ಭಾನುವಾರ, ಡಿಸೆಂಬರ್ 4, 2022
19 °C

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿಗೆ ಆಗ್ರಹ: ಸಿಎಂ ಭಾಷಣಕ್ಕೆ ಅಡ್ಡಿ, ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ (ಚಿತ್ರದುರ್ಗ): ಭೂಒಡೆತನದ ಹಕ್ಕು ಉಳಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್‌) ತಿದ್ದುಪಡಿ ಮಾಡಿ, ಇಲ್ಲವೇ ದಯಾಮರಣ ನೀಡಿ ಎಂದು ಕೋರಿ ಜನಸಂಕಲ್ಪ ಯಾತ್ರೆಯಲ್ಲಿ ಪಿಟಿಸಿಎಲ್‌ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ಆರಂಭಿಸುತ್ತಿದ್ದಂತೆ ವೇದಿಕೆಯ ಬಲಭಾಗದಲ್ಲಿದ್ದ 30ಕ್ಕೂ ಹೆಚ್ಚು ಪ್ರತಿಭಟನಕಾರರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು. ಮುಜುಗರಕ್ಕೆ ಒಳಗಾದ ಬಿಜೆಪಿ ಮುಖಂಡರು ಸಮಾಧಾನಪಡಿಸಲು ಯತ್ನಿಸಿ ವಿಫಲರಾದರು. ಭಾಷಣ ಮುಗಿಸಿದ ಬಳಿಕ ಮುಖ್ಯಮಂತ್ರಿ ಪ್ರತಿಭಟನಕಾರರ ಬಳಿಗೆ ಧಾವಿಸಿ ಸಮಸ್ಯೆ ಆಲಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಭೂಮಿಹಕ್ಕು ನೀಡಿದ ಪಿಟಿಸಿಎಲ್‌ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ದಲಿತ ಸಮುದಾಯದ ಭೂಮಿ ಹಕ್ಕು ಸಂರಕ್ಷಣೆಗೆ ಗಂಡಾಂತರ ಒದಗಿದೆ. ಕಾಯ್ದೆಯ ಮೂಲ ಆಶಯವನ್ನು ನ್ಯಾಯಾಲಯ ಕೂಡ ರಕ್ಷಣೆ ಮಾಡುತ್ತಿಲ್ಲ. ಇದರಿಂದ ದಲಿತರ ಭೂಮಿ ಹಕ್ಕಿಗೆ ಚ್ಯುತಿ ಉಂಟಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ‘ಪರಿಶಿಷ್ಟ ಜಾತಿ ಮತ್ತು ಪಂಗಡದ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಾಗುವುದು. ಸರ್ಕಾರದ ಮೇಲೆ ಭರವಸೆ ಇಡಿ’ ಎಂದು ಮನವಿ ಮಾಡಿದರು.

   ಬಡ ದಲಿತರ ಹಿತಕಾಪಾಡುವ ಉದ್ದೇಶದಿಂದ ಈ ಕಾಯ್ದೆ ರೂಪಿಸಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶ ತೋರಿಸಿ ಜಮೀನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕು.

ಸಿ.ಶಾಂತಕುಮಾರ್‌, ಅಧ್ಯಕ್ಷರು, ಪಿಟಿಸಿಎಲ್‌ ಹೋರಾಟ ಸಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು