣು ಬರುವಂತೆ ಟೊಮೆಟೊ ಬೆಳೆಯುತ್ತಿದ್ದರು. ಇದೇ ಮೊದಲ ಬಾರಿಗೆ ಯುಗಾದಿ ಸಂದರ್ಭದಲ್ಲಿ ಸಸಿ ನಾಟಿ ಮಾಡಿ ಪ್ರಯೋಗಕ್ಕೆ ಕೈಹಾಕಿದ್ದು ಯಶಸ್ಸು ಕಂಡಿದೆ.
‘ಕಳೆದ ಬಾರಿ ರೋಗ ಹೆಚ್ಚಾಗಿ ನಿರೀಕ್ಷಿತ ಬೆಳೆ ಸಿಕ್ಕಿರಲಿಲ್ಲ. ಬೆಳೆಗೆ ಮಾಡಿದ ವೆಚ್ಚ ಮಾತ್ರ ಮರಳಿ ಬಂದಿತ್ತು. ಈ ವರ್ಷ ಉತ್ತಮ ಇಳುವರಿ ಹಾಗೂ ನಿರೀಕ್ಷೆ ಮೀರಿದ ಬೆಲೆ ಸಿಕ್ಕಿದ್ದು ಖುಷಿ ಕೊಟ್ಟಿದೆ. ಟೊಮೆಟೊ ಬೆಳೆಗೆ ಪ್ರತಿ ವರ್ಷ ಪಡುತ್ತಿದ್ದ ಕಷ್ಟಕ್ಕೆ ಈ ವರ್ಷ ಲಾಭ ದಕ್ಕಿದೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಅನಿತಾ ರಂಗಸ್ವಾಮಿ.
ಮೊದಲ ಕೊಯ್ಲಿನ 25 ಬಾಕ್ಸ್ ಟೊಮೆಟೊವನ್ನು ಶಿವಮೊಗ್ಗ ಮಾರುಕಟ್ಟೆಗೆ ಕೊಂಡೊಯ್ದಿದ್ದರು. ಪ್ರತಿ ಬಾಕ್ಸ್‌ಗೆ ₹ 600 ದರ ಸಿಕ್ಕಿತ್ತು. ಎರಡನೇ ಕೊಯ್ಲಿನ ಟೊಮೆಟೊವನ್ನು ದಾವಣಗೆರೆಗೆ ಸಾಗಿಸಲಾಯಿತು. ಪ್ರತಿ ಬಾಕ್ಸ್‌ಗೆ ₹ 800 ದರ ಸಿಕ್ಕಿತು. ಪ್ರತಿ ಕೊಯ್ಲಿಗೂ ಟೊಮೆಟೊ ಇಳುವರಿ ಹಾಗೂ ದರ ಏರಿಕೆ ಕಂಡಿತು. ಆದಾಯ ಏಕಾಏಕಿ ಹೆಚ್ಚಾಗಿ ರೈತ ರಂಗಸ್ವಾಮಿ ಪುಳಕಿತರಾಗಿದ್ದಾರೆ.
Quote - ಹಲವು ವರ್ಷಗಳಿಂದ ಟೊಮೆಟೊ ಬೆಳೆದರೂ ಬೀಜ ಗೊಬ್ಬರಕ್ಕೂ ಸಾಕಾಗುತ್ತಿರಲಿಲ್ಲ. ಪ್ರಸಕ್ತ ವರ್ಷ ಪ್ರತಿ ಬಾಕ್ಸ್ ಟೊಮೆಟೊಗೆ ನಿರೀಕ್ಷೆ ಮೀರಿದ ಬೆಲೆ ಸಿಕ್ಕಿದೆ. ದೇವರು ಕರುಣೆ ತೋರಿದ್ದಾನೆ. – ರಂಗಸ್ವಾಮಿ ಟೊಮೆಟೊ ಬೆಳೆಗಾರ ಸೀಗೆಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.