ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ: ಶಕ್ತಿ ಸಚಿವಾಲಯ ಒಪ್ಪಿಗೆ, ರೈತರಲ್ಲಿ ಹರ್ಷ

ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ಪ್ರಸ್ತಾವ
Last Updated 26 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಎರಡು ದಶಕಗಳಿಂದ ಅನುಷ್ಠಾನಗೊಳ್ಳುತ್ತಿರುವ ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆಯ ಮುದ್ರೆ ಬೀಳಲು ಇನ್ನೊಂದು ಹಂತವಷ್ಟೇ ಬಾಕಿ ಇದೆ. ಕೇಂದ್ರದ ಜಲಶಕ್ತಿ ಸಚಿವಾಲಯದ ಹೂಡಿಕೆ ಸಮಿತಿ ಸಭೆ ₹ 16,125 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು, ಬಯಲುಸೀಮೆಯ ರೈತರಲ್ಲಿ ಸಂತಸ ಮೂಡಿಸಿದೆ.

ಜಲಶಕ್ತಿ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಜಲ ಆಯೋಗ (ಸಿಡಬ್ಲುಸಿ) ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಲು ಒಪ್ಪಿಗೆ ಸೂಚಿಸಿತ್ತು. ರಾಜ್ಯ ಜಲಸಂಪನ್ಮೂಲ ಇಲಾಖೆ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಜಲಶಕ್ತಿ ಸಚಿವಾಲಯದ ಹೂಡಿಕೆ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ. ಪ್ರಧಾನಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ಸಭೆಯ ಅನುಮೋದನೆ ಸಿಗುವುದಷ್ಟೇ ಬಾಕಿ ಇದೆ.

ನಿರೀಕ್ಷೆಯಂತೆ ರಾಷ್ಟ್ರೀಯ ಮಾನ್ಯತೆ ಸಿಕ್ಕರೆ ರಾಜ್ಯದ ಮೊದಲ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಕೇಂದ್ರ ಸರ್ಕಾರ ಯೋಜನೆಗೆ ₹ 16,125 ಕೋಟಿ ಅನುದಾನ ನೀಡುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯ 2.25 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇನ್ನಷ್ಟು ತ್ವರಿತವಾಗಿ ಅನುಷ್ಠಾನಗೊಳ್ಳುತ್ತದೆ. ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇಡಲಾಗಿತ್ತು.

₹ 4,246 ಕೋಟಿ ವೆಚ್ಚ:

ಭದ್ರಾ ಮೇಲ್ದಂಡೆ ಯೋಜನೆಗೆ 2021ರ ಫೆಬ್ರುವರಿ ಅಂತ್ಯದವರೆಗೆ ₹ 4,246 ಕೋಟಿ ವೆಚ್ಚ ಮಾಡಲಾಗಿದೆ. ಭದ್ರಾ ಜಲಾಶಯದಿಂದ ಅಜ್ಜಂಪುರದವರೆಗಿನ ನಾಲೆ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಅಜ್ಜಂಪುರ ಸಮೀಪದ ಏಳು ಕಿ.ಮೀ ಸುರಂಗ ಮಾರ್ಗವೂ ಪೂರ್ಣಗೊಂಡಿದೆ. ಸುಮಾರು 40 ಕಿ.ಮೀ ಉದ್ದದ ನಾಲೆಯಲ್ಲಿ ಈಗಾಗಲೇ ನೀರು ಹರಿಯುತ್ತಿದೆ. ವರ್ಷಾಂತ್ಯಕ್ಕೆ 79 ಕೆರೆಗಳು ತುಂಬುವ ಸಾಧ್ಯತೆ ಇದೆ.

ತರೀಕೆರೆ ತಾಲ್ಲೂಕಿನ 25 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸುವ ಪ್ರಕ್ರಿಯೆ ಕೂಡ ಆರಂಭವಾಗಿದೆ. ನಾಲೆ ನಿರ್ಮಾಣ, ಕೆರೆ ತುಂಬಿಸುವುದು ಹಾಗೂ ಹನಿ ನೀರಾವರಿ ಕಲ್ಪಿಸುವ ಕೆಲಸ ಏಕಕಾಲದಲ್ಲಿ ನಡೆಯುತ್ತಿದೆ. ಹನಿ ನೀರಾವರಿಗೆ ಅಲ್ಲಲ್ಲಿ ಪಂಪ್‌ಹೌಸ್‌ ನಿರ್ಮಿಸಲಾಗುತ್ತಿದೆ. ತರೀಕೆರೆ ತಾಲ್ಲೂಕು ವ್ಯಾಪ್ತಿಯ 11 ಪಂಪ್‌ಹೌಸ್‌ಗಳಲ್ಲಿ 8 ಪಂಪ್‌ಹೌಸ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಶೇ 40ರಷ್ಟು ಪೂರ್ಣ:

ಭದ್ರಾ ಮೇಲ್ದಂಡೆ ಯೋಜನೆ ಅನಷ್ಠಾನಗೊಳ್ಳಲು ಆರಂಭವಾಗಿ 13 ವರ್ಷಗಳು ಕಳೆದಿವೆ. ಈವರೆಗೆ ಶೇ 40ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಇನ್ನೂ ಅರ್ಧಕ್ಕೂ ಹೆಚ್ಚು ಕಾಮಗಾರಿ ಬಾಕಿ ಉಳಿದಿದೆ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯದೇ ಇರುವುದರಿಂದ ಇನ್ನೂ ಕೃಷಿ ಭೂಮಿಗೆ ನೀರು ಒದಗಿಸಲು ಸಾಧ್ಯವಾಗಿಲ್ಲ.

2001ರಲ್ಲಿ ಈ ಯೋಜನೆ ರೂಪುಗೊಂಡಿದೆ. 21 ಟಿಎಂಸಿ ಅಡಿ ನೀರಿನ ಹಂಚಿಕೆಗೆ ಸರ್ಕಾರ ಮಾಸ್ಟರ್‌ ಪ್ಲಾನ್‌ ರೂಪಿಸಿತ್ತು. 2003ರಲ್ಲಿ ಇದಕ್ಕೆ ₹2,813 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಆದರೆ, ಯೋಜನೆಗೆ ಅಧಿಕೃತ ಚಾಲನೆ ದೊರೆಯಲಿಲ್ಲ. ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಶಿಫಾರಸಿನ ಮೇರೆಗೆ 2008ರಲ್ಲಿ ₹ 5,985 ಕೋಟಿಗೆ ಅನುಮೋದನೆ ಸಿಕ್ಕಿತು. 2015ರಲ್ಲಿ ಯೋಜನೆ ಪರಿಷ್ಕರಿಸಿ ₹ 12,340 ಕೋಟಿಯ ಅಂದಾಜು ವೆಚ್ಚವನ್ನು ಸಿದ್ಧಪಡಿಸಲಾಗಿತ್ತು. 2020–21ರಲ್ಲಿ ಯೋಜನಾ ಗಾತ್ರವನ್ನು ₹ 21,473 ಕೋಟಿಗೆ ಹಿಗ್ಗಿಸಲಾಗಿದೆ.

ಬೃಹತ್‌ ನೀರಾವರಿ ಯೋಜನೆ:

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 29.5 ಟಿಎಂಸಿ ಅಡಿ ನೀರನ್ನು ಮೀಸಲಿಡಲಾಗಿದೆ. ಇದರಲ್ಲಿ ತುಂಗಾ ನದಿಯ ಪಾಲು 17.4 ಟಿಎಂಸಿ ಅಡಿ ಹಾಗೂ ಭದ್ರಾ ನದಿಯ ಪಾಲು 12.5 ಟಿಎಂಸಿ ಅಡಿ ನೀರು. ಶಿವಮೊಗ್ಗ ತಾಲ್ಲೂಕಿನ ಗಾಜನೂರು ಸಮೀಪ ತುಂಗಾ ನದಿಗೆ ನಿರ್ಮಿಸಿದ ಜಲಾಶಯದಿಂದ ನೀರನ್ನು ಮೇಲೆತ್ತಿ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ನಾಲೆಯ ಮೂಲಕ ಹರಿದುಬರಲಿದೆ. ಈ ಕಾಮಗಾರಿ 2021ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ತುಮಕೂರು ಶಾಖಾ ಕಾಲುವೆ ಮೂಲಕ ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗೆ ನೀರು ಒದಗಿಸಲಾಗುತ್ತದೆ. ಚಿಕ್ಕಮಗಳೂರು ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇರುವುದರಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿಗೆ ನೀರು ಒದಗಿಸಲಾಗುತ್ತಿದೆ. ಈ ನಾಲೆ ನಿರ್ಮಾಣ ನಡೆಯುತ್ತಿದೆ. ಹನಿ ನೀರಾವರಿ ಮೂಲಕ 5.57 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ಬೃಹತ್ ಯೋಜನೆ ಇದಾಗಲಿದೆ.

ಹೋರಾಟ ಸಮಿತಿ ಸಂತಸ:

ಯೋಜನೆ ಜಾರಿಗಾಗಿ ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಅಂತಿಮ ಗೆಲುವು ಸಿಗುವ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿರುವುದು ಸ್ವಾಗತರ್ಹ ಎಂದು ನೀರಾವರಿ ಹೋರಾಟ ಸಮಿತಿ ಸಂತಸ ವ್ಯಕ್ತಪಡಿಸಿದೆ.

ರಾಷ್ಟ್ರೀಯ ಯೋಜನೆ ಮನ್ನಣೆ ದೊರೆಯುವುದರಿಂದ ಹಣದ ಕೊರತೆ ನೀಗುತ್ತದೆ. ಜತೆಗೆ ಕಾಮಗಾರಿ ವೇಗ

ಪಡೆದುಕೊಳ್ಳಲಿದೆ. ಹೋರಾಟ ಸಮಿತಿಯ ಆಶಯಕ್ಕೆ ಪೂರಕವಾಗಿ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಸ್ಪಂದಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರಲು ಶ್ರಮಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

***

ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಚಿತ್ರದುರ್ಗ, ತುಮಕೂರು ಜಿಲ್ಲೆಯ ಜನರ ಭಾವನೆಗೆ ಸ್ಪಂದಿಸಿದೆ. ರಾಷ್ಟ್ರೀಯ ಮಾನ್ಯತೆ ಪಡೆದ ರಾಜ್ಯದ ಮೊದಲ ನೀರಾವರಿ ಯೋಜನೆ ಆಗಲಿದೆ.

–ಎ.ನಾರಾಯಣಸ್ವಾಮಿ
ಸಂಸದ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT