ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿ ವಾಪಾಸ್ ಕರೆಸಿಕೊಳ್ಳುವ ಅಧಿಕಾರ ಬೇಕು: ಉಪೇಂದ್ರ ಅಭಿಮತ

Last Updated 3 ಮೇ 2019, 16:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಚುನಾವಣೆಯಲ್ಲಿ ನೀಡಿದ ಆಶ್ವಾಸನೆ ಈಡೇರಿಸಲು ವಿಫಲವಾದ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅವಕಾಶವನ್ನು ಮತದಾರರಿಗೆ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ಚಿತ್ರನಟ ಉಪೇಂದ್ರ ಅಭಿಪ್ರಾಯಪಟ್ಟರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲೆಕ್ಷನ್‌, ಸೆಲೆಕ್ಷನ್‌ ಹಾಗೂ ರಿಜಕ್ಷನ್‌ ಅನ್ನು ಮತದಾರರೇ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯನ್ನು ಈಡೇರಿಸದಿದ್ದರೆ ಅಧಿಕಾರದಿಂದ ಕೆಳಗೆ ಇಳಿಸಬೇಕು. ಅಂತಹದೊಂದು ಅಧಿಕಾರ ಮತದಾರರಿಗೆ ಸಿಗಬೇಕು’ ಎಂದು ಹೇಳಿದರು.

‘ಎಲ್ಲ ರಾಜಕೀಯ ಪಕ್ಷಗಳು ಪ್ರಣಾಳಿಕೆಯನ್ನು ಹೊರತರುತ್ತವೆ. ಜನರನ್ನು ಸೆಳೆಯಲು ಹಲವು ಘೋಷಣೆಗಳನ್ನು ಮತದಾರರ ಮುಂದಿಡುತ್ತವೆ. ಆದರೆ, ಅವುಗಳನ್ನು ಕಾಲಮಿತಿಯಲ್ಲಿ ಈಡೇರಿಸುವುದಿಲ್ಲ. ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳಿಗೆ ರಾಜಕೀಯ ಪಕ್ಷಗಳು ಬದ್ಧತೆ ತೋರಬೇಕು. ಎಲ್ಲ ಪ್ರಣಾಳಿಕೆಗಳನ್ನು ನ್ಯಾಯಾಲಯದಲ್ಲಿ ನೋಂದಣಿ ಮಾಡಬೇಕು’ ಎಂಬ ವಿಚಾರವನ್ನು ಮುಂದಿಟ್ಟರು.

‘ಮತ ಹಾಕುವ ದಿನ ಮಾತ್ರ ಮತದಾರರಿಗೆ ಬೆಲೆ ಇರುತ್ತದೆ. ಉಳಿದ ಐದು ವರ್ಷ ಪ್ರತಿನಿಧಿಗಳೇ ಪ್ರಭುಗಳಾಗಿ ಮೆರೆಯುತ್ತಾರೆ. ಅವರು ಹೇಳಿದಂತೆ ಕೇಳುವುದು ಜನರಿಗೆ ಅನಿವಾರ್ಯವಾಗಿದೆ. ಬ್ರಿಟಿಷರು ದೇಶದಿಂದ ತೊಲಗಿದ ಬಳಿಕ ನಮ್ಮವರೇ ಅಧಿಕಾರ ಸ್ಥಾನದಲ್ಲಿ ಕುಳಿತಿದ್ದಾರೆ. ಆದರೂ, ಜನರಿಗೆ ಸ್ವಾತಂತ್ರ್ಯ ಮತ್ತು ಹಕ್ಕುಗಳು ಸಿಕ್ಕಿಲ್ಲ’ ಎಂದು ಆರೋಪಿಸಿದರು.

‘ಹಣ ಮತ್ತು ತೋಳ್ಬಲ ಇರುವವರು ಮಾತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂಬ ಭ್ರಮೆಯನ್ನು ಮೂಡಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸಲು ಸಾವಿರಾರು ಕೋಟಿ ಹಣ ಸುರಿಯಬೇಕು ಎಂದು ನಂಬಿಸಲಾಗಿದೆ. ರಾಜಕೀಯ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಎಂಬ ಉದ್ದೇಶದಿಂದ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಲಾಗಿದೆ. ಸಾಮಾನ್ಯ ಜನರನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗುತ್ತಿದೆ’ ಎಂದು ಹೇಳಿದರು.

‘ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಮೊದಲ ಹಂತದ ಚುನಾವಣೆಗೆ 14 ಕ್ಷೇತ್ರದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಧೇಯೋದ್ದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಚುನಾವಣಾ ಕಣದಿಂದ ಹಿಂದೆ ಉಳಿದಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ’ ಎಂದರು.

‘ಸಮಾಜ ಸೇವೆಯನ್ನು ವ್ಯಾಪಾರ ದೃಷ್ಟಿಯಿಂದ ನೋಡುವ ಮನಸ್ಥಿತಿ ಬೆಳೆದಿದೆ. ಸಮಾಜ ಸೇವೆಯ ಹೆಸರಲ್ಲಿ ಬಂಡವಾಳ ಹೂಡಿಕೆ ಮಾಡಿ ರಾಜಕೀಯದಲ್ಲಿ ಲಾಭ ಪಡೆಯುವ ಪ್ರಯತ್ನಗಳು ಈಗ ನಡೆಯುತ್ತಿವೆ. ರಾಜಕೀಯ ಬದಲಾದರೆ ಮಾತ್ರ ದೇಶ ಬದಲಾಗುತ್ತದೆ. ಚುನಾವಣೆ ‍ಪ್ರಚಾರದ ನೆಪದಲ್ಲಿ ಒಬ್ಬರನ್ನೊಬ್ಬರು ಟೀಕಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ರಾಜಕೀಯದ ಬಗ್ಗೆ ಜನರಿಗೆ ಭಯವಿದೆ. ಹೀಗಾಗಿ, ಅನೇಕರು ಈ ಕ್ಷೇತ್ರದಿಂದ ದೂರ ಉಳಿಯುತ್ತಿದ್ದಾರೆ. ಅವರಿಗೆ ಈ ವ್ಯವಸ್ಥೆಯಲ್ಲಿ ಮೊದಲ ನಂಬಿಕೆ ಬೆಳೆಯಬೇಕು. ಮಧ್ಯವರ್ತಿಗಳು ಇಲ್ಲದೇ ರಾಜಕೀಯ ಮಾಡುವ ಉದ್ದೇಶದಿಂದ ಪಕ್ಷದ ಕಚೇರಿಯನ್ನು ಸ್ಥಾಪಿಸಿಲ್ಲ. ಪಕ್ಷದ ಸಿದ್ದಾಂತ ಒಪ್ಪುವ ಯುವಕರು ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾರೆ’ ಎಂದರು. ಪಕ್ಷದ ಅಭ್ಯರ್ಥಿ ದೇವೇಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT