ಬುಧವಾರ, ಅಕ್ಟೋಬರ್ 20, 2021
29 °C
ವಾಣಿವಿಲಾಸ ಸಾಗರ ಜಲಾಶಯದಲ್ಲಿ ಭದ್ರೆ ನೀರು ಸಂಗ್ರಹ

ಹೊಸದುರ್ಗ: ಹಿನ್ನೀರು ಪ್ರದೇಶದ ಹಳ್ಳಿಗಳಲ್ಲಿ ಹೆಚ್ಚಿದ ಅಂತರ್ಜಲ

ಎಸ್‌. ಸುರೇಶ್‌ ನೀರಗುಂದ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಜಿಲ್ಲೆಯ ಏಕೈಕ ಜಲಾಶಯವಾದ ವಾಣಿವಿಲಾಸ ಸಾಗರದಲ್ಲಿ ಭದ್ರಾ ನೀರು ಹೆಚ್ಚು ಸಂಗ್ರಹ ಆಗಿರುವುದರಿಂದ ಹಿನ್ನೀರು ಪ್ರದೇಶದ ಕೆಲವು ಹಳ್ಳಿಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ.

ಈ ಬಾರಿ ಪೂರ್ವ ಮುಂಗಾರು ಮಳೆ ಸಮರ್ಪಕವಾಗಿ ಬಾರದ ಕಾರಣ ತಾಲ್ಲೂಕಿನ ಜಲಮೂಲಗಳಲ್ಲಿ ನೀರು ಬರಿದಾಗಿತ್ತು. ಅಂತರ್ಜಲವೂ ಸಾಕಷ್ಟು ಕುಸಿತವಾಗಿತ್ತು. ಇದರಿಂದ ಪಟ್ಟಣ ಸೇರಿ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿತ್ತು. ಸಮಸ್ಯೆ ಪರಿಹಾರಕ್ಕಾಗಿ ರೈತ ಸಂಘಟನೆ ಹಾಗೂ ಕ್ಷೇತ್ರದ ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಅವರು ಭದ್ರಾ ನೀರನ್ನು ವೇದಾವತಿ ನದಿ ಮೂಲಕ ಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ಸರ್ಕಾರ ಈ ಬಾರಿ ಜುಲೈ ತಿಂಗಳಿನಿಂದಲೇ ಭದ್ರಾ ನೀರನ್ನು ಜಿಲ್ಲೆಯ ಏಕೈಕ ಜೀವನದಿ ವೇದಾವತಿ ನದಿ ಮೂಲಕ ವಾಣಿವಿಲಾಸ ಜಲಾಶಯಕ್ಕೆ ಹರಿಸಲು ಆರಂಭಿಸಿತ್ತು. ಪ್ರಸ್ತುತ 108 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಇದರಿಂದ ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶಕ್ಕೆ ಸಮೀಪವಿರುವ ತಾಲ್ಲೂಕಿನ ಲಕ್ಕಿಹಳ್ಳಿ, ಮಾಡದಕೆರೆ, ಮತ್ತೋಡು, ಗುಡ್ಡದನೇರಲಕೆರೆ, ಕಂಚೀಪುರ ಗ್ರಾಮ ಪಂಚಾಯಿತಿ ಸೇರಿ ಇನ್ನಿತರ ಕಡೆಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ.

ಇದರಿಂದಾಗಿ ಈ ಭಾಗದಲ್ಲಿ ಸಮೃದ್ಧವಾಗಿ ಮಳೆಯಾಗದೇ ಹಿಂದೆ ಬತ್ತಿ ಹೋಗಿದ್ದ ಕೆಲವು ಹಳ್ಳಿಗಳ ಸೇದುವಬಾವಿ, ಜಮೀನಿನಲ್ಲಿದ್ದ ತೆರೆದ ಬಾವಿ, ಹಲವು ಕೊಳವೆಬಾವಿಗಳಲ್ಲಿ ನೀರು ಕಾಣಿಸುತ್ತಿದೆ. ಕೆಲವೆಡೆ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರಕಿದೆ.

ಹಲವು ಹಳ್ಳಿಗಳ ನೂರಾರು ರೈತರ ಜಮೀನಿನ ಕೊಳವೆಬಾವಿಗಳಲ್ಲಿ ಈ ಹಿಂದೆ ಬರುತ್ತಿದ್ದ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಕೆಲವು ಕೊಳವೆ ಬಾವಿಗಳಲ್ಲಿ ಸ್ವಾಭಾವಿಕವಾಗಿ ನೀರು ಉಕ್ಕುತ್ತಿದೆ. ಇದರಿಂದ ಈ ಭಾಗದ ನೇಗಿಲ ಯೋಗಿಯ ಮೊಗದಲ್ಲಿ ಮಂದಹಾಸ ಮೂಡಿದೆ. ಇಲ್ಲಿಯ ರೈತರು ಅಡಿಕೆ, ತೆಂಗು, ಬಾಳೆಯಂತಹ ತೋಟಗಾರಿಕೆ ಬೆಳೆಯನ್ನು ಹೆಚ್ಚಾಗಿ ಮಾಡಲು ಮುಂದಾಗಿದ್ದಾರೆ ಎನ್ನುತ್ತಾರೆ ಮತ್ತೋಡು ಗ್ರಾಮದ ರೈತ ರಾಮಪ್ಪ.

*
ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಸಮೀಪವಿರುವ ನಮ್ಮ ಜಮೀನಿನ ಕೊಳವೆಬಾವಿಯಲ್ಲಿ ಸ್ವಾಭಾವಿಕವಾಗಿ ನೀರು ಉಕ್ಕುತ್ತಿದೆ. ಇದರಿಂದ ಜಮೀನಿನಲ್ಲಿ ತೇವಾಂಶ ಕಡಿಮೆಯಾಗುತ್ತಿಲ್ಲ.
- ಲಕ್ಷ್ಮಣ, ರೈತ, ಅಗಸರಹಳ್ಳಿ

*
ಹಿಂದೆ ಬತ್ತಿ ಹೋಗಿದ್ದ ಕೊಳವೆಬಾವಿಯಲ್ಲಿ ಈಗ ನೀರು ಕಾಣಿಸುತ್ತಿದೆ. ಇದೇ ರೀತಿ ತಾಲ್ಲೂಕಿನೆಲ್ಲೆಡೆ ರೈತರಿಗೆ ಆಗಬೇಕಾದರೆ ಭದ್ರಾ ನೀರನ್ನು ಸರ್ಕಾರ ತುರ್ತಾಗಿ ಎಲ್ಲ ಕೆರೆಗಳಿಗೆ ಹರಿಸಬೇಕು.
- ಡಿ. ಪರುಶುರಾಮಪ್ಪ, ಮುಖಂಡ ಕಂಚೀಪುರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು