ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸಿ: ಬಿ.ಎನ್‌.ಚಂದ್ರಪ್ಪ

Last Updated 12 ಸೆಪ್ಟೆಂಬರ್ 2021, 17:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ತ್ವರಿತಗೊಳಿಸಲು ನಾಲ್ಕು ಜಿಲ್ಲೆಯ ರಾಜಕೀಯ ನಾಯಕರ ಸಭೆ ಆಯೋಜಿಸಬೇಕು. ರಾಷ್ಟ್ರೀಯ ಮಾನ್ಯತೆ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಬೇಕು ಎಂದು ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಸಲಹೆ ನೀಡಿದ್ದಾರೆ.

‘ಜಿಲ್ಲೆಯನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿಸಲು ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಗ್ಗೂಡಲು ಸಿದ್ಧರಿದ್ದೇವೆ. ರಾಜಕೀಯಕ್ಕಿಂತ ಜಿಲ್ಲೆಯ ಜನರ ಹಿತವೇ ಕಾಂಗ್ರೆಸ್‌ಗೆ ಮುಖ್ಯವಾಗಿದೆ. ಜನಪರ ಯೋಜನೆಗೆ ಸಣ್ಣ ಅಡ್ಡಿ ಕೂಡ ಎದುರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಯೋಜನೆಗೆ ಅಡ್ಡಿಯಾದ ಸಂಗತಿ ಏನು ಎಂಬುದನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಸಂಸದರಾಗಿದ್ದ ಅವಧಿಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಾಕಷ್ಟು ಶ್ರಮಿಸಿದ್ದೇನೆ. ಯೋಜನೆ ಪ್ರಗತಿಗೆ ಶಾಸಕ ರಘುಮೂರ್ತಿ, ಮಾಜಿ ಶಾಸಕ ಡಿ.ಸುಧಾಕರ್, ಮಾಜಿ ಸಚಿವ ಎಚ್.ಆಂಜನೇಯ ಜತೆಗೂಡಿ ಕೆಲಸ ಮಾಡಿದ್ದೇವೆ. ಹೊಸದುರ್ಗ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ನೀರಗಂಟಿಯಂತೆ ನಿಗಾವಹಿಸಿದ್ದರು. ಯೋಜನೆಯ ಒಳಿತಿಗೆ ಸರ್ಕಾರದೊಂದಿಗೆ ಕೈಜೋಡಿಸಲು ಈಗಲೂ ಸಿದ್ಧರಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಯೋಜನೆ ಸಾಕಷ್ಟು ಪ್ರಗತಿ ಕಂಡಿದೆ. ಸಾವಿರಾರು ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ₹ 12 ಸಾವಿರ ಕೋಟಿ ಅನುದಾನ ನೀಡಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ, ಧರ್ಮಸಿಂಗ್, ಬಿ.ಎಸ್.ಯಡಿಯೂರಪ್ಪ ಅಧಿಕಾರವಧಿಯಲ್ಲಿಯೂ ಸಹಕಾರ
ದೊರಕಿದೆ’ ಎಂದು ಹೇಳಿದ್ದಾರೆ.

‘ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ. ಬಯಲುಸೀಮೆ ಪ್ರದೇಶದ ಮಠಾಧೀಶರು, ರಾಜಕೀಯ ಪಕ್ಷಗಳ ನಾಯಕರು, ಸಂಘ-ಸಂಸ್ಥೆಗಳು ದಶಕಗಳ ಕಾಲ ಹೋರಾಟ ನಡೆಸಿವೆ. ಆದಷ್ಟು ಬೇಗ ಯೋಜನೆ ಪೂರ್ಣಗೊಳ್ಳಬೇಕು ಎಂಬುದು ಜನರ ಅಪೇಕ್ಷೆ’ ಎಂದು ತಿಳಿಸಿದ್ದಾರೆ.

* ಜಿಲ್ಲೆಯ ಜನರ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. ಇದರ ಶ್ರೇಯಸ್ಸು ಅವರಿಗೇ ಸಲ್ಲಬೇಕು. ಜನಪ್ರತಿನಿಧಿಗಳು ಹೆಚ್ಚುಗಾರಿಕೆ ಪ್ರದರ್ಶಿಸುವ ಬದಲು ಹೊಣೆಗಾರಿಕೆ ನಿಭಾಯಿಸಬೇಕು.

-ಬಿ.ಎನ್‌.ಚಂದ್ರಪ್ಪ, ಮಾಜಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT