ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಔಟ್‌ಗಳಾಗಿ ಬದಲಾಗುತ್ತಿವೆ ಕೃಷಿ ಜಮೀನು

Last Updated 16 ಡಿಸೆಂಬರ್ 2020, 2:04 IST
ಅಕ್ಷರ ಗಾತ್ರ

ಚಳ್ಳಕೆರೆ: ಬೀದರ್-ಶ್ರೀರಂಗಪಟ್ಟಣ ಬೈಪಾಸ್ ರಸ್ತೆ ಹಾದು ಹೋಗುವ ಚಳ್ಳಕೆರೆ ಕಸಬಾ ಮತ್ತು ತಳಕು ಹೋಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಹಳ್ಳಿ ರಾಜಕೀಯ ದಿನ ದಿನಕ್ಕೆ ಚುರುಕುಗೊಳ್ಳುತ್ತಿದೆ.

ಅಭ್ಯರ್ಥಿಯ ಆಯ್ಕೆಗೆ ನಿರ್ಣಯಿಸುವ ಹಂತಕ್ಕೆ ಬಂದಿದ್ದರೂ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಆಕಾಂಕ್ಷಿಗಳು ಆಸಕ್ತಿ ತೋರುತ್ತಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳಿಂದ ಹರಿದು ಬರುವ ಅನುದಾನದ ಮೇಲೆ ಕಣ್ಣಿಟ್ಟಿರುವ ಗ್ರಾಮದ ಯುವಕರು, ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬ ಛಲದಿಂದ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಹಳಬರು, ಅಭಿವೃದ್ಧಿಯ ನೈಜ ವಿಚಾರಗಳನ್ನು ಪಕ್ಕಕ್ಕಿಟ್ಟು, ತಮ್ಮ ಸಮುದಾಯ ಮತ್ತು ಹೆಚ್ಚು ಸಂಖ್ಯೆಯಲ್ಲಿರುವ ಇತರೆ ಜಾತಿ ಮತಗಳನ್ನು ಪಡೆದು ಪುನಃ ಆಯ್ಕೆಗೆ ಒಳಗಿಂದೊಳಗೆ ಸೂಕ್ಷ್ಮ ತಂತ್ರವನ್ನು ರೂಪಿಸುವ ಚಿಂತನೆಯಲ್ಲಿದ್ದಾರೆ.

ಇನ್ನೂ ಕೆಲವರು, ಪ್ರತಿ ದಿನ ಸಂಜೆ ಗ್ರಾಮದ ತೋಟದ ಮನೆಯಲ್ಲಿ ಅವರವರ ಜಾತಿ ಮತ್ತು ಕೋಮಿನ ಮುಖಂಡರನ್ನು ಒಂದೆಡೆ ಸೇರಿಸಿ ಚರ್ಚಿಸುತ್ತಿದ್ದು, ಗ್ರಾಮದ ಮತಗಳನ್ನು ಹಿಡಿದಿಟ್ಟುಕೊಳ್ಳಲು ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಗ್ರಾಮಗಳಲ್ಲಿ ಅಭಿವೃದ್ಧಿ ಮರೀಚಿಕೆ:

ಬೋರಪ್ಪನಹಟ್ಟಿ, ಜಾಲಿ ಮುಳ್ಳಿನ ಗಿಡಗಳಿಂದ ಆವೃತವಾಗಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ಮೂಗಿಗೆ ಬಡಿಯುವ ದುರ್ವಾಸನೆ, ರಸ್ತೆ ಮಧ್ಯೆ ಕಸದ ತಿಪ್ಪೆ, ಕುರಿರೊಪ್ಪ, ಹದಗೆಟ್ಟ ಸಿಮೆಂಟ್ ರಸ್ತೆ, ಸದಾ ಹರಿಯುತ್ತಿರುವ ಕೊಳಚೆನೀರು ಕಣ್ಣಿಗೆ ರಾಚುತ್ತಿದ್ದು, ಹಳ್ಳಿಯ ನೈಜ ಚಿತ್ರಣ ಗೋಚರವಾಗುತ್ತದೆ. ರಾಂಜಿಹಟ್ಟಿಗೆ ಡಾಂಬರು ರಸ್ತೆ ಮರೀಚಿಕೆಯಾಗಿದೆ. ಬುಡ್ನಹಟ್ಟಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಉದ್ದೇಶದಿಂದ ಗ್ರಾಮದ ರಸ್ತೆ ಪಕ್ಕದ ಶಾಲೆ, ಅಂಗನವಾಡಿ ಮತ್ತು ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ, 20 ವಾಸದ ಮನೆಗಳು ನೆಲಸಮವಾಗಿವೆ.

ತಳುಕು ಗ್ರಾಮದಿಂದ ಎತ್ತಪ್ಪ ದೇವರ ಗುಡ್ಡದ ಮಾರ್ಗವಾಗಿ ದೊಡ್ಡಉಳ್ಳಾರ್ತಿವರೆಗಿನ 12 ಕಿ.ಮೀ ಉದ್ದದ ರಸ್ತೆ ಡಾಂಬರೀಕರಣ ನನೆಗುದಿಗೆ ಬಿದ್ದಿದೆ. ನಿರಾಶ್ರಿತರ ನಿವೇಶನ ಹಂಚಿಕೆ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರಾಮದಲ್ಲಿ ಸರ್ಕಾರಿ ಜಾಗ ಇಲ್ಲ. ಬುಡ್ನಹಟ್ಟಿಯಿಂದ 3-4 ಕಿಮೀ ದೂರದ ಕುರಿನಿಂಗಯ್ಯನಹಟ್ಟಿ, ಮನೆಗಿಂತ ಕುರಿ ರೊಪ್ಪಗಳೇ ಹೆಚ್ಚು ಇವೆ. ಚರಂಡಿ, ಶುದ್ಧ ಕುಡಿಯುವ ನೀರು, ಶೌಚಾಲಯ, ಬಸ್ ಸಂಚಾರ ಹಲವು ಸಮಸ್ಯೆಗಳು ಇಲ್ಲಿನ ಜನರನ್ನು ಕಾಡುತ್ತಿವೆ. ಊರಿನ ಕೃಷಿ ಜಮೀನು, ರಸ್ತೆ ಬದಿಯಲ್ಲೇ ಮಲ ವಿಸರ್ಜನೆ ಸಾಮಾನ್ಯವಾಗಿದೆ.

ಸದಸ್ಯರ ವಶದಲ್ಲಿ ಜಾಬ್ ಕಾರ್ಡ್‌ಗಳು:

ನರೇಗಾ ಯೋಜನೆಯ ಹಣವನ್ನು ಕಬಳಿಸಲು ಪ್ರಭಾವಿಗಳು ಜಾಬ್ ಕಾರ್ಡ್‍ಗಳನ್ನು ಇಟ್ಟುಕೊಂಡು ಜನರನ್ನು ವಂಚಿಸುವ ಕಾರ್ಯ ತಳುಕು ಹೋಬಳಿಯ ಓಬಣ್ಣನಹಳ್ಳಿ, ಬಂಡೇತಿಮ್ಮಲಾಪುರ, ವಲಸೆ, ಬೋಗನಹಳ್ಳಿ, ಬಸಾಪುರ 10-12 ಗಡಿ ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಕೂಲಿ ಕೆಲಸಕ್ಕೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆಗಳು ನಡೆದಿವೆ. ಉತ್ತಮ ಡಾಂಬರು ರಸ್ತೆ ಇದ್ದರೂ ಬಸ್‌ಗಳು ಸಂಚರಿಸುತ್ತಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಈ ಭಾಗದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಚುನಾವಣೆಯಲ್ಲಿ ಗೆದ್ದು ಬಂದವರು ಏನಾದ್ರು ಮಾಡಿ ಹೆಣ್ಣು ಮಕ್ಕಳಿಗೆ ಶೌಚಾಲಯ, ಶಾಲೆಗೆ ಹೋಗಲು ಬಸ್ ವ್ಯವಸ್ಥೆ ಮಾಡಬೇಕು.

ಎನ್.ಭಾಗ್ಯಮ್ಮ,ರಾಂಜಿಹಟ್ಟಿ

==

ರಾಶ್ರಿತರು ₹5 ಲಕ್ಷ ಕೊಟ್ಟು ನಿವೇಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಏನು ಗೊತ್ತಿಲದವರು ಸ್ಪರ್ಧಿಸಲು ಓಡಾಡ್ತಾರೆ. ಈ ಚುನಾವಣೆ ಹುಡುಗರ ಪಾಳ್ಯವಾಗಿದೆ.

ಹೊಟ್ಟೆತಿಪ್ಪಯ್ಯ, ಕುರಿನಿಂಗಯ್ಯಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT