ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ಗೆ ಸಿಗುತ್ತಿಲ್ಲ ಬಾಡಿಗೆ ಕಟ್ಟಡ

ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಅಧಿಕಾರಿ ಮಾಹಿತಿ
Last Updated 5 ಆಗಸ್ಟ್ 2019, 13:18 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆ ನೂತನವಾಗಿ ಆರಂಭಿಸಿದ ವಿದ್ಯಾರ್ಥಿನಿಲಯಗಳಿಗೆ ಬಾಡಿಗೆ ಕಟ್ಟಡ ಸಿಗುತ್ತಿಲ್ಲ ಎಂಬ ಸಂಗತಿ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯ ಗಮನ ಸೆಳೆಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಸೋಮವಾರ ನಡೆಯಿತು.

‘ಹೊಸದಾಗಿ ಆರಂಭಿಸಿದ ಆರು ಹಾಸ್ಟೆಲ್‌ಗಳಿಗೆ ಬಾಡಿಗೆ ಕಟ್ಟಡ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಕಟ್ಟಡದ ಸಮಸ್ಯೆಯಿಂದ ಕೆಲ ಹಾಸ್ಟೆಲ್‌ಗಳಲ್ಲಿ ಮೂಲ ಸೌಲಭ್ಯದ ಕೊರತೆ ಎದುರಾಗಿದೆ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಒ.ಪರಮೇಶ್ವರಪ್ಪ ಸಭೆಗೆ ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ ಪರಿಷ್ಕೃತ ಆದೇಶದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಹೊಸ ಕಟ್ಟಡಗಳು ನಿರ್ಮಾಣ ಹಂತದಲ್ಲಿರುವುದರಿಂದ ಹಾಸ್ಟೆಲ್‌ಗೆ ಬಾಡಿಗೆ ಕಟ್ಟಡ ಪಡೆಯುವುದು ಅನಿವಾರ್ಯವಾಗಿದೆ.

ಮಳೆ ಕೊರತೆಯಿಂದ ಮೆಕ್ಕೆಜೋಳ ಬಿತ್ತನೆಯ ಅವಧಿ ಪೂರ್ಣಗೊಂಡಿದ್ದು, ಸಿರಿಧಾನ್ಯ ಬೆಳೆಯುವಂತೆ ರೈತರಿಗೆ ಸಲಹೆ ನೀಡಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

‘ಮೆಕ್ಕೆಜೋಳ ಬಿತ್ತನೆ ಅವಧಿ ಮುಗಿದಿದೆ. ಮಳೆ ಕೊರತೆಯಿಂದ ಅನೇಕ ರೈತರು ಇನ್ನೂ ಬಿತ್ತನೆ ಕಾರ್ಯ ಪೂರ್ಣಗೊಳಿಸಿಲ್ಲ. ಇನ್ನು ಮುಂದೆ ಬಿತ್ತನೆ ಮಾಡಿದರೆ ರೋಗ ಆವರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಸಿರಿಧಾನ್ಯ ಬೆಳೆಗಳು ಮಾತ್ರ ಪರ್ಯಾಯವಾಗಬಲ್ಲವು’ ಎಂದು ಸಹಾಯಕ ಕೃಷಿ ನಿರ್ದೇಶಕಿ ಜಿ.ಯು.ಭಾರತಮ್ಮ ಸಲಹೆ ನೀಡಿದರು.

‘ತುರುವನೂರು, ಕಸಬಾ ಹಾಗೂ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯಲ್ಲಿ ಶೇ 25ಕ್ಕಿಂತ ಕಡಿಮೆ ಮಳೆ ಬಿದ್ದಿದೆ. ಬಿತ್ತನೆ ಪೂರ್ವದಲ್ಲಿ ಕೆಲವರಿಗೆ ಬೆಳೆ ವಿಮೆ ಲಭ್ಯವಾಗಿದೆ. ಬೆಳೆ ನಷ್ಟ ಪರಿಹಾರ ಕೂಡ ಶೀಘ್ರದಲ್ಲಿ ದೊರೆಯಲಿದೆ. ಪ್ರೋತ್ಸಾಹ ಧನ ನೀಡುವ ರೈತ ಸಿರಿ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳುವ ಅವಧಿ ಆ.10ರವರೆಗೆ ಇದೆ’ ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್‌ ವಿರುದ್ಧ ಕಿಡಿ

ಆಹಾರ ಧಾನ್ಯಗಳ ಹಂಚಿಕೆಯ ಕಡತ ಸಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯ ಶಿರಸ್ತೆದಾರ್‌ ಎಸ್‌.ಪುಷ್ಪಲತಾ ಅವರನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಕೃಷ್ಣಾ ನಾಯ್ಕ್‌ ತರಾಟೆ ತೆಗೆದುಕೊಂಡರು. ಶಿಷ್ಟಾಚಾರದ ಪ್ರಕಾರ ವರದಿ ಸಲ್ಲಿಸದೇ ಇದ್ದರೆ ನೋಟಿಸ್‌ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

‘ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಆಹಾರ ಧಾನ್ಯ ಹಂಚಿಕೆ ಕಡತವನ್ನು ತಹಶೀಲ್ದಾರ್‌ ಅವರಿಗೆ ಸಲ್ಲಿಕೆ ಮಾಡುತ್ತಿದ್ದೀರಿ. ನನ್ನದು ‘ಎ’ ಗ್ರೇಡ್‌, ಅವರದು (ತಹಶೀಲ್ದಾರ್‌) ‘ಬಿ’ ಗ್ರೇಡ್‌. ನಿಮ್ಮ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಆಯುಕ್ತರಿಗೆ ಪತ್ರ ಬರೆಯಬಾರದೇಕೆ’ ಎಂದು ಪ್ರಶ್ನಿಸಿದರು.

ಉಪಾಧ್ಯಕ್ಷೆ ಸಿ.ಶಾಂತಮ್ಮ ರೇವಣಸಿದ್ದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ತಿಪ್ಪಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT