ಭಾನುವಾರ, ಸೆಪ್ಟೆಂಬರ್ 26, 2021
21 °C

ಕ್ವಾರಿ ಕೆಲಸಕ್ಕೆ ಹೋಗುವಂತೆ ಮಾಡಿದ್ದ ಕಡು ಬಡತನ

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ‘ಮನೆಯಲ್ಲಿ ಕಿತ್ತು ತಿನ್ನುತ್ತಿದ್ದ ಕಡು ಬಡತನವೇ ಕ್ವಾರಿ ಕೆಲಸಕ್ಕೆ ಹೋಗುವಂತೆ ಮಾಡಿತ್ತು. ಹೋದವನು ಈಗ ಶವವಾಗಿದ್ದಾನೆ. ಸಂಸಾರಕ್ಕೆ ಆಧಾರವಾಗಿದ್ದ ಅವನಿಲ್ಲದೇ ಕುಟುಂಬದ ಸ್ಥಿತಿ ಮುಂದೆ ಹೇಗೆ ಎಂದು ದಿಕ್ಕು ತೋಚದಂತಾಗಿದೆ...’

ಇದು ಶಿವಮೊಗ್ಗದಲ್ಲಿ ಗುರುವಾರ ಸಂಭವಿಸಿದ ಕಲ್ಲು ಕ್ವಾರಿ ಸ್ಫೋಟದಲ್ಲಿ ಮೃತಪಟ್ಟ ಗಡಿಯ ಆಂಧ್ರದ ರಾಯದುರ್ಗ ತಾಲ್ಲೂಕಿನ ಮುರುಡಿ ಗ್ರಾಮದ ರಾಜು (24) ಅವರ ಕುಟುಂಬದವರ ನೋವಿನ ಮಾತು.

ಈ ದುರಂತದಲ್ಲಿ ಪಟ್ಟಣದಿಂದ ಕೇವಲ 10 ಕಿ.ಮೀ ದೂರದ ರಾಯದುರ್ಗದ ಮೂವರು ಯುವಕರು ಮೃತಪಟ್ಟಿದ್ದಾರೆ. ಇದರಿಂದ ಗಡಿಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ.

ರಾಜು ಜತೆಯಲ್ಲಿ ರಾಯದುರ್ಗ ಪಟ್ಟಣದ ಸಂದೀಪ್ (26), ಜಾವೇದ್ (28) ಅವರೂ ಮೃತಪಟ್ಟಿದ್ದಾರೆ. ಶವಗಳು ಗುರುತು ಹಿಡಿಯಲು ಸಾಧ್ಯವಾಗದಷ್ಟು ಛಿದ್ರವಾಗಿದ್ದು, ಯುವಕರ ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ರಾಜುಗೆ ತಂದೆ ಇಲ್ಲ, ತಾಯಿ ಇದ್ದಾರೆ. ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. 3 ತಿಂಗಳ ಹೆಣ್ಣು ಮಗುವಿದೆ. ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬಂದು ಹೋಗಿದ್ದ. ಕ್ವಾರಿಯಲ್ಲಿ ಊಟ, ವಸತಿ ನೀಡಿ ತಿಂಗಳಿಗೆ ₹ 10 ಸಾವಿರ ಸಂಬಳ ನೀಡುತ್ತಿದ್ದರಂತೆ. ಸ್ಥಳೀಯವಾಗಿ ಉದ್ಯೋಗ ಕೊರತೆ ಮತ್ತು ಹೊಲವಿಲ್ಲದ ಕಾರಣಕ್ಕೆ ಈ ಕೆಲಸಕ್ಕೆ ಸೇರಿಕೊಂಡಿದ್ದ. ರಾಯದುರ್ಗದಲ್ಲಿದ್ದ ಸ್ನೇಹಿತರ ಮೂಲಕ ಅವನು ಕ್ವಾರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಘಟನೆ ಬಗ್ಗೆ ಮೊದಲು ಟಿ.ವಿಯಲ್ಲಿ ನೋಡಿ ತಿಳಿದುಕೊಂಡೆವು’ ಎಂದು ಆತನ ಮಾವ ವೆಂಕಟೇಶ್ ಅಳಲು ತೋಡಿಕೊಂಡರು.

ಜಾವೇದ್ ಮತ್ತು ಸಂದೀಪ್ ಅವರ ಮನೆ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಸುಂದರವಾಗಿದ್ದ ಇಬ್ಬರು ಯುವಕರ ಶವಗಳು ಘಟನೆಯಲ್ಲಿ ಬೆಂದು ಕರಕಲಾಗಿವೆ. 

ಶನಿವಾರ ರಾತ್ರಿ 7 ಗಂಟೆಯಾದರೂ ಶವಗಳು ರಾಯದುರ್ಗಕ್ಕೆ ಬಂದಿರಲಿಲ್ಲ. ಶಿವಮೊಗ್ಗ ಘಟನೆ ಸ್ಥಳ ವೀಕ್ಷಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ಬರುತ್ತಾರೆ ಎಂಬ ಕಾರಣಕ್ಕಾಗಿ ಶವಗಳನ್ನು ನೀಡಿಲ್ಲ. ಶವಗಳನ್ನು ತರಲು ವಾಹನ ತೆಗೆದುಕೊಂಡು ಸಂಬಂಧಿಕರು ಹೋಗಿದ್ದಾರೆ. ಮನೆಗಳಲ್ಲಿ ದುಃಖ ಮಡುಗಟ್ಟಿದ್ದು, ಶವಗಳ ನಿರೀಕ್ಷೆಯಲ್ಲಿದ್ದಾರೆ ಎಂದು ರಾಜು ಅವರ ಮಾವ ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು